ಲ್ಯಾಪ್‌ಟಾಪ್, ಮೊಬೈಲ್ ಫೋನ್ ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ
ಹುಬ್ಬಳ್ಳಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಅಂದಾಜು ೭೦ ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಹಾಗೂ ೧೫ ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಸಾರಿಗೆ ಸಿಬ್ಬಂದಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.
ಡಿಸೆಂಬರ್ ೧೯ರಂದು ಮುಳಬಾಗಿಲಿನಿಂದ ಹುಬ್ಬಳ್ಳಿಗೆ ಬಂದಿರುವ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಹಾವೇರಿ ಜಿಲ್ಲೆಯ ನಿವಾಸಿಯಾಗಿರುವ ಮೌನೇಶ್ ಮಾಯಾಚಾರಿ ಎಂಬವರು ಬೆಂಗಳೂರಿನಿಂದ ಹಾವೇರಿಗೆ ಪ್ರಯಾಣ ಮಾಡಿದ್ದಾರೆ. ಹಾವೇರಿಯಲ್ಲಿ ಇಳಿಯುವಾಗ ಅಂದಾಜು ೭೦ ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಇದ್ದ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದರು, ಎರಡು ಗಂಟೆ ನಂತರ ನೆನಪಾಗಿ ಬಸ್ಸಿನ ಚಾಲಕರಾದ ಶ್ರೀರಾಮ ಮತ್ತು ನಿರ್ವಾಹಕರಾದ ಮಂಜುನಾಥ ಅವರನ್ನು ಸಂಪರ್ಕಿಸಿದಾಗ ಲ್ಯಾಪ್ ಟಾಪ್ ಹಾಗೂ ಬ್ಯಾಗು ಸುರಕ್ಷಿತವಾಗಿರುವುದು ತಿಳಿದು ಬಂದಿದೆ. ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಚಾಲಕ ಹಾಗೂ ನಿರ್ವಾಹಕರ ಮೂಲಕ ಲ್ಯಾಪ್ ಟಾಪ್ ಹಾಗೂ ಬ್ಯಾಗ್‌ನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಇನ್ನೊಂದು ಪ್ರಕರಣದಲ್ಲಿ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಹೋಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಕೆರೂರಿಗೆ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರೊಬ್ಬರು ಅಂದಾಜು ೧೫ ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್‌ನ್ನು ಕಳೆದುಕೊಂಡಿದ್ದು ಬಸ್ಸಿನ ಚಾಲಕರಾದ ಬಿ.ಜಿ. ವಿಟ್ಟಣ್ಣವರ ಹಾಗೂ ನಿರ್ವಾಹಕರಾದ ಹೇಮಾ ಮೊರಬ ರವರು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಬೆಲೆಬಾಳುವ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಸಾರಿಗೆ ಸಿಬ್ಬಂದಿಗಳ ಪ್ರಯಾಣಿಕ ಸ್ನೇಹಿ ವರ್ತನೆ ಅಭಿನಂದನೀಯ ಹಾಗೂ ಇತರೆ ನೌಕರರಿಗೆ ಪ್ರೇರಣೆಯಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಶ್ಲಾಘಿಸಿದ್ದಾರೆ.
ಉಪಮುಖ್ಯ ಸಂಚಾರ ವ್ಯವಸ್ಥಾಪಕ ಶಶಿಧರ ಕುಂಬಾರ, ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪಿ. ವೈ. ಗಡಾದ, ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಮಂಜುನಾಥ ಕಟ್ಟಿಮನಿ, ಡಿಪೋ ಮ್ಯಾನೇಜರ್ ಬಿ. ಕೆ. ನಾಗರಾಜ, ಚಾರ್ಜ್ ಮನ್ ಶ್ರೀಶೈಲ ಕುಂಬಾರ ಮತ್ತಿತರರು ಇದ್ದರು.