ಲೈಟ್ಸ್ ಆನ್ ಕ್ಯಾಮೆರಾ ಆನ್
ದಪ್ಪಿನಾಟದ ಮಾಸ್ತರ ಕರಿಯಪ್ಪನಿಗೆ, ನೀನು ಇಲ್ಲಿರಬಾರದಿತ್ತು. ಹಾಲಿವುಡ್, ಬಾಲಿವುಡ್‌ನಲ್ಲಿ ಸಿನೆಮಾಗಳನ್ನು ನಿರ್ದೇಶಿಸಿದ್ದರೆ ನಿನ್ನ ಹೆಸರು ಅದೆಲ್ಲಿಗೆ ಮುಟ್ಟುತ್ತಿತ್ತೋ ಏನೋ ಎಂದು ಕನ್ನಾಳ್ಮಲ್ಲ ಹೇಳಿದ್ದೇ ಹೇಳಿದ್ದು ಕರಿಯಪ್ಪ ಕನಸು ಕಾಣತೊಡಗಿದ. ತಾನೊಂದು ದೊಡ್ಡ ನಿರ್ದೇಶಕನಾದಂತೆ ವರ್ತಿಸುತ್ತಿದ್ದ. ಕುರುಚಲು ಗಡ್ಡ ಬಿಟ್ಟ… ಪಕ್ಕದ ಊರಿನ ಸಂತೆಗೆ ಹೋಗಿ ಟೊಪ್ಪಿಗೆ ತೆಗೆದುಕೊಂಡು ಬಂದು ಅದನ್ನು ಕಾಯಂ ಹಾಕಿಕೊಳ್ಳುತ್ತಿದ್ದ. ರಾತ್ರಿಯೆಲ್ಲ ಕ್ಯಾಮೆರಾ ಆನ್.. ಲೈಟ್ಸ್ ಆನ್ ಅಂತ ಬಡಬಡಿಸುತ್ತಿದ್ದ. ಅದ್ಯಾಕೋ ಲೈಟು ಹಾಕು ಅಂತಿದಾನೆ ಎಂದು ಆತನ ಪತ್ನಿ ಪಟ್ ಅಂತ ಲೈಟು ಹಚ್ಚುತ್ತಿದ್ದಳು. ಇಷ್ಟೊತ್ತಿನಲ್ಲಿ ಯಾಕೆ ಲೈಟು ಅಂದಾಗ… ನೀವೇ ಹೇಳಿದಿರಲ್ಲ ಲೈಟ್ಸ್ ಆನ್ ಅಂತ ಎಂದು ಅನ್ನುತ್ತಿದ್ದಳು. ಹಾಕಿಕೊಂಡರೆ ದೊಡ್ಡ ಹೀರೋನನ್ನೇ ಹಾಕಿಕೊಂಡು ಸಿನೆಮಾ ಮಾಡಬೇಕು ಎಂದು ತಳವಾರ್ಕಂಟಿಯನ್ನು ಕರೆದುಕೊಂಡು ಬೆಂಗಳೂರು ಬಸ್ಸು ಹತ್ತಿದ. ಗಾಂಧಿನಗರದಲ್ಲಿ ಎಂಟ್ರಿ ಕೊಟ್ಟು ಅಲ್ಲಲ್ಲಿ ವಿಚಾರ ಮಾಡಿದ. ಅನೇಕರು ಕರಿಯಪ್ಪನಿಗೆ ದುಂಬಾಲು ಬಿದ್ದರು. ಸಿನೆಮಾಕ್ಕೆ ಇಷ್ಟು ಬಜೆಟ್ ಆಗುತ್ತದೆ. ನಾವು ಕಡಿಮೆಯಲ್ಲಿ ಮಾಡಿಕೊಡುತ್ತೇವೆ. ನೀವೇನೂ ಚಿಂತೆ ಮಾಡಬೇಡಿ. ಹಣ ಸಜ್ಜಾದ ಕೂಡಲೇ ನಮಗೆ ತಿಳಿಸಿ ಮುಂದಿನದೆಲ್ಲ ನಮಗೆ ಬಿಡಿ ಎಂದು ಹೇಳಿದರು. ಕರಿಯಪ್ಪ ಅವರ ಮಾತಿಗೆ ಭಯಂಕರ ಇಂಪ್ರೆಸ್ ಆದ. ಊರಿಗೆ ಬಂದಾಕ್ಷಣ ಹೊಲ ಮಾರಾಟಕ್ಕೆ ಹಚ್ಚಿದ. ಮನೆಯಲ್ಲಿ ಬೈಯ್ದಾಗ… ಅಯ್ಯೋ ನನ್ನ ಸಿನೆಮಾ ಹಿಟ್ ಆದರೆ ಇಂತಹ ನೂರಾರು ಎಕರೆ ಹೊಲ ತೆಗೆದುಕೊಳ್ಳಬಹುದು ಎಂದು ಹೇಳಿದ. ಅವತ್ತೊಂದಿನ ಕಿವುಡನುಮಿಗೆ ನೀನು ನನ್ನ ಸಿನೆಮಾದ ಹೀರೋಯಿನ್ ಆಗು ಅಂದ. ಆಕೆ ಹೀರೋಯಿನ್ ಪದವನ್ನು ತಪ್ಪಾಗಿ ತಿಳಿದುಕೊಂಡು ತನ್ನ ಅಣ್ಣ-ತಮ್ಮಂದಿರಿಗೆ ಹೇಳಿದಳು. ಅವರೆಲ್ಲ ಬಂದು ಕರಿಯಪ್ಪನ ಜತೆ ಜಗಳ ಮಾಡಿದರು. ಇವರ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದ. ಅಷ್ಟರಲ್ಲಿ ಹೊಲ ಮಾರಾಟವಾಯಿತು. ಮತ್ತೆ ಬೆಂಗಳೂರಿಗೆ ತೆರಳಿ ಹಣ ಸಜ್ಜಾಗಿದೆ ಅಂದಾಗ… ಡೋಂಟ್‌ವರಿ ಎಂದು ಅದಕ್ಕೆ ಬೇಕು.. ಇದಕ್ಕೆ ಬೇಕು ಎಂದು ಕರಿಯಪ್ಪನ ಹತ್ತಿರ ಹಣ ಇಸಿದುಕೊಂಡು ಕಳಿಸಿದರು. ಮರುದಿನ ಅವರಿಗೆ ಕಾಲ್ ಮಾಡಿದರೆ ಅವರ ಫೋನು ಸ್ವಿಚ್ಡಾಫ್ ಆಗಿತ್ತು. ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಕೊನೆಗೆ ಸಿನೆಮಾದ ಸಹವಾಸವೇ ಮಾಡಲ್ಲ ಎಂದು ಊರವರ ಎದುರಿಗೆ ಶಪಥ ಮಾಡಿದ. ಕರಿಯಪ್ಪ ಈಗ ಮತ್ತೆ ಮೊದಲಿನಂತೆ ದಪ್ಪಿನ ಆಟ ಕಲಿಸಲು ಮುಂದಾಗಿದ್ದಾನೆ.