For the best experience, open
https://m.samyuktakarnataka.in
on your mobile browser.

ಲೋಕ ಕಾಳಗದ ಕಥಾವಸ್ತು ಮೋದಿ ಬೇಕಾ? ಸಾಕಾ?

01:30 AM Mar 11, 2024 IST | Samyukta Karnataka
ಲೋಕ ಕಾಳಗದ ಕಥಾವಸ್ತು ಮೋದಿ ಬೇಕಾ  ಸಾಕಾ

ಇದೇನಿದು ಸ್ವತಂತ್ರ ಭಾರತ ಆಯ್ದುಕೊಂಡ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯೇ ಅಥವಾ ಅಮೆರಿಕಾ ಸಂಯುಕ್ತ ಸಂಸ್ಥಾನದಂತಹ ೨ ಶತಮಾನಗಳಷ್ಟು ಹಳೆಯದಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯೇ? ೧೯೪೭ರಿಂದ ೧೯೬೨ರವರೆಗೆ ಹಾಗೂ ೧೯೭೧ರಿಂದ ೧೯೮೦ರವರೆಗಿನ ಲೋಕಸಭಾ ಚುನಾವಣೆಗಳವರೆಗೂ ಇಂತಹದ್ದೇ ವಾತಾವರಣ ಸೃಷ್ಟಿಯಾಗಿತ್ತು.
ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಜರುಗಿದ ಸಾರ್ವತ್ರಿಕ ಚುನಾವಣೆಗಳ ಪೈಕಿ ಮೊದಲ ಮೂರು ಬಾರಿ ಅಂದಿನ ಯುಗಪುರುಷ' ಜವಾಹರಲಾಲ್ ನೆಹರೂ ವಿರುದ್ಧ ಇತರರು ಹಾಗೂ ತದನಂತರದ ಮೂರು ಚುನಾವಣೆಗಳಲ್ಲಿ ನೆಹರೂ ಪುತ್ರಿ ಹಾಗೂಮಹಾನಾಯಕಿ' ಇಂದಿರಾಗಾಂಧಿ ವಿರುದ್ಧ ಇತರರು ಎಂಬ ಪ್ರಶ್ನೆಯಿಟ್ಟುಕೊಂಡೇ ಜನಮತಗಣನೆ ನಡೆದಿದ್ದವು. ನೆಹರೂ ಮತ್ತು ಇಂದಿರಾಜಿ ಉಚ್ಛ್ರಾಯದ ದಿನಗಳಲ್ಲಿ ಅವರಿಗೆ ಪರ್ಯಾಯ ಆಯ್ಕೆಯೇ ಯಾರೂ ಇಲ್ಲವೆಂಬಂತಹ ರಾಜಕೀಯ ರಂಗಭೂಮಿಕೆ ನಿರ್ಮಾಣಗೊಂಡಿತ್ತು. ಅಂತಹ ಸನ್ನಿವೇಶದಲ್ಲಿ ಜರುಗಿದ ಚುನಾವಣೆಗಳೆಲ್ಲದರಲ್ಲೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪರವೇ ಪ್ರಚಂಡ ಜನಾದೇಶ ಪ್ರಕಟಗೊಂಡು ಸ್ವತಂತ್ರ ಬಹುಮತದಿಂದ ಗೆದ್ದು ಬರಬಹುದಾದ ಪ್ರತಿಪಕ್ಷವೊಂದರ ಆಗಮನವೇ ಅಸಾಧ್ಯವೆನಿಸಿತ್ತು.
ಇಂತಹ ಏಕಪಕ್ಷೀಯ ಆಧಿಪತ್ಯದ ಹಾಗೂ ದುರ್ಬಲ ಪ್ರತಿಪಕ್ಷಗಳ ನಡುವಿನ ಅಸಮಾನ ಸ್ಪರ್ಧೆಯ ನಡುವೆಯೂ ಭಾರತದ ಸಂಸದೀಯ ಪ್ರಜಾಸತ್ತೆಯ ಆಧಾರಸ್ತಂಭಗಳೆಂದೂ ಛಿದ್ರಗೊಳ್ಳಲೂ ಇಲ್ಲ. ಅವುಗಳ ಅಡಿಪಾಯವೆಂದೂ ಶಿಥಿಲಗೊಳ್ಳಲೂ ಇಲ್ಲ. ಅದರಲ್ಲೂ ಮುಖ್ಯವಾಗಿ ೧೯೭೫ರ ಜೂನ್ ೨೫ರಿಂದ ೧೯೭೭ರ ಜನವರಿ ೧೯ರವರೆಗೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ನಂತರವೂ ರಾಷ್ಟ್ರದ ಪ್ರಜಾಪ್ರಭುತ್ವದ ಸಂವೇದನೆಗಳು ದುರ್ಬಲಗೊಳ್ಳುವ ಬದಲು ಮತ್ತಷ್ಟು ಬಲಿಷ್ಠಗೊಳ್ಳುತ್ತಲೇ ಬಂದವೆಂಬುದೇ ಆಧುನಿಕ ಯುಗದ ಅತ್ಯಂತ ವಿಸ್ಮಯಕರ ಪವಾಡವೇ ಸರಿ.
ನೆಹರೂ ಯುಗದ ಉದಾರವಾದಿ ನಿಲುವಿನ ಹಾಗೂ ಸಮಾಜವಾದಿ ಒಲವಿನ ಆಳ್ವಿಕೆ ಸ್ವತಂತ್ರ ಭಾರತದ ಬದುಕಿಗೆ ಆಧುನಿಕತೆ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ ಹಾಗೂ ರಾಜಕೀಯ ಸ್ಥಿರತೆ ಮತ್ತು ಚಲನಶೀಲತೆಯನ್ನು ಪರಿಚಯಿಸಿತ್ತು. ಇಂದಿರಾಜಿಯ ಬಲಿಷ್ಠ ನಾಯಕತ್ವ ರಾಷ್ಟçದ ಬಡವರ ಪರ ಧನಾತ್ಮಕ ಜನಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರೂ ಕ್ರಮೇಣ ಅದು ಸರ್ವಾಧಿಕಾರ, ಕುಟುಂಬ ರಾಜಕಾರಣ ಮತ್ತು ಭಟ್ಟಂಗಿತನದ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದದ್ದು ವಿಪರ್ಯಾಸಕರ.
ಮುಂದೆ ೧೯೮೯ರಿಂದ ೨೦೧೪ರವರೆಗಿನ ೨೫ ವರ್ಷಗಳ ಸುದೀರ್ಘ ಕಾಲ ನಿರ್ದಿಷ್ಟ ಬಹುಮತವಿರದ ಡೋಲಾಯಮಾನ ಸಂಸತ್ತೇ ಜಾರಿಯಲ್ಲಿದ್ದು, ಸಮಾನಮನಸ್ಕ ಪಕ್ಷಗಳ ಮೈತ್ರಿ ಸರ್ಕಾರಗಳೇ ಈ ದೇಶಕ್ಕೆ ಅನಿವಾರ್ಯ ಎಂಬಂತಹ ನಂಬಿಕೆಯನ್ನು ಜನಮಾನಸದಲ್ಲಿ ಬಿತ್ತುತ್ತಾ ಬರಲಾಯಿತು. ಆದರೆ ಇದೇ ಅವಧಿಯಲ್ಲೇ ಅನುಷ್ಠಾನಗೊಂಡ ಜಾಗತೀಕರಣದ ನೀತಿಯಿಂದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ತಂತ್ರಜ್ಞಾನಾಧಾರಿತ ಅರ್ಥವ್ಯವಸ್ಥೆಯಲ್ಲಿ ಸರ್ಕಾರಗಳಿಗಿಂತಲೂ ಆರ್ಥಿಕವಾಗಿ ಸದೃಢವಾದ ಖಾಸಗಿ ಕಾರ್ಪೋರೇಟ್ ಕಂಪನಿಗಳು ಪಕ್ಷರಾಜಕಾರಣವನ್ನು ನಿಯಂತ್ರಿಸತೊಡಗಿದವು.
ಬಡತನವನ್ನು ವೈಭವೀಕರಿಸುವ ಹಳೆಯ ಜಾಯಮಾನದ ಬದಲು ಶ್ರೀಮಂತಿಕೆಯ ಕನಸುಗಳನ್ನು ನನಸಾಗಿಸಿಕೊಳ್ಳುವ ವಿನೂತನ ರಹದಾರಿಗಳನ್ನು ರಾಷ್ಟ್ರದ ವಿದ್ಯಾವಂತ ಯುವಕರ ಮುಂದೆ ತೆರೆದಿಡುತ್ತಾ ಬರಲಾಯಿತು. ಪ್ರಪಂಚದ ೫ನೇ ಅತ್ಯಂತ ಬಲಿಷ್ಠ ಆರ್ಥಿಕ ಶಕ್ತಿ ಹಾಗೂ ಜ್ಞಾನಾಧಾರಿತ ಶಕ್ತಿಕೇಂದ್ರವೆಂದೇ ಇವತ್ತಿನ ತಲೆಮಾರಿನ ಭಾರತೀಯರು ಹೆಮ್ಮೆಯ ಭಾವನೆ ಮೂಡಿಸಿಕೊಳ್ಳುವಂತಾಯಿತು.
ಈ ಬದಲಾದ ಕಾಲಧರ್ಮವನ್ನು ಅತಿ ಸೂಕ್ಷ್ಮವಾಗಿ ಹಾಗೂ ಇತರ ಎಲ್ಲಾ ಸಮಕಾಲೀನ ರಾಜಕಾರಣಿಗಳಿಗಿಂತ ತೀಕ್ಷ್ಣವಾಗಿ ಮೈಗೂಡಿಸಿಕೊಂಡು
ಈಗ್ಗೆ ೨೩ ವರ್ಷಗಳ ಹಿಂದೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಉದ್ಭವಿಸಿದ್ದ ಈ ನರೇಂದ್ರ ಮೋದಿ ಎಂಬ ನೇತಾರನೀಗ ಇಡೀ ಭಾರತದ ಕೋಟ್ಯಂತರ ಜನ ಅಭಿಮಾನಿಗಳ ಹಾಗೂ ಬಹುಶ: ಅಷ್ಟೇ ಪ್ರಮಾಣದ ಕಡುವಿರೋಧಿಗಳ ಭಾವಕೋಶಗಳನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ.
ನಿರಂತರ ದುಡಿಮೆ, ಅವಿರತ ಪರಿಶ್ರಮ, ಎಡಬಿಡದ ಲೋಕಸಂಚಾರ, ಚಮತ್ಕಾರಿಕ ಭಾಷಣಕಲೆ, ಸಮ್ಮೋಹಕ ಮಾತುಗಾರಿಕೆ, ಸಂಭಾವ್ಯ ಪರಿಣಾಮಗಳ ಕುರಿತು ಎದೆಗುಂದದೆ ತೆಗೆದುಕೊಂಡ ಕಠೋರ ನಿರ್ಧಾರಗಳು, ನೂರಾರು ಬೃಹತ್ ಮೂಲಸೌಕರ್ಯ ಯೋಜನೆಗಳ ಲೋಕಾರ್ಪಣೆ, ಸಾವಿರಾರು ತಂತ್ರಜ್ಞಾನಾಧಾರಿತ ಸಾಹಸಗಳ ಶಿಲಾನ್ಯಾಸ… ಹೀಗೆ ಒಂದೇ ಒಂದು ದಿನದ ಪೂರ್ಣವಿರಾಮ ಅಥವಾ ಸಾಂದರ್ಭಿಕ ರಜೆ ಪಡೆಯದ ಕ್ರಿಯಾಶೀಲ ಕಾರ್ಯವೈಖರಿಯ ದಿನಚರಿಯೇ ಮೋದಿಯ ಯಶೋಗಾಥೆ.
ಆದರೇನಂತೆ? ಹೀಗೆ ಸರ್ವಾಂತರ್ಯಾಮಿಯಾಗಿ ಹರಡಿಕೊಳ್ಳುತ್ತಾ ಸಾಗಿದ ಮೋದಿಯವರಿಂದಾಗಿ ವಿರೋಧ ಪಕ್ಷಗಳು ಆರೋಪಿಸುವಂತೆ ನಮ್ಮ ಪ್ರಜಾತಂತ್ರಕ್ಕೆ ಅಪಾಯ ಎದುರಾಗಿದೆಯೇ? ಸಂವಿಧಾನಕ್ಕೆ ಸಂಚಕಾರ ಬಂದೊದಗಿದೆಯೇ? "ವಿಕಸಿತ್ ಭಾರತ್" ಎಂಬುದೊಂದು ಸೂಕ್ತ ಕ್ರಿಯಾಯೋಜನೆ ಆಧಾರಿತ ದಿಟ್ಟ ಸಂಕಲ್ಪವೇ ಅಥವಾ ಕೇವಲ ಮತದಾರರನ್ನು ಮರಳು ಮಾಡುವ ಭ್ರಾಮಕ ಕಲ್ಪನೆಯೇ? ಇವೆಲ್ಲವಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ. ೨೦೨೪ ಏಪ್ರಿಲ್, ಮೇ ತಿಂಗಳುಗಳಲ್ಲಿ ಜರುಗುವ ಮಹಾಸಂಗ್ರಾಮದಲ್ಲಿ.