ಲೀಲಾ ಸಂಮೋಹನ
ಭಗವಂತನ ಲೀಲೆಯೇ ಅದ್ಭುತ. ಆತನ ಸಂತಸದ ರಸಘಳಿಗೆಯಲ್ಲಿ ಪ್ರಕೃತಿಯಲ್ಲಿ ಏನು ನಡೆದಿರುತ್ತದೆ ಎಂಬುದನ್ನು ದಾಸರು ಸುಂದರವಾಗಿ ವರ್ಣಿಸಿದ್ದಾರೆ. ಲೀಲಾವಿನೋದಿಯಾಗಿರುವ ಭಗವಂತನ ಲೀಲೆಗೆ ಒಲಿಯದವರಾರು? ಆತನ ಮುರಲಿಧ್ವನಿಗೆ ಜಗತ್ತಿನಲ್ಲಿ ಏನೇನು ನಡೆದಿದೆ ಎಂಬ ಸನ್ನಿವೇಶವನ್ನು ದಾಸರು ಸುಂದರವಾಗಿ ವರ್ಣಿಸಿದ್ದಾರೆ. ಪಶುಗಳು ತಾವು ಹುಲ್ಲು ತಿಂದರೂ ಕೂಡ ವೇಣುನಾದಕ್ಕೆ ತೊಂದರೆಯಾಗುತ್ತದೆ. ಪರಮಾತ್ಮನ ಆ ಅಪ್ರತಿಮ ಮಾಧುರ್ಯದಲಿ ಕೇಳದಂತಾಗುತ್ತದೆ ಎಂದುಕೊಂಡೇ ಹುಲ್ಲು ತಿನ್ನದೆ ಮುಚ್ಚಿದ ಬಾಯಿ ಮುಚ್ಚಿಕೊಂಡೇ ವೇಣುವಿನ ಉಲಿಯನ್ನು ಶ್ರವಣ ಮಾಡಿದವಂತೆ.
ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಏಕಾಗ್ರಮನಸ್ಸಿನಿಂದ ತಪಸ್ಸಿನಲ್ಲಿ ತೊಡಗಿದ್ದ ಋಷಿಮುನಿಗಳು ಕೂಡ ಮೈಮರೆತು ಕುಣಿದಾಡಿದರಂತೆ. ಸಾಗರದಂತೆ ಗಂಭೀರವಾಗಿರುವ ಋಷಿಗಳು ಕೂಡ ತಮ್ಮ ಗಾಂಭೀರ್ಯವನ್ನು ಮರೆತು; ತಮ್ಮ ಋಷಿತ್ವ ಯೋಗಿತ್ವಗಳ ಸ್ಥಾನಮಾನಗಳನ್ನು ಮರೆತು, ಯಾವುದೇ ರೀತಿಯ ಸಂಕೋಚವಿಲ್ಲದಂತೆ ಭಕ್ತಿಪರವಶರಾಗಿ ಭಗವಂತನ ಗುಣಗಳ ಚಿಂತನೆಗಳಲ್ಲಿ ತನ್ಮಯರಾಗಿ ಕುಣಿದಾಡಿದರಂತೆ.
ವೆಂಕಟೇಶದೇವರ ವಿವಾಹದ ವಾರ್ತೆಯನ್ನು ಕೇಳಿದ ವಿರಾಗಮೂರ್ತಿಯಾದ ವಿರಕ್ತಶಿಖಾಮಣಿಗಳಾದ ಶುಕಾಚಾರ್ಯರು ನರ್ತನ ಮಾಡಿದರಂತೆ. ಪ್ರಪಂಚದ ಯೋಗಿಸಮೂಹವೇ, ಯೋಗಿಪ್ರಪಂಚವೇ ನರ್ತನ ಮಾಡಿತಂತೆ. ಇದು ಶ್ರೀಕೃಷ್ಣಪರಮಾತ್ಮನ ಆಕರ್ಷಣೆ ಇದು. ಶ್ರೀಕೃಷ್ಣಪರಮಾತ್ಮನ ಅದ್ಭುತವಾದ ಪ್ರೇರಕ ಶಕ್ತಿಯಿದು. ಭಾಗವತ ತಾತ್ಪರ್ಯದಲ್ಲಿ ಶ್ರೀದೇವಿ ವೇಣುಮಾವಿಷ್ಯ ಎಂದು ಹೇಳುತ್ತಾರೆ. ಇದರ ಅರ್ಥ ಶ್ರೀ ಶ್ರೀಕೃಷ್ಣಪರಮಾತ್ಮ ವೇಣುನಾದವನ್ನು ಮಾಡಿದರೆ ಆ ವೇಣುವಿನಲ್ಲಿ ಇದ್ದವರು ಯಾರು?
ದಾಸಸಾಹಿತ್ಯದಲ್ಲಿ ಕೇಳುವಾಗ, ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ನೂಕುನುಗ್ಗಲು. ದೂರದಿಂದ ನಡೆದು ಬರಬೇಕು. ಆಗಿನ ಕಾಲದಲ್ಲಿ ತುಂಬ ಸೌಕರ್ಯವಿರದೆ, ಬೆಟ್ಟ ಏರಿ ಕಷ್ಟಪಟ್ಟು ದರ್ಶನ ಮಾಡುವುದೇ ಎಷ್ಟೋ ಜನ್ಮಗಳ ಭಾಗ್ಯ. ಜನ ಮಾತ್ರ ದರ್ಶನ ಸಿಗುತ್ತದೆಯೋ ಇಲ್ಲವೋ ಎಂದು ಬರುತ್ತಿದ್ದರು. ಶ್ರೀಗಂಧ ನಾನಾಗಿ ಹುಟ್ಟಿದ್ದರೆ, ಶ್ರೀನಿವಾಸನ ಮೇಲೆ ಲೇಪನ ಮಾಡುವ ಆ ಕಸ್ತೂರಿ-ಗಂಧ-ಪಚ್ಚಕರ್ಪೂರ-ತುಳಸಿ-ಹೂವು ನಾನೇ ಆಗಿ ಹುಟ್ಟಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು, ಶ್ರೀನಿವಾಸನ ಮಹಿಮೆಯ ಮೇಲೆ ಧರಿಸುವುದಾದರೆ ಆ ಭಗವಂತನ ಸ್ಪರ್ಶದ ಭಾಗ್ಯ ನನಗೆ ಸಿಗುತ್ತಿತ್ತಲ್ಲ. ನಾನೇಕೆ ಹುಳು-ಹೂವು-ತುಳಸಿ-ಗಂಧವಾಗಿ ಹುಟ್ಟಬಾರದು ಎನ್ನುತ್ತಾರೆ ದಾಸಶ್ರೇಷ್ಠರು. ಅದರ ತಾತ್ಪರ್ಯ ಇಷ್ಟು, ಭಗವಂತನ ಸಾನ್ನಿಧ್ಯ, ಸಾಹಿತ್ಯ-ಇದು ಸೌಭಾಗ್ಯದ ಸಂಕೇತ. ಆದರೆ ನಾವು ಅರ್ಥೈಸಿಕೊಂಡಿದ್ದೇ ಬೇರೆ. ಜೀವನದ ಎಲ್ಲ ಚಟುವಟಿಕೆಗಳನ್ನು ಅಂದರೆ ಓಡಾಡುವ, ಕೇಳುವ ಹೀಗೆ ಅನೇಕ ಕ್ರಿಯೆಗಳನ್ನು ನಾವೇ ಸ್ವತಂತ್ರವಾಗಿ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದೇವೆ. ಆದರೆ ಆ ಎಲ್ಲ ಕರ್ಮಗಳ ಒಳಗೆ ಭಗವಂತನ ಪ್ರೇರಣೆ ಇದ್ದೇ ಇರುತ್ತದೆ. ಸಾಮಾನ್ಯವಾದ ಸಂಗೀತದಿಂದ ನಮಗೆ ಅಷ್ಟಾಗಿ ಆಹ್ಲಾದ ಆನಂದ ಉಂಟಾಗದು. ಪ್ರಯತ್ನಪೂರ್ವಕವಾಗಿ ಅದರೆಡೆಗೆ ಲಕ್ಷ್ಯವನ್ನು ಕೊಡಬೇಕಾಗುತ್ತದೆ. ಆದರೆ ದೇವನ ಸಂಗೀತ ಹಾಗಲ್ಲ. ಬ್ರಹ್ಮಾಂಡದ ಎಲ್ಲ ಪ್ರಕ್ರಿಯೆಗಳೂ ಆತನ ಆಜ್ಞೆಯಂತೆ ತೂಗುತ್ತವೆ ಎಂಬುದನ್ನು ತಿಳಿಯಬೇಕು
ನನ್ನಲ್ಲಿ ಏನೇ ಕ್ರಿಯೆ ಬರಬೇಕಾದರೂ ಅದು ಭಗವಂತನ ಪ್ರೇರಣೆಯಿಂದ ಎಂದು ಅಂಭ್ರಣಿ ಸೂಕ್ತದಲ್ಲಿ ಹೇಳಿದ್ದಾರೆ. ಇಂದು ಕೊಳಲುವಾದನ ಕಾರ್ಯಕ್ರಮ ಎಂದು ಎತ್ತರದ ಪೀಠದ ತುಟ್ಟತುದಿಯ ಮೇಲೆ ಒಂದು ಕೊಳಲನ್ನು ಇಟ್ಟು ಜನರನ್ನು ಗಂಟೆಗಟ್ಟಲೆ ಕೂಡಿಸಿದರೆ ಇಂತಹ ಎಷ್ಟು ಉಪವಾಸಗಳನ್ನು ಕಳೆಯಬೇಕು? ಒಬ್ಬ ಊದುವವ ಬೇಕು. ಅವನೇ ಆ ಭಗವಂತ.