ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ದರೋಡೆ
ದಾವಣಗೆರೆ (ನ್ಯಾಮತಿ): ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.
ನ್ಯಾಮತಿ ಪಟ್ಟಣದ ನೆಹರು ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಶಾಖೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಮತ್ತು ಭಾನುವಾರ ಎರಡು ದಿನ ಬ್ಯಾಂಕಿಗೆ ರಜೆ ಇತ್ತು. ಈ ಅವಕಾಶ ಬಳಸಿಕೊಂಡು ಬ್ಯಾಂಕಿನ ಕಿಟಕಿ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಲಾಕರ್‌ನಲ್ಲಿದ್ದ ನಗದು ಹಣ ಮತ್ತು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಕಳ್ಳತನ ಮಾಡಿದ್ದು ಗೊತ್ತಾಗಬಾರದು ಎಂದು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ. ಬ್ಯಾಂಕಿನೊಳಗೆ ಕಳ್ಳರು ಕಾರದ ಪುಡಿ ಚೆಲ್ಲಿ ಹೋಗಿದ್ದಾರೆ. ಬ್ಯಾಂಕ್ ನೌಕರರು ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್, ನ್ಯಾಮತಿ ಪಿಐ ಎನ್.ಎಸ್.ರವಿ, ಪಿಎಸ್‌ಐ ಜಯಪ್ಪನಾಯ್ಕ, ದಾವಣಗೆರೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಹಣ ದರೋಡೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಬ್ಯಾಂಕ್‌ನವರ ಅಧಿಕೃತ ಮಾಹಿತಿಯ ನಂತರ ನಿಖರ ಮಾಹಿತಿ ಹೊರ ಬೀಳಲಿದೆ.