ಲೆಬನಾನ್ ಸ್ಫೋಟ: ಭಾರತಕ್ಕೂ ಇದೆ ಪಾಠ
ಇತ್ತೀಚೆಗೆ ಲೆಬನಾನ್ ಎರಡು ದಿನಗಳಲ್ಲಿ ಎರಡು ದಾಳಿಗಳಿಗೆ ತುತ್ತಾಯಿತು. ಸೆಪ್ಟೆಂಬರ್ ೧೮, ಬುಧವಾರದಂದು ಲೆಬನಾನಿನ ಶಿಯಾ ಮುಸ್ಲಿಂ ರಾಜಕೀಯ ಗುಂಪು ಮತ್ತು ಅರೆಮಿಲಿಟರಿ ಪಡೆಯಾದ ಹೆಜ್ಬೊಲ್ಲಾ ಸಂಘಟನೆಯ ಸಿಬ್ಬಂದಿಗಳು ಬಳಸುತ್ತಿದ್ದ ವಾಕಿಟಾಕಿಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು, ಕನಿಷ್ಠ ೨೦ ಜನರು ಸಾವಿಗೀಡಾಗಿ, ೪೫೦ ಜನ ಗಾಯಗೊಂಡರು. ಇದರ ಹಿಂದಿನ ದಿನ ದೇಶಾದ್ಯಂತ ನಡೆದ ಪೇಜರ್ ಸ್ಫೋಟಗಳಲ್ಲಿ ಮಕ್ಕಳೂ ಸೇರಿದಂತೆ ೧೨ ಜನರು ಸಾವನ್ನಪ್ಪಿ, ಸಾವಿರಾರು ಜನರು ಗಾಯಾಳುಗಳಾದರು.
ಇಸ್ರೇಲ್ ರಕ್ಷಣಾ ಸಚಿವರು ಈ ಪರಿಸ್ಥಿತಿಯನ್ನು `ಯುದ್ಧತಂತ್ರದ ಹೊಸ ಯುಗ' ಎಂದು ಕರೆದು, ಈ ಅನಿರೀಕ್ಷಿತ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು. ರಕ್ಷಣಾ ಸಚಿವ ಯೊಆವ್ ಗ್ಯಾಲೆಂಟ್ ಅವರು ಈಗ ನಮ್ಮ ಗಮನ ಉತ್ತರ ದಿಕ್ಕಿಗೆ ತಿರುಗುತ್ತಿದೆ ಎಂದಿದ್ದು, ಅವರು ಲೆಬನಾನ್ ಗಡಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಭಾರತೀಯ ಸೇನೆಯ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಲೆಬನಾನಿನ ಬೆಳವಣಿಗೆಗಳು ಹೊಸ ರೀತಿಯ ಯುದ್ಧತಂತ್ರದ ಆರಂಭದ ಸಂಕೇತವಾಗಿದೆ ಎಂದಿದ್ದಾರೆ. ದೂರವಾಣಿ ಸಂವಹನವನ್ನು ಸುಲಭವಾಗಿ ತಿಳಿಯಬಹುದಾಗಿದ್ದು, ಅವುಗಳು ಈಗ ಆಯುಧಗಳಾಗಿವೆ ಎಂದಿದ್ದಾರೆ. ಇದು ಆಧುನಿಕ ಯುದ್ಧಗಳ ರೀತಿ ಎಷ್ಟು ಬದಲಾಗಿದೆ ಎನ್ನುವುದನ್ನು ಸಂಕೇತಿಸುತ್ತಿದೆ.
ಏಷ್ಯಾದಿಂದ ಹೆಜ್ಬೊಲ್ಲಾ ತನಕ ಪೇಜರ್ ಪಯಣ
ಲೆಬಾನೀಸ್ ಭದ್ರತಾ ಪಡೆಗಳ ಪ್ರಕಾರ, ಮಂಗಳವಾರದಂದು ಸ್ಫೋಟಿಸಿದ ಪೇಜರ್‌ಗಳನ್ನು ಹೆಜ್ಬೊಲ್ಲಾ ಇತ್ತೀಚೆಗೆ ಖರೀದಿಸಿತ್ತು. ಅಮೆರಿಕಾ ಮತ್ತು ಇತರ ದೇಶಗಳ ಅಧಿಕಾರಿಗಳ ಪ್ರಕಾರ, ಇಸ್ರೇಲ್ ಪ್ರತಿಯೊಂದು ಪೇಜರ್ ಒಳಗೆ, ಬ್ಯಾಟರಿಯ ಬಳಿ ದೂರದಿಂದಲೇ ಸ್ಫೋಟಿಸಬಲ್ಲ ಸ್ವಿಚ್ ಮತ್ತು ಸ್ಫೋಟಕಗಳನ್ನು ಇರಿಸಿತ್ತು.
ಪೇಜರ್ ಪೂರೈಕೆಯ ಮೂಲವನ್ನು ಅವಲೋಕಿಸಿದರೆ, ಅದರ ಪೂರೈಕೆ ಸರಪಳಿ ಏಷ್ಯಾದಿಂದ ಯುರೋಪಿಗೆ ವ್ಯಾಪಿಸಿತ್ತು. ತೈವಾನಿನ ಇಲೆಕ್ಟ್ರಾನಿಕ್ಸ್ ಸಂಸ್ಥೆಯೊಂದು ಲೆಬನಾನ್‌ನಲ್ಲಿ ಸ್ಫೋಟಗೊಂಡ ಪೇಜರ್‌ಗಳನ್ನು ಒಂದು ಸಣ್ಣ ಯುರೋಪಿಯನ್ ಕಂಪನಿ ನಿರ್ಮಿಸಿತ್ತು ಎಂದು ಬಯಲುಗೊಳಿಸಿದೆ.
ತೈವಾನ್‌ನ ಗೋಲ್ಡ್ ಅಪೋಲೋ ಸಂಸ್ಥೆಯ ಮುಖ್ಯಸ್ಥ, ಹು ಚಿಂಗ್ ಕುವಾಂಗ್ ಅವರು ಸ್ಫೋಟಗೊಂಡ ಪೇಜರ್‌ಗಳನ್ನು ನಾವು ನಿರ್ಮಿಸಿಲ್ಲ ಎಂದಿದ್ದಾರೆ. ಅವರು ಬುಡಾಪೆಸ್ಟ್ ಮೂಲದ ಬಿಎಸಿ ಕನ್ಸಲ್ಟಿಂಗ್ ಎಂಬ ಸಂಸ್ಥೆ ಅವುಗಳನ್ನು ನಿರ್ಮಿಸಿದೆ ಎಂದಿದ್ದರೂ, ಅದಕ್ಕೆ ಆಧಾರಗಳಿಲ್ಲ.
ಗೋಲ್ಡ್ ಅಪೋಲೋ ಸಂಸ್ಥೆ, ಸ್ಫೋಟಗೊಂಡಿರುವ ಪೇಜರ್‌ಗಳ ವಿನ್ಯಾಸ ಮತ್ತು ಉತ್ಪಾದನೆಗೆ ಬಿಎಸಿ ಸಂಪೂರ್ಣ ಜವಾಬ್ದಾರವಾಗಿತ್ತು ಎಂದಿದೆ. ಹು ಅವರು ನಾವು ಬಿಎಸಿ ಜೊತೆ ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದೇವೆ ಎಂದಿದ್ದರು. ಇಂತಹ ಹೇಳಿಕೆಗಳಿಂದ, ಅಂತಿಮವಾಗಿ ಹೆಜ್ಬೊಲ್ಲಾ ಕೈಸೇರಿದ ಪೇಜರ್‌ಗಳನ್ನು ವಾಸ್ತವವಾಗಿ ಯಾರು ನಿರ್ಮಿಸಿರಬಹುದು ಎಂಬ ಕುರಿತು ಹೆಚ್ಚಿನ ಅನುಮಾನಗಳು ಮೂಡಿವೆ. ಆದರೆ ಹಂಗೆರಿಯ ಅಧಿಕಾರಿಗಳು ಗೋಲ್ಡ್ ಅಪೋಲೋದ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಬುಡಾಪೆಸ್ಟ್ ಮೂಲದ ಕಂಪನಿ ಕೇವಲ ವ್ಯಾಪಾರ ಮಧ್ಯವರ್ತಿಯಾಗಿದ್ದು, ಹಂಗೆರಿಯಲ್ಲಿ ಯಾವುದೇ ಉತ್ಪಾದನಾ ಕೇಂದ್ರ ಹೊಂದಿಲ್ಲ ಎಂದಿದ್ದಾರೆ.
ನಕಲಿ ವಾಕಿಟಾಕಿಗಳ ಕುರಿತ ಅನುಮಾನ
ಐಕಾಮ್ ಎಂಬ ಜಪಾನಿನ ಸಂಸ್ಥೆ ವಾಕಿ-ಟಾಕಿ ನಿರ್ಮಾಣದಲ್ಲಿ ತನ್ನನ್ನು ಜಾಗತಿಕ ನಾಯಕ ಎಂದು ಕರೆದುಕೊಳ್ಳುತ್ತದೆ. ಆದರೆ, ಗುರುವಾರ ಹೇಳಿಕೆ ನೀಡಿದ ಐಕಾಮ್, ಲೆಬನಾನ್‌ನಲ್ಲಿ ಸ್ಫೋಟಗೊಂಡ ಮಾದರಿಯ ವಾಕಿಟಾಕಿಗಳನ್ನು ತಾನು ಹತ್ತು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದ್ದು, ತಾನು ಅಂದಿನಿಂದ ಅವುಗಳನ್ನು ಎಲ್ಲಿಗೂ ಪೂರೈಸಿಲ್ಲ ಎಂದಿದೆ.
ಐಸಿ-ವಿ೮೨ ಎನ್ನುವುದು ಕೈಯಲ್ಲಿ ಹಿಡಿಯುವ, ದ್ವಿಮುಖ ರೇಡಿಯೋ ಆಗಿದ್ದು, ೨೦೦೪ರಿಂದ ೨೦೧೪ರ ತನಕ ಮಧ್ಯ ಏಷ್ಯಾ ಸೇರಿದಂತೆ ವಿವಿಧಡೆಗಳಿಗೆ ರಫ್ತಾಗುತ್ತಿತ್ತು. ಈ ವಾಕಿಟಾಕಿಗಳ ಬ್ಯಾಟರಿಯ ಉತ್ಪಾದನೆಯೂ ಈಗ ಸ್ಥಗಿತಗೊಂಡಿದೆ ಎಂದು ಐಕಾಮ್ ಹೇಳಿದೆ. ನಕಲಿಯೋ ಅಸಲಿಯೋ ಎನ್ನಲು ವಾಕಿಟಾಕಿಗಳಲ್ಲಿ ಹಾಲೋಗ್ರಾಮ್ ಇಲ್ಲದುದರಿಂದ, ಅವುಗಳು ಐಕಾಮ್ ಪೂರೈಸಿದವೇ ಎನ್ನಲೂ ಸಾಧ್ಯವಿಲ್ಲ.
ಲೆಬನಾನಿನ ಸಂವಹನ ಸಚಿವಾಲಯ ಬುಧವಾರ ದಾಳಿಗೆ ತುತ್ತಾದ ವಾಕಿಟಾಕಿಗಳು ಹಳೆಯ, ಐಸಿ-ವಿ೮೨ ಮಾದರಿಯವಾಗಿವೆ ಎಂದಿದೆ. ಆದರೆ, ಈ ವಾಕಿಟಾಕಿಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಲಾಗಿಲ್ಲ, ಅವುಗಳು ಸೂಕ್ತ ಪರವಾನಗಿಯನ್ನು ಹೊಂದಿಲ್ಲ, ಭದ್ರತಾ ಅಧಿಕಾರಿಗಳಿಂದ ಪರಿಶೀಲಿಸಲ್ಪಟ್ಟಿಲ್ಲ ಎಂದು ಸಂವಹನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಮುಂದಿದೆ ಹೊಸ ಯುದ್ಧ ಸವಾಲುಗಳು
ಲೆಬನಾನ್ ದಾಳಿಗಳು ಹೊಸ ಬಗೆಯ ಯುದ್ಧತಂತ್ರದ ಸಂಕೇತವಾಗಿದೆ ಎಂದಿರುವ ಮಾಜಿ ಭಾರತೀಯ ಗುಪ್ತಚರ ಅಧಿಕಾರಿಯೊಬ್ಬರು `ಮಾತು ಕೇಳಿಸಿಕೊಳ್ಳುವ ದೂರವಾಣಿಗಳೂ ಈಗ ಆಯುಧಗಳಾಗಿವೆ' ಎಂದಿದ್ದಾರೆ. ಅವರ ಮಾತಿನ ಪ್ರಕಾರ, ಮೊಬೈಲ್ ಫೋನ್‌ಗಳು ಮತ್ತು ಇತರ ಸಂವಹನ ಸಾಧನಗಳನ್ನು ರಹಸ್ಯವಾಗಿ ಕದ್ದಾಲಿಸಲು ಸಾಧ್ಯ. ಅಂದರೆ, ಮಾತನಾಡುವವರ ಗಮನಕ್ಕೇ ಬಾರದಂತೆ ಅವರ ಮಾತುಗಳನ್ನು ಇನ್ನೊಬ್ಬರು ಕದ್ದಾಲಿಸಲು ಸಾಧ್ಯವಾಗುತ್ತಿದೆ.
ಈ ರೀತಿ ಪಡೆದುಕೊಳ್ಳುವ ಮಾಹಿತಿಗಳನ್ನು ಬೇಹುಗಾರಿಕೆ, ಸೂಕ್ಷ್ಮ ಮಾಹಿತಿ ಸಂಗ್ರಹಣೆ, ಅಥವಾ ಪರಿಸ್ಥಿತಿಯನ್ನು ಹಾಳುಗೆಡವುವಂತಹ ಉದ್ದೇಶಗಳಿಗೆ ಬಳಸಿಕೊಳ್ಳುವ ಅಪಾಯಗಳಿವೆ. ಈ ನಿಟ್ಟಿನಲ್ಲಿ ಗಮನಿಸಿದರೆ, ಫೋನ್‌ಗಳು ಕೇವಲ ಸಂವಹನ ಸಾಧನಗಳಾಗಿ ಉಳಿಯದೆ, ವಿಚಕ್ಷಣೆ ಮತ್ತು ಗುಪ್ತಚರ ಸಂಗ್ರಹಣೆ ನಡೆಸುವ ಯುದ್ಧತಂತ್ರದ ಉಪಕರಣಗಳಾಗಿ ಬದಲಾಗಿವೆ.
ಭವಿಷ್ಯದ ಯುದ್ಧರಂಗದಲ್ಲಿ ಮೇಲುಗೈ ಸಾಧಿಸಲು ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯ ಎಂದು ಭಾರತೀಯ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್ ಅನ್ನು ಒಂದು ತೆರೆದ ಸಮುದ್ರ ಎಂದು ಪರಿಗಣಿಸಿದರೆ, ಮುಖ್ಯ ಮಾರ್ಗಗಳ ಮೇಲೆ ನಿಯಂತ್ರಣ ಹೊಂದಿರುವವರು ಅಧಿಕಾರ ಹೊಂದುತ್ತಾರೆ. ಇದನ್ನು ನಾವು ಸೂಯೆಜ್ ಕಾಲುವೆಗೆ ಹೋಲಿಸಬಹುದು. ಸಮುದ್ರಗಳು ಮುಕ್ತವಾಗಿರಬಹುದು. ಆದರೆ, ಕಾಲುವೆಯನ್ನು ನಿಯಂತ್ರಿಸುವವರು ಜಾಗತಿಕ ಅಧಿಕಾರವನ್ನೂ ಬಹುಮಟ್ಟಿಗೆ ನಿಯಂತ್ರಿಸಬಲ್ಲರು.
ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್ ಎನ್ನುವುದು ರೇಡಿಯೋ ತರಂಗಗಳು, ಮೈಕ್ರೋವೇವ್, ಬೆಳಕು ಸೇರಿದಂತೆ, ಮಾಹಿತಿ ವೀಕ್ಷಿಸಲು, ರವಾನಿಸಲು ಮತ್ತು ಸಂವಹನ ನಡೆಸಲು ನೆರವಾಗುವ ಎಲ್ಲ ರೀತಿಯ ಶಕ್ತಿಯ ಕಿರಣಗಳನ್ನು ಒಳಗೊಂಡಿದೆ. ಈ ಸ್ಪೆಕ್ಟ್ರಮ್ ಮೇಲೆ ನಿಯಂತ್ರಣ ಸಾಧಿಸುವುದೆಂದರೆ, ಈ ತರಂಗಗಳನ್ನು ಹೇಗೆ ಬಳಸುವುದು ಎನ್ನುವುದರ ಮೇಲಿನ ನಿಯಂತ್ರಣವೂ ಆಗಿದ್ದು, ತಂತ್ರಜ್ಞಾನ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಮಾಜಿ ಹಿರಿಯ ಮಿಲಿಟರಿ ಅಧಿಕಾರಿ ಕರ್ನಲ್ ಭಕ್ಷಿ ಅವರು ಯುದ್ಧತಂತ್ರ ಹೇಗೆ ಬದಲಾಗಿದೆ ಎಂದು ವಿವರಿಸಲು ರಷ್ಯಾದ ಉದಾಹರಣೆ ನೀಡಿದ್ದಾರೆ. ರಷ್ಯಾ ಗ್ರೆನೇಡ್, ಮೆಷಿನ್ ಗನ್‌ಗಳಂತಹ ಸಾಂಪ್ರದಾಯಿಕ ಆಯುಧಗಳ ಬದಲಿಗೆ ಶತ್ರುವಿನ ಅಂಗಳಕ್ಕೆ ಸ್ಫೋಟಕಗಳನ್ನು ಒಯ್ಯಲು ಡ್ರೋನ್‌ಗಳನ್ನು ಬಳಸಿದೆ. ಕರ್ನಲ್ ಭಕ್ಷಿಯವರ ಪ್ರಕಾರ, ಭವಿಷ್ಯದ ಯುದ್ಧಗಳು ಸಾಂಪ್ರದಾಯಿಕ ಯುದ್ಧರಂಗದಲ್ಲಿ ನಡೆಯುವುದಿಲ್ಲ. ಬದಲಿಗೆ, ಅವುಗಳು ತೆರೆಮರೆಯ ಹಿಂದೆ ನಡೆಯಲಿವೆ. ಅಲ್ಲಿ ರಹಸ್ಯ ಕಾರ್ಯಾಚರಣೆಗಳು ಮತ್ತು ತಾಂತ್ರಿಕ ಕಾರ್ಯತಂತ್ರಗಳ ಮೇಲೆ ಅವಲಂಬನೆ ಹೆಚ್ಚಾಗಲಿದೆ.
ವಿದೇಶೀ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್‌ಗಳ ಮೇಲೆ ಹೆಚ್ಚಿನ ಅವಲಂಬನೆ ಭಾರತಕ್ಕೆ ಮಾತ್ರವಲ್ಲದೆ, ಜಾಗತಿಕವಾಗಿ ಅಪಾಯಕಾರಿಯಾಗಬಹುದು ಎಂದು ಕರ್ನಲ್ ಅಭಿಪ್ರಾಯ ಪಟ್ಟಿದ್ದಾರೆ. ಗೂಗಲ್‌ನಂತಹ ಸಂಸ್ಥೆಯ ಸೇವೆ ಕೇವಲ ೩-೪ ಗಂಟೆಗಳು ಸ್ಥಗಿತಗೊಂಡರೂ ಜಗತ್ತಿನಾದ್ಯಂತ ಆತಂಕ ಉಂಟಾಗಬಹುದು. ಜನರು ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬನೆ ಹೊಂದಿದಾಗ ಅದನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಿದರೆ ಜನರು ತಬ್ಬಿಬ್ಬಾಗುತ್ತಾರೆ ಎನ್ನುತ್ತಾರೆ ಕರ್ನಲ್ ಭಕ್ಷಿ. ಕೆಲವು ವರ್ಷಗಳ ಹಿಂದೆ, ಮುಂಬೈಯಲ್ಲಿ ಭಾರೀ ವಿದ್ಯುತ್ ವ್ಯತ್ಯಯ ತಲೆದೋರಿತ್ತು. ಡೆಲ್ಲಿಯಲ್ಲಿ ಆಸ್ಪತ್ರೆಗಳು ಹ್ಯಾಕ್ ಆಗಿ, ಮೂರು ದಿನಗಳ ಕಾಲ ರೋಗಿಗಳ ಮಾಹಿತಿ ಅಥವಾ ಅವರ ವೈದ್ಯಕೀಯ ಹಿನ್ನಲೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಿರುವಾಗ, ಎಲ್ಲವೂ ಡೇಟಾ ಮೇಲೆ ಅವಲಂಬಿತವಾಗಿರುವ ದೇಶಾದ್ಯಂತ ಇಂತಹ ಪರಿಸ್ಥಿತಿ ತಲೆದೋರಿದರೆ ಏನಾಗಬಹುದು? ದೈನಂದಿನ ಕಾರ್ಯಗಳಿಂದ ಆಧಾರ್ ಕಾರ್ಡ್ ತನಕ, ಯಾರಾದರೂ ಒಟಿಪಿ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದರೆ ಬ್ಯಾಂಕ್‌ಗಳೂ ನಿಲುಗಡೆಯಾಗಬೇಕಾದೀತು. ಅದರಿಂದ ಉಂಟಾಗುವ ಅನಾಹುತಗಳು ನಿಜಕ್ಕೂ ಗಾಬರಿ ಮೂಡಿಸುತ್ತವೆ.
ಸಾಫ್ಟ್ವೇರ್ ಮೂಲಗಳು ಭಾರತಕ್ಕೆ ಅಪಾಯಕಾರಿಯೇ?
ಸೈಬರ್ ಭದ್ರತಾ ತಜ್ಞರಾದ ಸಂಜೀವ್ ಅರೋರಾ ಅವರ ಪ್ರಕಾರ, ಮಾರ್ಪಡಿಸಲ್ಪಟ್ಟ ಪೇಜರ್‌ಗಳ ಕಾರಣದಿಂದಾಗಿ ಲೆಬನಾನ್ ಸ್ಫೋಟಗಳು ಸಂಭವಿಸಿವೆ. ಯಾವುದೇ ಉತ್ಪಾದಕರು ಸಹಜವಾಗಿ ಇಂತಹ ಪೇಜರ್‌ಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ಯಾಕೆಂದರೆ, ಐಇಇಇ ಅಥವಾ ಐಇಟಿಎಫ್ ರೀತಿಯ ಸಂಸ್ಥೆಗಳು ಜಾಗತಿಕ ಮಾನದಂಡಗಳನ್ನು ವಿಧಿಸಿರುತ್ತವೆ.
ಮಾಹಿತಿ ಪರಿಶೀಲನೆ ಮತ್ತು ಬ್ಯಾಂಕಿಂಗ್‌ನಂತಹ ಸೇವೆಗಳಿಗಾಗಿ ಭಾರತದಂತಹ ದೇಶಗಳು ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬಿತವಾಗಿವೆ. ನಾವು ಯಾರಿಂದ ತಂತ್ರಜ್ಞಾನ ಖರೀದಿಸುತ್ತೇವೆ, ಎಂತಹ ತಂತ್ರಜ್ಞಾನಗಳನ್ನು ಬಳಸುತ್ತೇವೆ ಎಂಬ ಕುರಿತು ಭಾರತ ಜಾಗರೂಕವಾಗಿರುವ ಅಗತ್ಯವಿದೆ. ನಾವು ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆಯೇ? ಅಥವಾ ಸಮಸ್ಯೆ ಉಂಟುಮಾಡಬಲ್ಲ, ಮಾರ್ಪಡಿಸಲಾದ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆಯೇ?
ನಾವು ಸಂಭಾವ್ಯ ದಾಳಿಗಳು ಅಥವಾ ಲೋಪದೋಷಗಳನ್ನು ಗಮನಿಸಲು ಸೀಮಿತವಾಗದೆ, ಅಸಹಜ ಚಟುವಟಿಕೆಗಳು ಮತ್ತು ಅಸಂಗತತೆಗಳನ್ನೂ ಗಮನಿಸುವಂತಹ ಸೂಕ್ಷ್ಮ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಎಲ್ಲ ಅಸಹಜತೆಗಳನ್ನು ಗಮನಿಸುವುದರಿಂದ, ನಾವು ಸಣ್ಣಪುಟ್ಟ ಸಮಸ್ಯೆಗಳನ್ನೂ ಗುರುತಿಸಿ, ಅವುಗಳು ದೊಡ್ಡ ತೊಂದರೆಗಳಾಗದಂತೆ ತಡೆಯಬಹುದು. ಈ ವಿಶಾಲ ಕಾರ್ಯಾಚರಣಾ ವಿಧಾನದಿಂದ ಯಾವುದೂ ಕಡೆಗಣಿಸಲ್ಪಡದೆ, ಒಟ್ಟಾರೆ ಭದ್ರತಾ ವ್ಯವಸ್ಥೆ ನಂಬಿಕಾರ್ಹವಾಗುತ್ತದೆ.