ಲೋಕಾಯುಕ್ತ ದಾಳಿ: ₹ 9 ಲಕ್ಷ ಹಣವನ್ನು ಗಂಟು ಕಟ್ಟಿ ಮನೆಯಿಂದ ಹೊರಗೆಸೆದ ಅಧಿಕಾರಿ
12:53 PM Nov 12, 2024 IST | Samyukta Karnataka
ಹಾವೇರಿ : ರಾಜ್ಯಾದಾದ್ಯಂತ ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್ ನೀಡಿದ್ದಾರೆ. ನಗರದಲ್ಲಿರುವ ಬಸವೇಶ್ವರನಗರದ 1 ನೇ ಕ್ರಾಸ್ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ನಸುಕಿನಲ್ಲಿ ಅಧಿಕಾರಿಗಳ ತಂಡ ಬಾಗಿಲು ಬಡಿದಿತ್ತು. ಅವರನ್ನು ನೋಡಿ ಗಾಬರಿಗೊಂಡ ಕಾಶಿನಾಥ್, ಕೊಠಡಿಗೆ ಹೋಗಿ 9 ಲಕ್ಷ ನಗದಿನ ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದರು. ಬಾಗಿಲು ತೆರೆಸಿ ನಂತರ ಒಳಗೆ ಬಂದ ಅಧಿಕಾರಿಗಳು, ಗಂಟು ಪತ್ತೆ ಮಾಡಿದ್ದಾರೆ. ₹ 2 ಲಕ್ಷ ನಗದು ಬೆಡ್ ಮೇಲೆಯೇ ಸಿಕ್ಕಿದೆ. ಜೊತೆಗೆ ಒಟ್ಟು ₹ 14 ಲಕ್ಷ ಪತ್ತೆಯಾಗಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.