ಲಾಠಿ ಬಿಟ್ಟು ದೈವಕ್ಕೆ ಮಾರು ಹೋದ ಖಾಕಿ
ಬೆಳಗಾವಿ: ಅಪರಾಧ ಕೃತ್ಯಗಳು ಹೆಚ್ಚಾದಾಗ ಕೈಯಲ್ಲಿ ಲಾಠಿ ಗಟ್ಡಿಯಾಗಿ ಹಿಡಿದು ಕೆಲಸ ಮಾಡಬೇಕಾದ ಪೊಲೀಸರು ಈಗ ದೈವಕ್ಕೆ ಶರಣಾಗಿದ್ದಾರಾ…?
ಗಡಿನಾಡ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರು ನಡೆದುಕೊಂಡ ರೀತಿ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆದರೆ ಲಾಠಿ ಕೆಳಗಿಟ್ಟು ಹೋಮ ಹವನಕ್ಕೆ ಕುಳಿತರೆ ಅಪರಾಧಗಳು ಕಡಿಮೆ ಆಗುತ್ತವೆಯೇ? ಇಂತಹ ಪ್ರಶ್ನೆ ಕೇವಲ ಬೆಳಗಾವಿಗರನ್ನು ಅಷ್ಟೇ ಅಲ್ಲ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಕೂಡ ಸ್ಪಷ್ಟ.
ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಠಾಣೆಗಳಲ್ಲಿ ನಿತ್ಯ ಒಂದಿಲ್ಲೊಂದು ಗಂಭೀರ ಸ್ವರೂಪದ ಘಟನೆಗಳು ನಡೆಯುತ್ತಿವೆ. ಅವುಗಳನ್ನು ಸಮರ್ಥವಾಗಿ ಬೇಧಿಸಬೇಕಾದ ಪೊಲೀಸರು ಇಡೀ ಪ್ರಕರಣವನ್ನೇ ಹಿಂಡಿ ಹಿಪ್ಪಿ ಮಾಡುತ್ತಿದ್ದಾರೆ ಎನ್ನುವ ಮಾತುಗಳಿವೆ. ಇದೇ ಕಾರಣದಿಂದ ಗಡಿನಾಡಲ್ಲಿ ಆರೋಪಿಗಳಿಗೆ ಖಾಕಿ ಹೆದರಿಕೆ ಎನ್ನುವುದೇ ಇಲ್ಲದಾಗಿದೆ.
ಸದ್ಯ ಹೇಗಾಗಿದೆ ಎಂದರೆ, ಮಹಿಳೆಯರೇ ಗುಂಡು ಹಾರಿಸುವ ಮಟ್ಟಕ್ಕೆ ಪರಿಸ್ಥಿತಿ ಬಂದು ನಿಂತಿದೆ ಅಂದರೆ ಬೆಳಗಾವಿ ಬಿಹಾರ ಆಗುತ್ತಿದೆಯೇ ಎಂದು ಕೇಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬೆಳಗಾವಿ ಗ್ರಾಮೀಣ ಸೇರಿದಂತೆ ನಗರದ ಬಹುತೇಕ ಕಡೆಗೆ ಅಕ್ರಮ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಗೋವಾದ ಕ್ಯಾಸಿನೋ ಮಾದರಿಯಲ್ಲಿಯೇ ಮತ್ತೊಂದು ಅಡ್ಡೆ ಕೂಡ ಬೆಳಗಾವಿ
ಗ್ರಾಮೀಣ ಭಾಗದಲ್ಲಿ ತೆರೆದುಕೊಂಡಿತ್ತು. ಇದರ ಜೊತೆಗೆ ಮಟಕಾ, ಜೂಜು ಅಡ್ಡೆಗಳು ಐಸ್ಕ್ರೀಂ ಪಾರ್ಲರ್‌ಗಳಂತೆ ನಡೆಯುತ್ತಿವೆ. ಅವುಗಳನ್ನು ಹದ್ದು ಬಸ್ತಿನಲ್ಲಿಡಬೇಕಾದವರೇ ಅದಕ್ಕೆ ರಕ್ಷಕರಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.
ಲಾಠಿ ಬಿಗಿಯಾಗಲಿ…!
ಬೆಳಗಾವಿ ಪೊಲೀಸರಿಗೆ ಒಂದು ಗತ್ತು ಗೈರತ್ತು ಇದೆ. ಒಂದಾನೊಂದು ಕಾಲದಲ್ಲಿ ಚಾಕು, ತಲವಾರ ಝಳಪಿಸುತ್ತ ಇಡೀ ಬೆಳಗಾವಿಗೆ ಡಾನ್ ಎಂದು ಮೆರೆಯುತ್ತಿದ್ದವರನ್ನು ಹೆಡಮುರಿ ಕಟ್ಟಿದ ಹೆಗ್ಗಳಿಕೆ ಇಲ್ಲಿನ ಪೊಲೀಸರಿಗಿದೆ. ಅಷ್ಟೆ ಅಲ್ಲ ಕನ್ನಡ, ಮರಾಠಿಗರ ಮಧ್ಯೆ ವಿಷ ಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುವವರಿಗೆ ತಕ್ಕ ಪಾಠ ಕಲಿಸಿದ ಕೀರ್ತಿ ಕೂಡ ಪೊಲೀಸರಿಗಿದೆ.
ಆದರೆ ಈಗ ಬೆಳಗಾವಿ ಪೊಲೀಸರು ಹೋಗುತ್ತಿರುವ ದಾರಿ ಸೂಕ್ಷ್ಮವಾಗಿ ಗಮನಿಸಿದರೆ ಭಂಡರಿಗೆ ಲಾಠಿ ಏಟು ಕೊಡುವುದನ್ನು ಬಿಟ್ಟು ಹೋಮ ಹವನ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.