ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತಾಗಬಾರದು
ಹಾವೇರಿ(ಶಿಗ್ಗಾವಿ): ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತು ಆಗಬಾರದು. ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಸ್ಪಷ್ಟಪಡಿಸಿದರು.
ಶಿಗ್ಗಾಂವಿಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ಸಿಗರು ಮೊದಲು ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಓದಲಿ ಎಂದು ಸಲಹೆ ನೀಡಿದರು. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ಗೆ ಇರೋ ಮೂಲ ಆಸ್ತಿ ಸಂರಕ್ಷಿಸುತ್ತೇವೆ ಎಂದಿದ್ದೇವೆ. ಆದರೆ, ಅತಿಕ್ರಮಣವನ್ನಲ್ಲ ಎಂದು ಹೇಳಿದರು.
2 ಲಕ್ಷ 30 ಸಾವಿರ ಕೋಟಿ ಆಸ್ತಿ ವಕ್ಫ್ ಬಳಿಯಿದೆ. ಇದನ್ನು ಕಾಂಗ್ರೆಸ್ಸಿನಲ್ಲಿ ಇರೋ ಮುಸ್ಲಿಂ ಮುಖಂಡರು ದೋಚುತ್ತಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ಉದ್ದೇಶ, ವಕ್ಫ್ ನಿಯಮ ಏನಿದೆ? ಅದನ್ನು ಪಾಲಿಸಲು ನಮ್ಮ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ವಕ್ಫ್‌ಗೆ ಮುಸಲ್ಮಾನರು ಮತ್ತು ಕೆಲ ಹಿಂದೂಗಳೂ ದಾನ ಕೊಟ್ಟ ಆಸ್ತಿಯನ್ನು ಅನ್ಯರ ಪಾಲಾಗದಂತೆ ರಕ್ಷಿಸಬೇಕು ಎಂದು ಹೇಳಿದರು.
ಹೆಚ್ಚುವರಿ ವಕ್ಫ್ ಆಸ್ತಿಯನ್ನು ತೆಗೆಸುತ್ತೇವೆ. ನಿಜವಾಗಿ ಇದ್ದ ಮೂಲ ವಕ್ಫ್ ಆಸ್ತಿಯನ್ನು ಆಯಾ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂಬುದು ಬಿಜೆಪಿ ನಿಲುವಾಗಿದೆ ಎಂದರು.
ಬಿಜೆಪಿಯವರು ಯಾವತ್ತೂ ಊರೂರು ಓಡಾಡಿ ಅದಾಲತ್ ನಡೆಸಿ ತಹಶೀಲ್ದಾರ್‌ಗಳಿಗೆ ಧಮ್ಕಿ ಕೊಟ್ಟು ಪಹಣಿಯಲ್ಲಿ ವಕ್ಫ್ ಆಸ್ತಿಯನ್ನಾಗಿ ಸೇರಿಸಿ ಸಂರಕ್ಷಣೆ ಮಾಡುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದು ಜೋಶಿ ಸಿಎಂಗೆ ತಿರುಗೇಟು ನೀಡಿದರು.