ರೈಲ್ವೆ ವಿಧ್ವಂಸಕ ಕೃತ್ಯ ತುರ್ತು ಕ್ರಮ ಅಗತ್ಯ
ದೇಶಾದ್ಯಂತ ೫೦ ದಿನಗಳಲ್ಲಿ ೧೮ ರೈಲುಗಳು ಹಳಿತಪ್ಪಿವೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಷಷ್ಟವಾಗಿಲ್ಲ. ಉಗ್ರವಾದಿಗಳ ವಿಧ್ವಂಸಕ ಕೃತ್ಯವೂ ಇರಬಹುದು ಎಂಬ ಅನುಮಾನ ಆರಂಭವಾಗಿದೆ. ಅಲ್ಲದೆ ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯ ಇರಬಹುದೇ ಎಂಬ ಶಂಕೆಯೂ ಇದೆ. ಸಿಬ್ಬಂದಿಯಲ್ಲಿ ದೋಷವಿದ್ದಲ್ಲಿ ರೈಲ್ವೆ ಮಂಡಳಿ ಕೂಡಲೇ ಕ್ರಮ ಕೈಗೊಳ್ಳಬೇಕು. ಹೊರಗಿನ ಶಕ್ತಿಗಳ ಕೈವಾಡವಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೊಲೀಸ್ ಪಡೆ ಮತ್ತು ಗೃಹ ಖಾತೆ ಎಚ್ಚರವಹಿಸಬೇಕು. ವಿಧ್ವಂಸಕ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಬೇಕು. ಇದಕ್ಕೆ ಈಗಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ರೈಲ್ವೆ ಪ್ರಯಾಣ ಅಪಾಯಕಾರಿ ಎಂಬ ಭಾವನೆ ಜನರಲ್ಲಿ ಮೂಡುವುದು ಸಹಜ. ದೇಶದಲ್ಲಿ ಒಟ್ಟು ೧,೨೬,೩೬೬ ಕಿ.ಮೀ. ರೈಲುಮಾರ್ಗವಿದೆ. ೭,೩೩೫ ರೈಲುಗಳು ಸಂಚರಿಸುತ್ತವೆ. ಪ್ರತಿದಿನ ಲಕ್ಷಾಂತರ ಜನ ಸಂಚರಿಸುತ್ತಾರೆ. ಈಗ ವಂದೇ ಭಾರತ್ ರೈಲು ಸೇರಿದಂತೆ ಎಲ್ಲ ಕಡೆ ಹೊಸ ರೈಲುಗಳು ಚಾಲನೆಗೆ ಬಂದಿವೆ. ಮುಂದಿನ ದಿನಗಳಲ್ಲಿ ಬುಲೆಟ್ ರೈಲು ಬರಲಿದೆ. ಇಂಥ ಸಂದರ್ಭದಲ್ಲಿ ಉಗ್ರವಾದಿಗಳು ರೈಲ್ವೆ ಸಿಗ್ನಲ್ ಬದಲಿಸುವುದು, ಹಳಿ ಮೇಲೆ ಬಂಡೆ, ಅಡುಗೆ ಅನಿಲ ಸಿಲಿಂಡರ್, ಕಬ್ಬಿಣದ ರಾಡ್, ಮರದ ದಿಮ್ಮಿ ಇಡುವುದು ಸೇರಿದಂತೆ ಹಲವು ಕೃತ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಬಗ್ಗೆ ಎಚ್ಚರವಹಿಸುವುದಲ್ಲದೆ ಉಗ್ರವಾದಿಗಳ ಬಂಧನಕ್ಕೆ ಮುಂದಾಗುವುದು ಮುಖ್ಯ, ಈ ವಿಷಯದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಸಹಕರಿಸುವುದು ಬಹಳ ಮುಖ್ಯ. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಪಾಕ್‌ನಿಂದ ಬಂದವರು ಕಳೆದ ೧೦ ವರ್ಷಗಳಿಂದ ಇಲ್ಲೇ ವಾಸವಿದ್ದಾರೆ ಎಂದರೆ ಸ್ಥಳೀಯ ಪೊಲೀಸರು ಏನು ಕೆಲಸ ಮಾಡುತ್ತಿದ್ದರು ಎಂಬುದು ತಿಳಿಯುತ್ತಿಲ್ಲ. ಬೆಂಗಳೂರು ನಗರ ಉಗ್ರರಿಗೆ ಅಡಗುತಾಣವಾಗಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಜನ ಮುಕ್ತವಾಗಿ ಸಂಚರಿಸುವಂತಾಗಬೇಕು ಎಂದು ರೈಲು ವ್ಯವಸ್ಥೆ ಮಾಡಿದ್ದೇವೆ. ಇದರ ದುರುಪಯೋಗ ಆಗಬಾರದು. ದೆಹಲಿಯಲ್ಲಿರುವ ಎನ್‌ಐಎ ಅವರಿಗೆ ಬೆಂಗಳೂರಿನ ಮೂಲೆಯಲ್ಲಿ ಅವಿತುಕೊಂಡಿರುವ ಉಗ್ರರ ಬಗ್ಗೆ ಮಾಹಿತಿ ತಿಳಿಯುತ್ತದೆ. ನಮ್ಮ ಸ್ಥಳೀಯ ಪೊಲೀಸರಿಗೆ ತಿಳಿಯುವುದಿಲ್ಲ ಎಂದರೆ ನಂಬಲು ಸಾಧ್ಯವಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ. ಇಂದಿನ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ದುಷ್ಕರ್ಮಿಗಳನ್ನು ಕಂಡುಹಿಡಿಯುವುದು ಕಷ್ಟವೇನಲ್ಲ.
ನಮ್ಮ ಸೇನೆಯನ್ನು ಬಲಪಡಿಸಿದ ಮೇಲೆ ಪಾಕ್ ಮತ್ತಿತರ ದೇಶಗಳಿಗೆ ನೇರವಾಗಿ ಯುದ್ಧ ಮಾಡುವ ಮಾನಸಿಕ ಸ್ಥೈರ್ಯವಿಲ್ಲ. ಅದಕ್ಕಾಗಿ ಉಗ್ರವಾದಿಗಳನ್ನು ಬಾಂಗ್ಲಾ, ಮ್ಯಾನ್ಮಾರ್ ಮೂಲಕ ಭಾರತಕ್ಕೆ ನುಸುಳುವಂತೆ ಮಾಡಿ ಅವರಿಗೆ ನಮ್ಮ ದೇಶದ ರೈಲು ವ್ಯವಸ್ಥೆಯನ್ನು ಹದಗೆಡಿಸಲು ಸೂಚನೆ ನೀಡಲಾಗುತ್ತಿದೆ. ಇದನ್ನು ನಮ್ಮ ಗುಪ್ತಚರ ಪಡೆ ಪತ್ತೆಹಚ್ಚಿದೆ. ದೇಶದಲ್ಲಿ ಅಶಾಂತಿ ಮೂಡಿಸುವ ಇಂಥ ಕೃತ್ಯಗಳನ್ನು ಮೂಲದಲ್ಲೇ ಚಿವುಟಿ ಹಾಕುವುದು ಅಗತ್ಯ. ಒಂದು ಕಡೆ ಉಗ್ರರ ದಮನ ಮತ್ತೊಂದು ಕಡೆ ರೈಲುಗಳ ಸಂಚಾರಕ್ಕೆ ಸುರಕ್ಷಿತ ಕ್ರಮ ಕೈಗೊಳ್ಳುವುದು ಅಗತ್ಯ. ರೈಲು ಅಪಘಾತ ತಪ್ಪಿಸಲು `ಕವಚ' ಹೊಸ ಉಪಕರಣ ಅಳವಡಿಸುವ ಕೆಲಸ ನಡೆದಿದೆ. ಇದು ದುಬಾರಿ ಆಗಿರುವುದರಿಂದ ಹಂತಹಂತವಾಗಿ ಅಳವಡಿಸಬೇಕಾಗಿ ಬಂದಿದೆ. ಒಂದು ಕವಚಕ್ಕೆ ೧೭ ಕೋಟಿ ರೂ. ವೆಚ್ಚ ಮಾಡಬೇಕು. ಈಗ ೧೫೦೦ ಕಿಮೀ ಮಾರ್ಗದಲ್ಲಿ ೭೭ ರೈಲುಗಳಿಗೆ ಹಾಗೂ ೧೩೫ ರೈಲು ನಿಲ್ದಾಣಗಳಿಗೆ ಈ ಕವಚದ ರಕ್ಷಣೆ ಒದಗಿಸಲಾಗಿದೆ. ಇದರೊಂದಿಗೆ ನಮ್ಮ ಸಿಗ್ನಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸುವ ಅಗತ್ಯವಿದೆ. ಈಗ ಎಐ ತಂತ್ರಜ್ಞಾನ ಆಧರಿತ ಸಿಗ್ನಲ್ ವ್ಯವಸ್ಥೆ ಬಂದಿದೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಅಪಘಾತದಲ್ಲಿ ಸಿಗ್ನಲ್ ಚೆನ್ನಾಗಿಯೇ ಇತ್ತು. ರೈಲು ಬರುವುದಕ್ಕೆ ಮುನ್ನ ಯಾರೋ ಸಿಗ್ನಲ್ ಬದಲಿಸಿರುವುದು ಕಂಡುಬಂದಿದೆ. ಒಮ್ಮೆ ಹಾಕಿದ ಸಿಗ್ನಲ್ ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವಾಗದಂತೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಹೆಚ್ಚಿನ ಹಣ ಹೂಡುವ ಅಗತ್ಯವಿದೆ. ರೈಲ್ವೆ ನಿಲ್ದಾಣಗಳಲ್ಲಿ ಒಂದು ಮಾರ್ಗದಲ್ಲಿ ಗೂಡ್ಸ್ ಗಾಡಿ ನಿಂತಿರುತ್ತದೆ. ಪ್ರಯಾಣಿಕರ ರೈಲು ಸುರಕ್ಷಿತವಾಗಿ ಹಾದು ಹೋಗಲು ಸಿಗ್ನಲ್ ನೀಡಿದ್ದರೂ ಕೊನೆಗಳಿಗೆಯಲ್ಲಿ ಬದಲಾಗಿ ನಿಂತಿದ್ದ ಗೂಡ್ಸ್ ಗಾಡಿ ಗುದ್ದಲು ಹೇಗೆ ಸಾಧ್ಯ? ಇದು ಹೊರಗಿನವರ ಕೈವಾಡ ಇಲ್ಲದೆ ನಡೆಯುವುದಿಲ್ಲ. ರೈಲ್ವೆ ಮಂಡಳಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೂ ಪ್ರಯಾಣಿಕರಿಗೆ ರಕ್ಷಣೆ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ. ಇದಕ್ಕೆ ಪಕ್ಷ ರಾಜಕಾರಣ ಅಡ್ಡಿಯಾಗಬಾರದು. ಜನಸಾಮಾನ್ಯರ ಆರ್ಥಿಕ ಬೆಳವಣಿಗೆಯಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ. ಲಕ್ಷಾಂತರ ಕುಟುಂಬಗಳು ದೇಶಾದ್ಯಂತ ರೈಲು ಸಂಚಾರದಿಂದ ಜೀವನ ನಿರ್ವಹಣೆ ಕೈಗೊಳ್ಳಲು ಸಾಧ್ಯವಾಗಿದೆ. ಇಂಥವರ ರಕ್ಷಣೆ ನಮ್ಮ ಆದ್ಯ ಕರ್ತವ್ಯ. ರೈಲು ನಮ್ಮ ದೇಶದ ಜೀವನಾಡಿ.