For the best experience, open
https://m.samyuktakarnataka.in
on your mobile browser.

ಲೋಟಸ್ ಪಾಪ್‌ಕಾರ್ನ್

04:35 AM Feb 07, 2024 IST | Samyukta Karnataka
ಲೋಟಸ್ ಪಾಪ್‌ಕಾರ್ನ್

ವಿಶ್ವ ಆಫೀಸಿನಿಂದ ಬರುವ ವೇಳೆಗೆ, ಕುರುಕುಲು ತಿಂಡಿ ಸಿದ್ಧವಾಗಿತ್ತು. ಸಾಮಾನ್ಯವಾಗಿ ಕೋಡಬಳೆ, ಚಕ್ಕುಲಿ ಮಾಡುವ ವಿಶಾಲು ಅಂದು ಹೊಸ ಪ್ರಯೋಗ ನಡೆಸಿದ್ದಳು. ಒಂದು ತಟ್ಟೆಯಲ್ಲಿ ಪುಟ್ಟ ಪುಟ್ಟ ಗೋಲಿಗಳಂತೆ ಬೆಳ್ಳಗೆ ಕಾಣುವ ಹೊಸ ರುಚಿ ಇಟ್ಟಿದ್ದಳು. ವಿಶ್ವನಿಗೆ ಆಶ್ಚರ್ಯವಾಯ್ತು.
"ಏನ್ ಇದು?
"ಹೇಗ್ ಕಾಣುತ್ತೆ?"
"ನೆನೆಸಿದ ಕಾಬೂಲ್ ಕಡಲೆ ಥರ ಇದೆ, ಮಿನಿ ಟೇಬಲ್ ಟೆನ್ನಿಸ್ ಬಾಲ್ ಥರ ಕಾಣ್ಸುತ್ತೆ. ತುಂಬಾ ಲೈಟ್ ಆಗಿ, ಬೆಂಡ್ ಆಗಿದೆ. ನೋಡೋದಾ? ಆಡೋದಾ? ತಿನ್ನೋದಾ?" ಎನ್ನುತ್ತಾ, ವಿಶ್ವ ಒಂದು ಗುಂಡನ್ನು ಬಾಯಿಗೆ ಹಾಕೊಂಡ "ಅರೇ ಪಾಪ್‌ಕಾರ್ನಾ ಇದು" ಅಂದ
"ಅದರಲ್ಲಿ 'ಪಾಪ' ಇಲ್ಲ ಬೇರೆ ಯಾವುದರಿಂದ ಮಾಡಿದ್ದೀನಿ ಹೇಳಿ" ಎಂದು ವಿಶಾಲು ಚಾಲೆಂಜ್ ಮಾಡಿದಳು.
"ಕೈಯಿಂದ ಮಾಡಿದ್ದೀಯ!"
"ಕೈ ವಿಷಯ ಬೇಡ. ರಾಜಕೀಯ ಅಂದ್ರೆ ಮೈ ಪರಚಿಕೊಳ್ಳೋ ಥರ ಆಗುತ್ತೆ" ಎಂದಳು.
ವಿಶ್ವ ಪಾಪ್‌ಕಾರ್ನ್ ಬಿಡಿಸಿ ನೋಡಿದಾಗ ಒಂದು ಅಂದಾಜು ಸಿಕ್ಕಿತು. "ಥರ್ಮಕೋಲ್ ನಿಂದ ಮಾಡಿದ್ದೀಯ?"
ಅವಳಿಗೆ ಸಿಟ್ಟು ಬಂತು "ರೀ ಥರ್ಮಕೋಲ್‌ನ ಕತ್ತೆಗಳು ಕೂಡಾ ತಿನ್ನಲ್ಲ, ನಿಮಗ್ ತಿನ್ನಿಸ್ತೀನಾ ನಾನು!" ಎಂದು ರೇಗುತ್ತ ತನ್ನ ಹೊಸ ರೆಸಿಪಿ ಬಗ್ಗೆ ಹೇಳಿದಳು. "ಇದು ಮಖಾನ ಸೀಡ್ಸ್ ಕಣ್ರಿ, ಅಂದ್ರೆ ಲೋಟಸ್ ಸೀಡ್ಸು"
"ಅರೇ ಕಮಲದ ಬೀಜಗಳು! ಇಷ್ಟು ದಪ್ಪ ಇರುತ್ತಾ?" ವಿಶ್ವ ಆಶ್ಚರ್ಯಪಟ್ಟ.
"ಹೌದು ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ಸು ಜಾಸ್ತಿ ಇವೆ" ಎಂದಳು.
"ಗೊತ್ತಾಯ್ತು ಇದು ತಿಂದ್ರೆ ಪಕ್ಕದ ಮನೆ ಆಂಟಿ ಹತ್ತಿರಕ್ಕೂ ಬರಲ್ಲ, ಆ್ಯಕ್ಸಿಡೆಂಟ್ ಆಗೊಲ್ಲ ಅಂತಾನಾ? ಇವತ್ತೇ ಯಾಕ್ ಮಾಡಿದೆ" ಎಂದಾಗ ವಿಶಾಲು ವಿವರ ನೀಡಿದಳು.
"ನಮ್ಮ ಪಕ್ಕದ ಮನೆ ಪದ್ಮ ಮಗಳಿಗೆ ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಇತ್ತೂ ರೀ, ಮಹಾಲಕ್ಷ್ಮೀ ಹಾಕಿ ಕಿರೀಟ ಇಟ್ಟು, ಒಂದು ಕೈಯನ್ನು ಅಭಯ ಹಸ್ತದ ರೀತಿ ತೋರಿಸಿ, ಕಾರ್ಡ್ ಬೋರ್ಡ್ ಕಮಲದ ಡಿಸೈನ್ ಮೇಲೆ ನಿಂತ್ರೆ ಫಸ್ಟ್ ಪ್ರೈಜ್ ಬರುತ್ತೆ ಅಂತ ಗೊತ್ತಿತ್ತು ರೀ. ರಟ್ಟಿನ ಕಮಲದ ಮೇಲೆ ಬ್ಯಾಲೆನ್ಸ್ ಆಗಿ ನಿಲ್ಲೋದನ್ನ ಕಲ್ಸಿ, ಡ್ರೆಸ್ ಮಾಡ್ಸಿ ಕಾಂಪಿಟೇಷನ್‌ಗೆ ಕಳ್ಸಿದ್ವಿ".
"ಅವಳಿಗೇ ಫಸ್ಟ್ ಪ್ರೈಜ್ ಬಂತಾ"
"ಎಲ್ರೂ ಫಸ್ಟ್ ಪ್ರೈಜ್ ಬರುತ್ತೆ ಅಂತ ಅಂದ್ಕೊಂಡಿದ್ರು ಆದರೆ ಏನ್ ಸಮಸ್ಯೆ ಆಯ್ತು ಅಂದ್ರೆ, ಕಮಲ ರಾಜಕೀಯ ಪಕ್ಷದ ಚೆಹ್ನೆ ಆದ್ದರಿಂದ ಪ್ರೈಜ್ ಕೊಡೋಕೆ ಸಾಧ್ಯ ಇಲ್ಲ ಅಂತ ಲಕ್ಷ್ಮೀನ ಸ್ಪರ್ಧೆಗೆ ಪರಿಗಣಿಸಲೇ ಇಲ್ಲ".
"ತಲೆ ಇದ್ರೆ ಯೋಚನೆ ಮಾಡು ವಿಶಾಲೂ, ಕಮಲ ಪುಷ್ಪ ರಾಷ್ಟ್ರೀಯ ಚಿಹ್ನೆ ಅಂತ ೧೯೫೦ರಲ್ಲೇ ನಿರ್ಧಾರ ಆಗಿದೆ. ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಪಕ್ಷಿ ನವಿಲು, ರಾಷ್ಟ್ರೀಯ ಪುಷ್ಪ ಕಮಲ ಅಂತ ನಾವು ಅಂಗೀಕಾರ ಮಾಡಿದ್ದೀವಿ". ಎಂದ ವಿಶ್ವ.
"ಕಾಲ ಚೇಂಜ್ ಆಗಿದೆ ರೀ, ಸೆಂಚುರಿ ಬದಲಾಗಿದೆ. ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ಬಂದಿದ್ದ ಕೆಲವು ತೀರ್ಪುಗಾರರು ಕಮಲಕ್ಕೆ ವಿರೋಧ ಮಾಡಿದ್ರು."
"ಅಲ್ಲಮ್ಮ, ಕಮಲ ಅಂಬೋದು ಪಕ್ಷದ ಚಿಹ್ನೆ ಅನ್ನೋದಾದ್ರೆ ಅಭಯ ಹಸ್ತ ಕೂಡ ಪಕ್ಷದ ಚಿನ್ಹೆ ತಾನೇ? ಎಲ್ಲರೂ ಕೈ ತೋರಿಸಿ ಗುಡ್ ಮಾರ್ನಿಂಗ್ ಹೇಳ್ತಾರೆ. ಅದನ್ನ ಯಾಕೆ ಯಾರೂ ಕೇಳ್ಲಿಲ್ಲ?" ಎಂದ. ವಿಶಾಲುಗೆ ಒಣ ಚರ್ಚೆಗಿಂತ ಬಿಸಿ ಪಾಪ್‌ಕಾರ್ನ್ ಮುಖ್ಯ ಆಗಿತ್ತು.
"ಎಲ್ಲದ್ರಲ್ಲೂ ರಾಜಕೀಯ ಹುಡುಕಿದರೆ ಹ್ಯಾಗ್ರೀ? ಕೆಲಸಕ್ಕೆ ಬಾರದ ಆ ಚರ್ಚೆ ಬಿಟ್ಹಾಕಿ, ಪಾಪ್ ಕಾರ್ನ್ ಹೆಂಗಿದೆ ಹೇಳಿ" ಅಂದ್ಲು.
"ಚೆನ್ನಾಗಿದೆಯಮ್ಮ, ಲೈಟ್ ಆಗಿದೆ, ಇದರ ವಿಶೇಷತೆ ಹೇಳು ಅಂದ ವಿಶ್ವ.
"ಇದರಲ್ಲಿ ವಿಟಮಿನ್ "ಬಿ" ಮತ್ತು "ಸಿ" ಅಧಿಕ. ಶುಗರ್ ಕಂಟ್ರೋಲ್‌ಗೆ ರಾಮ ಬಾಣ. ಗರ್ಭಿಣಿಯರಿಗೆ ಇದನ್ನ ತಿನ್ನಿಸಿದರೆ ಸುಖ ಪ್ರಸವ ಆಗುತ್ತೆ".
"ಭೇಷ್! ಈ ಕಮಲದ ಬೀಜಗಳಿಗೆ ಅಷ್ಟೆಲ್ಲ ಶಕ್ತಿ ಇದೆಯಾ? ಪ್ರಸವ ಕೂಡ ಮಾಡಿಸುತ್ತಾ? ಅಯ್ಯೋ ದೇವ್ರೇ ನಾನು ತಿಂದಿದ್ದೀನಲ್ಲ ನನಗೆ ತೊಂದ್ರೆ ಇಲ್ವಾ?" ಎಂದ.
"ಗಂಡಸರಿಗೆ ಏನೂ ತೊಂದರೆ ಇಲ್ಲ, ಹೊಟ್ಟೆ ಸರ‍್ಕೋಬೇಡಿ" ಎಂದಳು.
"ಫ್ಯಾನ್ಸಿ ಡ್ರೆಸ್‌ನಲ್ಲಿ ಫಸ್ಟ್ ಪ್ರೈಜ್ ಯಾರಿಗೆ ಬಂತು?" ಎಂದು ವಿಶ್ವ ಕೇಳಿದ.
"ರೈತ ಮಹಿಳೆ ಪಾತ್ರದಲ್ಲಿ ಒಬ್ಬಳು ಕೈಯಲ್ಲಿ ಕಡ್ಗೋಲನ್ನ ಹಿಡ್ಕೊಂಡ್ ಬಂದಿದ್ಲು."
"ತಲೆ ಮೇಲೆ ತೆನೆ ಇತ್ತಾ ವಿಶಾಲು?"
"ಇಲ್ಲ, ಕುಡುಗೋಲು ತೋರಿಸ್ತ್ತಾ ಡೈಲಾಗ್ ಹೇಳಿದ್ಲು, ಅವಳಿಗೇ ಫಸ್ಟ್ ಪ್ರೈಜ್ ಬಂತು".
"ಇದು ಅನ್ಯಾಯ, ಕಡುಗೋಲು ಚಿಹ್ನೆ ಕಮ್ಯೂನಿಸ್ಟ್ ಪಾರ್ಟಿದು. ಅದಕ್ಕೆ ಬಹುಮಾನ ಕೊಟ್ರಾ" ಎಂದು ಕೇಳಿದ.
"ಮಕ್ಕಳ ತಲೆಗೆ ಈ ರಾಜಕೀಯ ತುಂಬ ಬೇಡಿ, ವಿಷಯಕ್ಕೆ ಬನ್ನಿ, ಲೋಟಸ್ ಸೀಡ್ಸ್ ಪಾಪ್‌ಕಾರ್ನ್ ಚೆನ್ನಾಗಿದ್ಯಾ ಹೇಳಿ"
"ಚೆನ್ನಾಗೇನೋ ಇದ್ಯಮ್ಮ, ಆದರೆ ನಾನು ತಿಂದಿದ್ದನ್ನ ಯಾರಾದ್ರು ನೋಡಿದ್ರೆ ನನ್ನ ಮೇಲೆ ಕೇಸ್ ಬೀಳುತ್ತೆ, ಮೊದಲು ಕಿಟಕಿ ಹಾಕು" ಎಂದ.
"ಕುರುಕ್ಷೇತ್ರ ಯುದ್ಧದಲ್ಲಿ ಸೈನ್ಯವನ್ನು ಕಮಲದ ಆಕಾರದಲ್ಲಿ ನಿಲ್ಲಿಸಿದ್ರು, ಎಲ್ಲಾ ದೇವಸ್ಥಾನಗಳಲ್ಲೂ ಕಮಲದ ಆಕಾರದ ಕೆತ್ತನೆಯನ್ನು ಬಿಡಿಸಿದ್ದಾರೆ, ಲಕ್ಷ್ಮೀ ನಿಲ್ಲೋದೇ ಕಮಲದ ಮೇಲೆ"
"ಕಮಲ ಬೇಡಾಂದ್ರೆ ಲಕ್ಷ್ಮೀ ಬರೋಲ್ಲ ವಿಶಾಲು"
"ಹೌದು ರೀ, ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮೀಗೆ ಕಮಲ ಅಂದರೆ ಬಹಳ ಇಷ್ಟ."
"ನೋಡು ವಿಶಾಲು, ಕಮಲ ಕೆಸರಲ್ಲಿ ಬೆಳೆಯುತ್ತೆ. ಅದಕ್ಕೆ ಯಾವ ಆರೈಕೇನೂ ಬೇಡ, ಅದಕ್ಕೆ ಗೊಬ್ಬರ ಹಾಕೋಷ್ಟು ಇಲ್ಲ, ಔಷಧಿ ಹೊಡಿಯೋಷ್ಟು ಇಲ್ಲ, ನೋಡೋಕ್ ಸುಂದರವಾಗಿರುತ್ತೆ. ಲಕ್ಷ್ಮೀ ದೇವಸ್ಥಾನಕ್ಕೆ ಹೋಗುವ ಎಲ್ಲರೂ ಕಮಲದ ಹೂವನ್ನು ದೇವರಿಗೆ ಅರ್ಪಿಸುತ್ತಾರೆ".
"ಚುನಾವಣೆ ಮುಗಿಯೋವರೆಗೂ ಲಕ್ಷ್ಮೀ ದೇವಸ್ಥಾನಕ್ಕೆ ನಾನು ಹೋಗಲ್ಲ ರೀ" ಎಂದಳು.
"ಮತ್ತಿನೆಲ್ಲಿಗೆ ಹೋಗ್ತೀಯಾ"? ಎಂದಾಗ
"ಸರಸ್ವತಿ ದೇವಸ್ಥಾನಕ್ಕೆ ಹೋಗ್ತೀನಿ"
"ಸರಸ್ವತಿ ಕೂಡಾ ಕಮಲದ ಮೇಲೆ ಕೂತಿದಾಳೆ. ಸರಸ್ವತಿ ಗಂಡ ಸಾಕ್ಷಾತ್ ಬ್ರಹ್ಮ ದೇವ ವಿಷ್ಣುವಿನ ನಾಭಿಯಿಂದ ಹೊರಟ ಕಮಲದ ಮೇಲೆ ಕೂತರ‍್ತಾನೆ. ಪುರಾಣ ಕಾಲದಿಂದನೂ ಇರೋ ಈ ಕಮಲದ ಮೇಲೆ ನೀನು ಅಸಮಾಧಾನ ಪಡಬೇಡ" ಎಂದು ಸಂತೈಸಿದ.
"ಇನ್ಮೇಲೆ ಫ್ಯಾನ್ಸಿ ಕಾಂಪಿಟೇಷನ್‌ನಲ್ಲಿ ಲಕ್ಷ್ಮೀ ಡ್ರೆಸ್ ಹಾಕಿದವರು ಕಾರ್ಪೆಟ್ ಮೇಲೆ ನಿಂತ್ರೆ ಹೇಗೆ?"
"ಕಾರ್ಪೆಟ್ ಮೇಲೆ ನಿಲ್ಲೋದ್ ಓಕೆ, ಅಭಯ ಹಸ್ತ ತರ‍್ಸೋದು ಹೇಗೆ?"
"ಎರಡೂ ಕೈನ ಹಿಂದಕ್ಕೆ ಕಟ್ಟಿ ನಿಲ್ಲಿಸಿದರಾಯ್ತು" ಎಂದಳು ವಿಶಾಲು.
"ಆಗ ಲಕ್ಷ್ಮೀಗೆ ಸಿಟ್ಟು ಬಂದು ಜಾಡಿಸಿ ಒದೀತಾಳೆ"
"ಆಗ ಏನಾಗುತ್ತೆ"
"ಲಕ್ಷ್ಮೀ ದೇವಸ್ಥಾನದ ಮುಂದೆ ಗೋಣಿಚೀಲದ ಮೇಲೆ ಕೂತು "ಧರ್ಮಾನೇ ತಾಯಿ ತಂದೆ ಕಾಸೊಂದ ನೀಡು ಶಿವನೆ" ಅನ್ನಬೇಕಾಗುತ್ತದೆ ಎಂದು ವಿಶ್ವ ಮಾತು ಮುಗಿಸಿದ.