ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲಂಪಟದ ಸರಣಿ ಕೊಲೆ

02:00 AM May 17, 2024 IST | Samyukta Karnataka

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ನಡುವೆ ಹಾಗೂ ಮತದಾನದ ನಂತರ ಹುಬ್ಬಳ್ಳಿ ಪಟ್ಟಣದಲ್ಲಿ ಜರುಗಿರುವ ಇಬ್ಬರು ಯುವತಿಯರ ಬರ್ಬರ ಕೊಲೆ ಪ್ರಕರಣಕ್ಕೆ ಪ್ರೇರಣೆಯಾಗಿರುವುದು ಲಂಪಟತನವೇ ವಿನಃ ಹದಿಹರೆಯದವರಲ್ಲಿ ಸಾಮಾನ್ಯವಾಗಿ ಕಾಣುವ ಪ್ರೇಮದ ಆಕರ್ಷಣೆ ಖಂಡಿತಾ ಅಲ್ಲ ಎಂಬ ಮಾತನ್ನು ನಿರಾಕರಿಸುವುದು ಕಷ್ಟ. ಏಕೆಂದರೆ ವಿದ್ಯಾರ್ಥಿನಿ ನೇಹಾ ಹಿರೇಮಠ, ಕಾಲೇಜಿನ ಪ್ರಾಂಗಣದಲ್ಲಿರುವಾಗ ಆರೋಪಿ ಫಯಾಜ್ ಮೈಮೇಲೆ ರಾಕ್ಷಸನ ಅವತಾರವಾದಂತೆ ಚೂರಿಯಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿರುವುದು ಒಂದು ಕಡೆಯಾದರೆ, ಕೇಟರಿಂಗ್ ಉದ್ಯೋಗಿ ಅಂಜಲಿ ಅಂಬಿಗೇರ ವೀರಾಪುರ ಓಣಿಯ ನಿವಾಸದಲ್ಲಿ ಮುಂಜಾನೆ ಮಲಗಿರುವಾಗ ನುಗ್ಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ ವರ್ತನೆಯಲ್ಲಿ ಮನುಷ್ಯತ್ವಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಮನುಷ್ಯತ್ವ ಇದ್ದವರು ಅಪರಾಧ ಕೃತ್ಯ ಎಸಗಿದ ನಂತರ ಪಶ್ಚಾತ್ತಾಪದಿಂದ ಮರುಗುವುದು ಸ್ವಾಭಾವಿಕ. ಆದರೆ ಎರಡು ಪ್ರಕರಣಗಳಲ್ಲಿ ಪಶ್ಚಾತ್ತಾಪದ ಸುಳಿವೇ ಇಲ್ಲದಿರುವುದು ಇದೊಂದು ಕೀಚಕ ಮನೋಧರ್ಮದ ಕೃತ್ಯ ಎಂಬುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲವೇನೋ? ಸಹಜವಾಗಿಯೇ ಇಂತಹ ಕೊಲೆ ಪ್ರಕರಣಗಳು ಜರುಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಪ್ರದೇಶದ ಜನರಲ್ಲಿ ಭಯಭೀತಿ ತಲೆದೋರುವುದು ಸ್ವಾಭಾವಿಕ. ಈಗಿನ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಿಗೆ ಕಳವಳ ಆಗಿರುವುದು ಕೂಡಾ ಒಪ್ಪಿಕೊಳ್ಳುವ ಮಾತು. ಆಧುನಿಕ ಬದುಕಿನ ಸ್ವಾತಂತ್ರ್ಯದ ಹೆಸರಿನ ಸ್ವೇಚ್ಛಾಚಾರಕ್ಕೆ ಮರುಳಾಗಿರುವ ಯುವ ಸಮೂಹ ದಾರಿತಪ್ಪಿದ ಮಕ್ಕಳಂತೆ ಕೊಲೆ, ಸುಲಿಗೆ ಮೊದಲಾದ ಅಪರಾಧಗಳ ಕಡೆ ವಾಲುತ್ತಿರುವುದು ಸಾಮಾಜಿಕ ದೃಷ್ಟಿಯಿಂದ ದೊಡ್ಡ ಗಂಡಾಂತರ.
ಇಂತಹ ಗಂಡಾಂತರವನ್ನು ಅಕ್ಷೋಹಿಣಿ ಸಂಖ್ಯೆಯ ಪೊಲೀಸ್ ಬಲದ ಮೂಲಕ ನಿಯಂತ್ರಿಸುವುದು ಅಸಾಧ್ಯ. ಏಕೆಂದರೆ ಇದು ಮನಸ್ಸು ಹಾಗೂ ಹೃದಯದ ಪ್ರಶ್ನೆ. ಲಾಠಿಗೆ ಅರ್ಥವಾಗುವ ಪ್ರಶ್ನೆ ಇದಲ್ಲ. ಕಳವಳಕಾರಿಯಾದ ಇಂತಹ ಬೆಳವಣಿಗೆಯನ್ನು ತಡೆಗಟ್ಟಲು, ಸಮಾಜದಲ್ಲಿ ಮರೆಯಾದಂತೆ ಕಾಣುತ್ತಿರುವ ನೈತಿಕ ಮೌಲ್ಯ ಮತ್ತೆ ಅರಳುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಮಾಜದ ಎಲ್ಲಾ ಸ್ತರಗಳ ಜನರು ಕಾರ್ಯೋನ್ಮುಖರಾಗಬೇಕು. ಇದು ಒಂದು ಮನೆ ಅಥವಾ ಮನದ ಪ್ರಶ್ನೆಯಲ್ಲ. ಕೇವಲ ಹುಬ್ಬಳ್ಳಿಗೆ ಸೀಮಿತವಾಗಿರುವ ಪ್ರಶ್ನೆಯೂ ಅಲ್ಲ. ಇಡೀ ರಾಜ್ಯಕ್ಕೆ ಅಷ್ಟೇ ಅಲ್ಲ, ದೇಶಕ್ಕೂ ಅನ್ವಯವಾಗುವ ಈ ಬೆಳವಣಿಗೆಗೆ ನಿಗ್ರಹೋಪಾಯಗಳನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಧರ್ಮ ಸಂಘರ್ಷದ ಕಹಿ ಭಾವನೆಯನ್ನು ಮರೆತು ಎಲ್ಲಾ ಮಠಾಧೀಶರು ಹಾಗೂ ಸಮಾಜದ ಪ್ರಮುಖರು ಒಂದು ನೆಲೆಗೆ ಬಂದು ಅರಿವಿನ ಕಮ್ಮಟ ಪ್ರತಿ ಮೊಹಲ್ಲಾದಲ್ಲಿ ಹಾಗೂ ಬೀದಿಯಲ್ಲಿ ಮಾರ್ದನಿಗೊಳ್ಳುವಂತೆ ಮಾಡಿದರೆ ನಿಜಕ್ಕೂ ಅದೊಂದು ಬಸವಣ್ಣನವರ ಕಲ್ಯಾಣದ ಕ್ರಾಂತಿಯ ಮಾದರಿಯ ಇನ್ನೊಂದು ಕ್ರಾಂತಿ ಆಗಬಹುದು.
ಕೊಲೆ, ಸುಲಿಗೆ ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಪ್ರತಿ ಮನೆಗೂ ಪೊಲೀಸರ ಕಾವಲು ನಿಯೋಜಿಸುವುದು ಯಾವ ದೇಶದಲ್ಲೂ ಅಸಾಧ್ಯ. ಜರುಗಿರುವ ಎರಡು ಪ್ರಕರಣಗಳೂ ಕೂಡಾ ಮನೆ ಹಾಗೂ ಕಾಲೇಜಿನಲ್ಲಿ ಜರುಗಿರುವಂತಹದು. ಪೊಲೀಸರು ಇಂತಹ ವಿಚಾರದಲ್ಲಿ ಮಾಡಬಹುದಾದ ಮುನ್ನೆಚ್ಚರಿಕೆಯ ಕೆಲಸವೆಂದರೆ ಅಪರಾಧವನ್ನು ನಿಗ್ರಹಿಸುವ ಪ್ರತಿರೂಪವಾಗಿ ಸಾರ್ವಜನಿಕರ ಜೊತೆ ಸತತ ಸಂಪರ್ಕ ಇಟ್ಟುಕೊಂಡು ಆತ್ಮವಿಶ್ವಾಸ ಮೂಡುವಂತೆ ಮಾಡುವುದು. ಸಿಬ್ಬಂದಿಯ ಕೊರತೆಯೋ ಅಥವಾ ಬೇರಾವುದೋ ಕಾರಣದಿಂದ ಪೊಲೀಸರು ಇಂತಹ ಆತ್ಮವಿಶ್ವಾಸ ಮೂಡಿಸುವ ಜನಸ್ನೇಹಿ ವರ್ತನೆಯಿಂದ ದೂರ ಉಳಿದಿರಬಹುದೇನೋ? ಇದನ್ನು ಆದ್ಯತೆಯ ಕೆಲಸವಾಗಿ ಪರಿಗಣಿಸಿ ಪ್ರತಿಯೊಂದು ಮೊಹಲ್ಲಾಗಳಲ್ಲಿ ಪೊಲೀಸರ ಗಸ್ತು ಹಾಗೂ ಸಾರ್ವಜನಿಕರ ಶಿಸ್ತು ಎರಡು ಬೆರೆತಾಗ ಅಪರಾಧಿ ಮನೋಭಾವದ ಜನರಿಗೆ ಕೃತ್ಯ ಎಸಗುವ ಮುನ್ನ ಸಾಕಷ್ಟು ಸಾರಿ ಯೋಚನೆ ಮಾಡಬೇಕಾಗುತ್ತದೆ. ನಿಜ ಈ ಎರಡು ಬರ್ಬರ ಕೊಲೆಗಳನ್ನು ಕಂಡಿರುವ ಜನರು ಈ ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಎನ್‌ಕೌಂಟರ್ ಮಾಡಿ ಮುಗಿಸಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸುವುದು ಭಾವನಾತ್ಮಕವಾಗಿ ಸರಿ. ಆದರೆ ಜನತಂತ್ರ ಪದ್ಧತಿಯನ್ನು ಒಪ್ಪಿಕೊಂಡಿರುವ ಭಾರತ ದೇಶದಲ್ಲಿ ಕೋರ್ಟು ಕಚೇರಿ ಮೂಲಕ ಆರೋಪಗಳು ಸಿದ್ಧವಾದ ನಂತರ ಶಿಕ್ಷೆ ನಿರ್ಧರಿಸಬೇಕಾಗುತ್ತದೆಯೇ ವಿನಃ ಏಕಪಕ್ಷೀಯವಾಗಿ ಏನನ್ನೋ ಮಾಡಲು ಸಾಧ್ಯವಿಲ್ಲ. ಹಮ್ಮುರಬಿ ಶಾಸನದಂತೆ ಹಲ್ಲು ಮುರಿದವನ ಹಲ್ಲು ಮುರಿಯುವುದು, ಕಣ್ಣು ಕಿತ್ತವನ ಕಣ್ಣು ನಾಶಮಾಡುವ ಶಿಕ್ಷೆಯ ಪರಿಪಾಟ ಒಂದಾನೊಂದು ಕಾಲದಲ್ಲಿ ಬೇರೆ ದೇಶದಲ್ಲಿ ಜಾರಿಯಿತ್ತೇನೋ. ಆದರೆ ಅಂತಹ ಶಾಸನ ಜನತಂತ್ರ ವ್ಯವಸ್ಥೆಯಲ್ಲಿ ಜಾರಿಗೊಳಿಸುವುದು ಅಸಾಧ್ಯ. ಈ ಬೆಳವಣಿಗೆಯಲ್ಲಿ ಅಪರಾಧಿಗಳ ಮಟ್ಟ ಹಾಕಲು ಸರ್ಕಾರದ ಪಾತ್ರವನ್ನು ಸ್ಪಷ್ಟಪಡಿಸುವುದು ಸೂಕ್ತ. ನೇಹಾ ಕೊಲೆಯ ನಂತರ ಆರೋಪಿ ಫಯಾಜ್ ಕೆಲವೇ ಸಮಯದಲ್ಲಿ ಕೈವಶವಾದ. ಆದರೆ ಅಂಜಲಿ ಅಂಬಿಗೇರ ಕೊಲೆ ಆರೋಪಿ ಇನ್ನೂ ಪರಾರಿ. ಈಗಿನ ಪೊಲೀಸರಿಗಿರುವ ತಂತ್ರಜ್ಞಾನ ಬಲದ ಜಾಲದಿಂದ ಆರೋಪಿಗಳು ತಪ್ಪಿಸಿಕೊಳ್ಳುವುದು ಕಷ್ಟ. ಆದರೂ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕರಿಗೆ ಆತ್ಮವಿಶ್ವಾಸ ಮೂಡಿಸುವ ರೀತಿಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದ ಪ್ರಮುಖ ರಸ್ತೆ ಹಾಗೂ ಸ್ಥಳಗಳಲ್ಲಿ ಅಪರಾಧ ನಿಗ್ರಹದ ಅರಿವಿನ ಆಂದೋಲನ ಏರ್ಪಡಿಸುವುದು ಸೂಕ್ತ. ಇದು ಕೇವಲ ಶಿಷ್ಟಾಚಾರದ ಸಮಾರಂಭವಾಗದೇ ಜನರ ಮುಕ್ತ ಪಾಲ್ಗೊಳ್ಳುವಿಕೆಗೆ ಅವಕಾಶವಾಗಬೇಕು.
ಇನ್ನೊಂದು ಮಾತು ಈ ಎರಡು ಕೊಲೆಗಳಲ್ಲಿ ಪ್ರೇಮ ಹಾಗೂ ಕಾಮದ ಪಾವಿತ್ರ್ಯವನ್ನು ಹುಡುಕಲು ತಡಕಾಡುವುದು ಸ್ಮಶಾನದಲ್ಲಿ ಹುಸಿನಗೆಯ ಕಂಡಂತೆ. ಲಂಪಟತನ ಈ ಕೃತ್ಯಗಳಿಗೆ ಮೂಲ. ಈ ಲಂಪಟತನವೆನ್ನುವುದು ಅಲ್ಪತೃಪ್ತಿಯ, ಆದರೆ ಕಣ್ಣಿಟ್ಟವರನ್ನು ನಿರ್ನಾಮ ಮಾಡಿಯಾದರೂ ತಮ್ಮ ತೃಷೆಯನ್ನು ತೀರಿಸಿಕೊಳ್ಳುವ ಮನೋರೋಗ. ಇಂತಹ ಮನೋರೋಗ ಸಮೂಹಸನ್ನಿಯಾಗಿ ಯುವಕರಲ್ಲಿ ಹಬ್ಬಿದರೆ ರಾಜ್ಯ ಹಾಗೂ ದೇಶದ ಗತಿ ಏನಾಗಬಹುದು ಎಂಬುದನ್ನು ಆಲೋಚಿಸಿ ಕನ್ನಡ ನಾಡಿನ ಸಮಸ್ತರೂ ವಿವೇಚನೆಯ ನಿರ್ಧಾರವನ್ನು ಕೈಗೊಳ್ಳುವುದು ಯೋಗ್ಯವೂ ಹಾಗೂ ಸಮಂಜಸವಾದ ಮಾರ್ಗ.

Next Article