ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ: ಈಶ್ವರ್ ಖಂಡ್ರೆ ಜೋತೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ
ಬೆಂಗಳೂರು: 70ನೇ ವನ್ಯಜೀವಿ ಸಪ್ತಾಹ-2024ರ ಅಂಗವಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಅರಣ್ಯ ಮತ್ತು ಪರಿಸರ ಇಲಾಖೆ ಬೆಂಗಳೂರು ನಗರದಲ್ಲಿ ಇಂದು ಆಯೋಜಿಸಿದ “ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ (Walk for Wildlife)” ಕಾರ್ಯಕ್ರಮದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಕಾಂತಾರಾ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ರಾಜ್ಯದ ಎಲ್ಲಾ ಚಾರಣ ಪಥಗಳಿಗೂ ಒಂದೇ ಅಂತರ್ಜಾಲ ತಾಣದಲ್ಲಿ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, ನಾಳೆ ಮಧ್ಯಾಹ್ನ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ವೆಬ್ ಸೈಟ್ ಗೆ ಚಾಲನೆ ನೀಡಲಾಗುವುದು, ಕುಮಾರ ಪರ್ವತ ಚಾರಣ ಪಥಕ್ಕೆ ಜ.26, 27ರಂದು ಸಾವಿರಾರು ಜನರು ಆಗಮಿಸಿದ್ದ ಹಿನ್ನೆಲೆಯಲ್ಲಿ ಚಾರಣ ಪಥಗಳಿಗೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ನಾಳೆಯಿಂದ ಆರಂಭವಾಗಲಿದೆ, ಭೂಭಾಗದ ಶೇ.33ರಷ್ಟು ಅರಣ್ಯ ಇರಬೇಕು ಆದರೆ, ರಾಜ್ಯದಲ್ಲಿ 22ರಷ್ಟು ಮಾತ್ರ ಹಸಿರು ಹೊದಿಕೆ ಇದೆ. ಜೊತೆಗೆ ನಾನು ಸಚಿವನಾದ ತರುವಾಯ ಹಲವಾರು ವರ್ಷಗಳಿಂದ ಒತ್ತುವರಿ ಮಾಡಲಾಗಿದ್ದ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವು ಮಾಡಿಸಿದ್ದೇನೆ. ಹೊಸದಾಗಿ 10 ಸಾವಿರ ಎಕರೆ ಭೂಮಿಯನ್ನು ಅರಣ್ಯ ಎಂದು ಘೋಷಿಸಲಾಗಿದೆ. ಅಂದರೆ ರಾಜ್ಯದಲ್ಲಿನ ಅರಣ್ಯ ಪ್ರದೇಶ ವ್ಯಾಪ್ತಿ ಹೆಚ್ಚಳವಾಗುತ್ತಿದೆ. ಈ ಬಾರಿಯ ವನ್ಯಜೀವಿ ಸಂರಕ್ಷಣೆಯ ಧ್ಯೇಯ ವಾಕ್ಯ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಎಂಬುದಾಗಿದೆ. ಅರಣ್ಯದಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ ಪರಿಸರ ಉಳಿಯಲು ಸಾಧ್ಯ. ನಮ ಪೂರ್ವಿಕರಿಗೆ ಸಹಬಾಳ್ವೆಯ ಪರಿಚಯ ಚೆನ್ನಾಗಿತ್ತು. ಆದರೆ ನಾವು ಆ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ. ಇಂದು ನಾವು ಮತ್ತೆ ವನ ಮತ್ತು ವನ್ಯಜೀವಿಗಳ ಜೊತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಸಮತೋಲನದಿಂದ ಇರಲು ಸಾಧ್ಯ, ಅರಣ್ಯ ವನ್ಯಜೀವಿ ಉಳಿಯಲಿ ಎಂದು ಹಾರೈಸಿ ಈ ನಡಿಗೆಗೆ ಚಾಲನೆ ನೀಡುತ್ತಿದ್ದೇನೆ. ಬನ್ನಿ ನಾನೂ ನಿಮೊಂದಿಗೆ ನಡೆಯುತ್ತೇನೆ. ನಾವು ನೀವು ಕೂಡಿ ಕಬನ್ ಉದ್ಯಾನದಿಂದ ಲಾಲ್ ಬಾಗ್ ವರೆಗೆ ನಡೆಯೋಣ. ವನ್ಯಜೀವಿ ಸಂರಕ್ಷಣೆ ಮತ್ತು ಸಹಬಾಳ್ವೆಯ ಸಂದೇಶ ಸಾರೋಣ ಎಂದರು.