ಲಂಚ ಕೊಡ್ಬೇಕು ಇಲ್ಲಂದ್ರೆ ನೇಣಿಗೆ ಶರಣಾಗಬೇಕು...
ಬಳ್ಳಾರಿ: ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅಧಿಕಾರಿಗಳಿಗೆ ಲಂಚದ ಕಿರುಕುಳ ಕೊಡುತ್ತಿದ್ದಾರೆ. ಲಂಚದ ಕಿರುಕುಳಕ್ಕೆ ಬೇಸತ್ತು ರಾಜ್ಯದ ಅಧಿಕಾರಿಗಳು ನೇಣಿಗೆ ಶರಣಾಗುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಸಂಡೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಕ್ಷೇತ್ರ ಗೆಲ್ಲಲು ಬಿಜೆಪಿ ಜೆಡಿಎಸ್ ಕೆಲಸ ಮಾಡುತ್ತಿದೆ. ಚನ್ನಪಟ್ಟಣದಲ್ಲಿ ದೇವೆಗೌಡರ ಪ್ರಚಾರ ಬಳಿಕ ಗೇಮ್ ಚೇಂಜ್ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾದಲ್ಲಿ ಸಿಎಂ 14 ನಿವೇಶನ ನುಂಗಿ ಹಾಕಿದ್ದಾರೆ. 3-4 ಸಾವಿರ ಸೈಟ್‌ಗಳ ಹಗರಣ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿ ಯಾವ ಮುಖ ವಿಟ್ಟುಕೊಂಡು ಚುನಾವಣೆ ಪ್ರಚಾರಕ್ಕೆ ಬರುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ ಮಾಡಿದ್ದಾರೆ. ಯಾವ ಮುಖವಿಟ್ಟು ಚುನಾವಣೆ ಪ್ರಚಾರಕ್ಕೆ ಬರುತ್ತೀರಿ? ಎಂದು ಕಾಂಗ್ರೆಸ್ ನಾಯಕರ ಪ್ರಶ್ನೆ ಮಾಡಿದ ಆರ್. ಅಶೋಕ, ಈ ಸರಕಾರದಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಬರೆದು ಎಸ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾವಿನ ಭಾಗ್ಯ ಕೊಟ್ಟಿದ್ದಾರೆ. ಒಂದು ಲಂಚ ಕೊಡ್ಬೇಕು ಇಲ್ಲಂದ್ರೆ ನೇಣಿಗೆ ಶರಣಾಗಬೇಕು ಎನ್ನುವುದು ಸರಕಾರದ ಗ್ಯಾರಂಟಿಯಾಗಿದೆ. ಒಂದು ವಾರದಲ್ಲಿ ಅಬಕಾರಿ ಸಚಿವರು 18 ಕೋಟಿ ಕಲೆಕ್ಟ್ ಮಾಡಿದ್ದಾರೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ರಸ್ತೆಗೆ ಒಂದು ಪುಟ್ಟಿ ಮಣ್ಣು ಹಾಕಲು ದುಡ್ಡಿಲ್ಲ ಅಂತಾ ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮಾರ್ಯದೆ ಇಲ್ಲ. ಸ್ವತಃ ಮುಖ್ಯಮಂತ್ರಿಗಳೇ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಕುಳಿತಿದಿದ್ದಾರೆ. ಇವತ್ತಿನ ಟಿಪಿಯಲ್ಲಿ 10 ಗಂಟೆಗೆ ಲೋಕಾ ಕಚೇರಿ 12 ಗಂಟೆಗೆ ಚನ್ನಪಟ್ಟಣ ಅಂತಾ ಬಂತು. ಇದು ಪೂರ್ವ ಯೋಜಿತವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕ್ಲೀನ್ ಚಿಟ್ ಪಡೆಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಿಬಿಐ ತನಿಖೆ ನಡೆಸಿದಾಗ ಸತ್ಯಾಂಶ ಹೊರಬರಲಿದೆ. ಸಂಡೂರು ಉಪಚುನಾವಣೆಯಲ್ಲಿ ಅಧಿಕಾರಿಗಳು ಕಾಂಗ್ರೆಸ್ ಪರ ಕೆಲ್ಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ತೋರಣಗಲ್ಲು ಠಾಣೆಯ ಪೊಲೀಸ್ ಪೇದೆ ರಘುಪತಿ ಮೋದಿಯನ್ನ ಹೀಯಾಳಿಸಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಎಸ್‌ಪಿ ಅವರು ಯಾಕೆ ಕ್ರಮಕೈಗೊಂಡಿಲ್ಲ. ಬಿಜೆಪಿ ಅವರಿಗೆ ಅನುಮತಿ ಕೊಡ್ತಿಲ್ಲ. ಸಿಎಂ ಕಾರ್ಯಕ್ರಮಕ್ಕೆ ಸರ್ಕಾರಿ ಜಾಗದಲ್ಲಿ ಅನುಮತಿ ನೀಡ್ತಾರೆ. ಸಂಡೂರು ಚುನಾವಣೆಯಲ್ಲಿ ಆಡಳಿತ ಯಂತ್ರ ದುರುಪಯೋಗ ಆಗಿದೆ. ಇದೇ 8ರಂದು ರಾಜ್ಯ ಚುನಾವಣೆ ಆಯೋಗಕ್ಕೆ ದೂರು ನೀಡುವೆ. ನಮ್ಮ ಕಾರ್ಯಕರ್ತರ ಮೇಲೆ ಕೇಸ್‌ಗಳು ಹಾಕುತ್ತಿದ್ದಾರೆ. 17 ಜನ ಅಧಿಕಾರಿಗಳ ಪಟ್ಟಿಯನ್ನು ಆಯೋಗಕ್ಕೆ ಕಳುಹಿಸುತ್ತೇವೆ. ಭ್ರಷ್ಟಾಚಾರ ಪ್ರಕರಣಗಳಿಂದ ಗೆಲ್ಲುವ ವಿಶ್ವಾಸ ಕಾಂಗ್ರೆಸ್‌ಗೆ ಇಲ್ಲ. ತೆರೆದಪುಸ್ತಕ ಅಂತಾ ಹೇಳುವ ಸಿಎಂ ಇವತ್ತು ಲೋಕಾಯುಕ್ತರ ಮುಂದೆ ವಿಚಾರಣೆಗೆ ಕುಳಿತಿದ್ದಾರೆ. ವಕ್ಫ್ ಬೋರ್ಡ್ ನೋಟಿಸ್ ವಿಚಾರದಲ್ಲಿ ಸಿಎಂ ಪಾತ್ರ ಇದೆ. ಜಮೀರ್ ಅಹ್ಮದ್ ಸಿದ್ದರಾಮಯ್ಯ ಅವರ ಪರಮ ಶಿಷ್ಯ. ಬಿಜೆಪಿ ಹೋರಾಟದಿಂದ ವಕ್ಫ್ ಬೋರ್ಡ್ ನೋಟಿಸ್ ವಾಪಾಸ್ ಪಡೆಯುತ್ತಿದೆ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಎಕ್ಸಪರಿ ಆಗಿವೆ. ಉಪ ಚುನಾವಣೆ ಮುಗಿದ ಮೇಲೆ ಗ್ಯಾರೆಂಟಿ ಯೋಜನೆಗಳು ನಾಟ್ ಗ್ಯಾರೆಂಟಿ ಎಂದರು.
ವಿಜಯೇಂದ್ರ ವಿರುದ್ಧ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷದ ಹೈಕಮಾಂಡ್ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತಾರೆ. ಡಿಕೆಶಿಗೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರಿಗೆ ಅವರಿಗೆ ಬ್ರದರ್ಸ್ ಎನ್ನುತ್ತಾರೆ ಎಂದರು.