ವಕ್ಫ್ ಕಾನೂನು ವಿರುದ್ಧ ಹೋರಾಟ
ಯಾರಿಗಾದರೂ ನೋಟಿಸ್ ಬಂದರೆ, ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ನಮ್ಮ ಕಛೇರಿಗೆ ಸಂಪರ್ಕ ಮಾಡಬಹುದು, ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ರಚಿಸುತ್ತೇವೆ
ವಿಜಯಪುರ: ವಕ್ಫ್ ಕಾನೂನು ವಿರುದ್ಧ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ರೈತರ ಜೊತೆ ಇದ್ದೇವೆ, ರೈತರಿಗಾಗಿ ಉಚಿತ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯದ ಯಾವುದೇ ಮೂಲೆಯಲ್ಲಿ ರೈತರ ಜಮೀನಲ್ಲಿ ವಕ್ಫ್ ಬೋರ್ಡ ಹೆಸರು ಇದ್ದರೂ ಅವರು ನಮ್ಮ ಬಳಿ ಬರಲಿ. ನಮ್ಮ ಶಾಸಕರ ಕಛೇರಿಗೆ ಬಂದು ದಾಖಲಾತಿ ನೀಡಿದರೆ ಅವರ ಪರವಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ. ರೈತರು ಆತಂಕ ಪಡಬಾರದು, ಕಾನೂನು ಹೋರಾಟ ಮಾಡೋಣ. ಯಾರಿಗಾದರೂ ನೋಟಿಸ್ ಬಂದರೆ ನಮ್ಮ ಕಛೇರಿಗೆ ಸಂಪರ್ಕ ಮಾಡಿ. ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ನಮ್ಮ ಕಛೇರಿಗೆ ಸಂಪರ್ಕ ಮಾಡಬಹುದು, ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ರಚಿಸುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ರೈತರಿಗೆ ಉಚಿತ ಕಾನೂನು ನೆರವು ನೀಡುತ್ತೇವೆ. ಸಚಿವ ಜಮೀರ್ ಅಹಮದ್ ಖಾನ್ ಪ್ರವಾಸ ಮಾಡಿದ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ, ರೈತರು ಎದೆಗುಂದಬಾರದು ಅವರೊಂದಿಗೆ ನಾವು ಇದ್ದೇವೆ. ವಕ್ಪ್ ಮಂಡಳಿಯವರು ದೇವಸ್ಥಾನಕ್ಕೆ ಕೂಡಾ ನೋಟಿಸ್ ನೀಡುತ್ತಿದ್ದಾರೆ. ಈ ವಕ್ಫ್ ಬೋರ್ಡ್ ಯಾವಾಗ ಹುಟ್ಟಿದ್ದು? ಹಿಂದೂ ದೇವಸ್ಥಾನಗಳು ಸಾವಿರಾರು ವರ್ಷಗಳಿಂದ ಇಲ್ಲಿವೆ. ಹಿಂದೂ ದೇವಸ್ಥಾನಗಳ ಆಸ್ತಿ ವಕ್ಫ್ ಆಸ್ತಿ ಆಗಿದ್ದು ಯಾವಾಗ? ವಕ್ಫ್ ಕಾನೂನು ನೆಹರು ಮಾಡಿರುವ ದೊಡ್ಡ ತಪ್ಪು, ಕರ್ನಾಟಕದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡಲು ವಕ್ಫ್ ಕೆಲಸ ಮಾಡ್ತಿದೆ ಅನಿಸುತ್ತಿದೆ . ರಾಜ್ಯದಲ್ಲಿ ಎಲ್ಲವೂ ವಕ್ಫ್ ಆಸ್ತಿ ಎಂದು ಹೇಳುತ್ತಾರೆ. ಇದರ ವಿರುದ್ಧ ಹಿಂದೂಗಳು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದರು.