For the best experience, open
https://m.samyuktakarnataka.in
on your mobile browser.

ವಂದೇ ಭಾರತ್ ಎಕ್ಸ್ ಪ್ರೆಸ್ ಬೆಳಗಾವಿಗೆ

12:14 PM Jan 21, 2025 IST | Samyukta Karnataka
ವಂದೇ ಭಾರತ್ ಎಕ್ಸ್ ಪ್ರೆಸ್ ಬೆಳಗಾವಿಗೆ

ಬೆಳಗಾವಿ ಮಿರಜ್ ನಡುವೆ ಮೆಮು ರೈಲನ್ನಾಗಿ ಪರಿವರ್ತಿಸುವ ಬಗ್ಗೆ ಕ್ರಮ

ಬೆಂಗಳೂರು: ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸುವುದು ಬಹಳ ಅವಶ್ಯಕ ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ ತಿಳಿಸಿದ್ದಾರೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಅವರ ಉಪಸ್ಥಿತಿಯಲ್ಲಿ ಇಂದು ನೈರುತ್ಯ ವಲಯದ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಳಗಾವಿಗೆ ಸಂಬಂಧಿಸಿದಂತೆ ರೈಲು ಸೇವೆ ಒದಗಿಸುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸುವುದು ಬಹಳ ಅವಶ್ಯವಿದ್ದು ಇದು ಬೆಳಗಾವಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯೂ ಸಹ ಆಗಿದೆ. ಆದಕಾರಣ ಈ ರೈಲಿನ ಪ್ರವಾಸದ ಅಲ್ಪ ಸಮಯ ಬದಲಾವಣೆಯೊಂದಿಗೆ ರೈಲು ಸಂಚಾರ ವಿಸ್ತರಣೆ ಸಾಧ್ಯವಿದ್ದು, ಈ ವಿಷಯವನ್ನು ಗಂಭೀರವಾಗಿ ಅವಲೋಕಿಸಿ ಕ್ರಮವನ್ನು ಜರುಗಿಸಲು, ಬೆಳಗಾವಿ ಮಿರಜ್ ನಡುವೆ ದಿನನಿತ್ಯ ಸಂಚರಿಸುವ ರೈಲು ಸೇವೆಯನ್ನು ಪ್ರತಿ ಮಾಹೆ ಮುಂದುವರಿಸುತ್ತಾ ಬಂದಿದ್ದು, ಇದರ ಸೇವೆಯನ್ನು ಖಾಯಂ ಮಾಡುವಂತೆಯೂ ಮತ್ತು ಇದನ್ನು "ಮೆಮು" ರೈಲನ್ನಾಗಿ ಪರಿವರ್ತಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಅವಶ್ಯವಿದ್ದು, ಈ ಕುರಿತು ಮುಂಚಿತ ಸಮೀಕ್ಷೆ ನಡೆಸುವುದು ಸೂಕ್ತ ಈ ನಿಟ್ಟಿನಲ್ಲಿ ಕೂಡಲೇ ಮುಂದಿನ ಅಗತ್ಯ ಕ್ರಮವನ್ನು ಜರುಗಿಸಲು ಸೂಚಿಸಲಾಯಿತು. ನಮ್ಮ ಎಲ್ಲ ಸೂಚನೆಗಳನ್ನು ಅವಲೋಕಿಸಿದ ರೈಲ್ವೆ ಮಹಾಪ್ರಬಂಧಕರಾದ (ಜಿ.ಎಮ್) ಈ ಕುರಿತು ಶೀಘ್ರ ಅನುಕೂಲಕರವಾದ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು. ಈ ಸಭೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಇವರು ಭಾಗವಹಿಸಿದ್ದರು ಎಂದಿದ್ದಾರೆ.

Tags :