For the best experience, open
https://m.samyuktakarnataka.in
on your mobile browser.

ವಕ್ಫ್ ಹೆಸರಿನಲ್ಲಿ ರೈತರ ಭೂ ಕಬಳಿಕೆ: ಸಿಬಿಐ ತನಿಖೆಗೆ ಆಗ್ರಹ

04:58 PM Nov 04, 2024 IST | Samyukta Karnataka
ವಕ್ಫ್ ಹೆಸರಿನಲ್ಲಿ ರೈತರ ಭೂ ಕಬಳಿಕೆ  ಸಿಬಿಐ ತನಿಖೆಗೆ ಆಗ್ರಹ

ಮಂಗಳೂರು: ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಸ್ಥರಾಗಿದ್ದು, ಸಿಎಂ ನಿರ್ದೇಶನ, ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆಯಂತೆ ವಕ್ಫ್ ಇಲಾಖೆ ರೈತರ ಜಮೀನನ್ನು ತನ್ನ ಖಾತೆಗೆ ಭೂಪರಿವರ್ತನೆ ಮಾಡಿಕೊಳ್ಳುತ್ತಿದೆ. ವಕ್ಫ್ ಹೆಸರಿನಲ್ಲಿ ರಾಜ್ಯದಲ್ಲಿ ಜಮೀನು ಕಬಳಿಕೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹಿಸಿದರು.
ರಾಜ್ಯದಲ್ಲಿ ವಕ್ಫ್ ಕಾನೂನಿನ ಮೂಲಕ ಆಸ್ತಿ ಕಬಳಿಕೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯ ವಿರುದ್ಧ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಕ್ಫ್ ಕಾನೂನು ಮೂಲಕ ಕಬಳಿಕೆ ಮಾಡಿದ ರೈತರ ಹಾಗೂ ಇತರರ ಜಮೀನನ್ನು ಟ್ರಿಬ್ಯುನಲ್ನಲ್ಲಿ ಮಾತ್ರ ಪ್ರಶ್ನೆ ಮಾಡಬಹುದು. ಟ್ರಿಬ್ಯುನಲ್ನಲ್ಲಿ ವಕ್ಫ್ ಭೂಮಿ ಎಂದು ಅಂತಿಮಗೊಂಡರೆ ಮುಂದಕ್ಕೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ವಕ್ಫ್ ಕಾನೂನು ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೂಚನೆಯಂತೆ ವಕ್ಫ್ ಕಾನೂನು ತಿದ್ದುಪಡಿ ಕುರಿತ ಜಂಟಿ ಸಂಸದೀಯ ಸಮಿತಿಯಲ್ಲಿ ಕಾಂಗ್ರೆಸ್ ಸದಸ್ಯರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಗೂ ಸಚಿವ ಜಮೀರ್ ಅಹ್ಮದ್ ಅವರು ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಬಿಜೆಪಿ ಹೋರಾಟದ ಬಳಿಕ ಕದ್ದ ಮಾಲನ್ನು ವಾಪಸ್ ನೀಡುವಂತೆ ನೋಟಿಸ್ ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ. ಆದರೆ, ಮುಂದಕ್ಕೆ ಮತ್ತೆ ನೋಟಿಸ್ ನೀಡುವುದಿಲ್ಲ ಎಂಬ ಗ್ಯಾರಂಟಿ ಇಲ್ಲದಾಗಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರಿನಲ್ಲಿ ಕೆಲ ಮಸೀದಿ ಅಂಗಡಿಗಳ ಬಾಡಿಗೆ ಹಣ ದುರುಪಯೋಗ ಆಗುತ್ತಿದೆ ಎಂಬ ಬಗ್ಗೆ ಮುಸಲ್ಮಾನರಿಂದಲೇ ನನಗೆ ದೂರು ಬಂದಿದೆ. ಈಗ ರೈತರ ಜಮೀನನ್ನು ವಕ್ಫ್ ಇಲಾಖೆ ವಶಪಡಿಸಿಕೊಂಡಿದೆ. ಬಿಜೆಪಿ ಹೋರಾಟದ ಫಲವಾಗಿ ನೋಟಿಸ್ ಹಿಂಪಡೆಯುವ ಭರವಸೆ ಸರಕಾರದಿಂದ ದೊರೆತಿದೆ. ಕಾಂಗ್ರೆಸ್ ಭೂಮಿ ದರೋಡೆಕೋರತನದ ಬಗ್ಗೆ ಜನರು ಜಾಗೃತಗೊಂಡು ಪ್ರಶ್ನಿಸಬೇಕಿದೆ. ರೈತರ ಜಮೀನು ಕಬಳಿಕೆ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅವರು ರಾಜೀನಾಮೆ ನೀಡಬೇಕು ಎಂದರು.
ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಎಲ್ಲ ಹಿಂದುಗಳು ತಮ್ಮ ಜಮೀನಿನ ಆರ್ಟಿಸಿ ಪರಿಶೀಲನೆ ಮಾಡಬೇಕಾದ ಭಯದ ವಾತಾವರಣ ಸೃಷ್ಟಿಯಾಗಿದೆ. ಇಸ್ಲಾಂ ಹುಟ್ಟುವುದಕ್ಕೆ ಮುಂಚೆಯೇ ಇದ್ದಂತಹ ಸಾವಿರಾರು ವರ್ಷಗಳ ಹಿಂದಿನ ದೇವಸ್ಥಾನಗಳ ಆಸ್ತಿ ಕೂಡಾ ವಕ್ಫ್ ಆಸ್ತಿಯಾಗಿ ಪರಿವರ್ತನೆ ಆಗಿದೆ. ಈ ರೀತಿ ಭೂ ಪರಿವರ್ತನೆ ಮಾಡುವ, ನೋಟಿಸ್ ನೀಡುವ ಅಧಿಕಾರಿಗಳಿಗೂ ಆತ್ಮಸಾಕ್ಷಿ ಬೇಕಿದೆ. ವಿಧಾನಸೌಧದ ಜಾಗವೂ ವಕ್ಫ್ಗೆ ಸೇರಿದ್ದ ಎಂದು ಹೇಳಿಕೆ ನೀಡುತ್ತಿದ್ದಾರೆ. ಕಳ್ಳತನದ ವ್ಯಾಖ್ಯಾನವನ್ನು ಸಿದ್ದರಾಮಯ್ಯ ಸರಕಾರ ಬದಲು ಮಾಡಿದೆ. ಜನರ ಆಸ್ತಿಗೆ ಭದ್ರತೆ ಇಲ್ಲದಾಗಿದೆ. ನಮ್ಮ ಮನೆಗೆ ಇದು ವಕ್ಫ್ ಆಸ್ತಿ ಎಂಬ ನೋಟಿಸ್ ಬರಬಹುದು. ಮಕ್ಕಳಿಗೆ ಹೋಗಬೇಕಾದ ಆಸ್ತಿ ವಕ್ಫ್ಗೆ ಹೋಗುವ ಸ್ಥಿತಿ ಒದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಅಕ್ರಮವೆಸಗಿ ವಾಪಾಸ್ ನೀಡುವುದು ಅಭ್ಯಾಸವಾಗಿದೆ. ವಕ್ಫ್ ಭೂಮಿ ವಿಚಾರದಲ್ಲಿ ಗಜೆಟ್ ನೋಟಿಫಿಕೇಶನ್ ಅಗತ್ಯವಿದೆ. ರಾಜ್ಯ ಸರಕಾರದ ವೈಫಲ್ಯ ವಿರುದ್ಧ ಇದು ಆರಂಭದ ಹೋರಾಟ ಮಾತ್ರ, ಮುಂದೆ ತಾಲೂಕು ಮಟ್ಟದಲ್ಲಿ ಹೋರಾಟ ಮಾಡಿ ಹಗರಣ ಬಯಲಿಗೆಳೆಯುತ್ತೇವೆ ಎಂದರು.
ಮೇಯರ್ ಮನೋಜ್ ಕೋಡಿಕಲ್, ಉಪಮೇಯರ್ ಭಾನುಮತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ರವಿಶಂಕರ ಮಿಜಾರು, ನಿತಿನ್ಕುಮಾರ್, ಸುಧೀರ್ ಶೆಟ್ಟಿ, ಪೂರ್ಣಿಮಾ, ವಿಜಯಕುಮಾರ್ ಶೆಟ್ಟಿ, ಮಂಡಲ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ರಾಜೇಶ್ ಕೊಟ್ಟಾರಿ, ಜಗದೀಶ ಆಳ್ವ ಭಾಗವಹಿಸಿದ್ದರು.

Tags :