For the best experience, open
https://m.samyuktakarnataka.in
on your mobile browser.

ಲೂಟಿಕೋರರ ಬಿಡೆವು ೩೭೦ ಸ್ಥಾನ ಗೆಲ್ಲುತ್ತೇವೆ

11:45 PM Feb 05, 2024 IST | Samyukta Karnataka
ಲೂಟಿಕೋರರ ಬಿಡೆವು ೩೭೦ ಸ್ಥಾನ ಗೆಲ್ಲುತ್ತೇವೆ

ನವದೆಹಲಿ: ಪ್ರತಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟರೆಲ್ಲರೂ ದಂಡ ತೆರಬೇಕು ಎಂದಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಚರ್ಚೆಯಲ್ಲಿ ಮೋದಿ ಸೋಮವಾರ ಭಾಗವಹಿಸಿ, ಸುದೀರ್ಘ ಎರಡೂವರೆ ಗಂಟೆಗಳ ಕಾಲ ಮಾತನಾಡಿದರು. ದೇಶವನ್ನು ಲೂಟಿ ಮಾಡಿದವರೆಲ್ಲ ವಾಪಸ್ ಕೊಡಲೇಬೇಕು ಎಂದಿದ್ದಾರೆ. ಈ ಬಾರಿ ಮತ್ತೆ ಬಿಜೆಪಿ ಭರ್ಜರಿ ಜಯ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಭಾರತ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷಗಳ ತಮ್ಮ ಅವಧಿಯ ಸಾಧನೆಗಳನ್ನು ಬಿಡಿಸಿಟ್ಟಿದ್ದಾರೆ.
ಮೂರನೇ ಅವಧಿಯಲ್ಲಿ ಮತ್ತೆ ತಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಇನ್ನು ಸಾವಿರ ವರ್ಷಗಳ ಭವಿಷ್ಯಕ್ಕೆ ಬುನಾದಿ ಹಾಕುವ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಕಾಂಗ್ರೆಸ್ ಮನೋಧರ್ಮವನ್ನು ಕಟುವಾಗಿ ಖಂಡಿಸಿದ ಮೋದಿ, ೧೯೫೯ರರಲ್ಲಿ ನೆಹರೂ ಕೆಂಪುಕೋಟೆಯಿಂದ ಮಾಡಿದ ಭಾಷಣದ ಸಾಲುಗಳನ್ನು ಓದಿದರು. 'ಭಾರತೀಯರಾದ ನಾವು ಕೆಲಸ ಮಾಡುವ ಹವ್ಯಾಸ ಬೆಳೆಸಿಕೊಂಡಿಲ್ಲ. ಯೂರೋಪ್, ಜಪಾನ್, ಚೀನಾ, ರಷ್ಯಾ, ಅಮೆರಿಕಾದವರಂತೆ ಕೆಲಸ ಮಾಡುವುದಿಲ್ಲ' ಎಂದು ನೆಹರೂ ಹೇಳಿದ್ದರು. ಅಂದರೆ ನೆಹರೂಜಿಯವರು ಭಾರತೀಯರು ಸೋಮಾರಿಗಳು­ ಮತ್ತು ಕಡಿಮೆ ಬುದ್ಧಿವಂತರು ಎಂದು ಭಾವಿಸಿ­ದ್ದರು ಎಂದಾಗ, ಕಾಂಗ್ರೆಸ್ ಸಂಸದರು ಘೋಷಣೆ­ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ನಿಂದ ಅನ್ಯಾಯ: ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನ್ಯಾಯ ಮಾಡಿದೆ ಎಂದ ಪ್ರಧಾನಿ ಮೋದಿ, ಶೋಷಿತ ವರ್ಗದ ನಾಯಕರನ್ನು ಅವಮಾನ ಮಾಡಿದೆ ಎಂದರು. ಕಾಂಗ್ರೆಸ್ ಸರ್ಕಾರದಲ್ಲಿ ಒಬಿಸಿಯವರು ಕೇವಲ ಬೆರಳೆಣಿಕೆಯಷ್ಟಿದ್ದರು. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿ ಅವರನ್ನು ಗೌರವಿಸಲಾಗಿದೆ. ಆದರೆ ಕಾಂಗ್ರೆಸ್ ೧೯೭೦ರಲ್ಲಿ ಕರ್ಪೂರಿ ಅವರ ಸರ್ಕಾರವನ್ನು ಅಸ್ಥಿರಗೊಳಿಸಿ ಸಿಎಂ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಿತು. ಯಾವುದೇ ಹಿಂದುಳಿದ ವರ್ಗದ ವ್ಯಕ್ತಿಯನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ ಎಂದರು.