For the best experience, open
https://m.samyuktakarnataka.in
on your mobile browser.

ವರದಿಯನ್ನ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ

10:52 AM Nov 29, 2024 IST | Samyukta Karnataka
ವರದಿಯನ್ನ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ

ಬೆಂಗಳೂರು: ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗು ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ 5 ಬಾಣಂತಿ ಮಹಿಳೆಯರ ಸಾವಾಗಿದ್ದು, ಈ ಬಗ್ಗೆ ತಜ್ಞರ ತಂಡ ತನಿಖೆ ಮಾಡಿ ನೀಡಿರುವ ವರದಿಯನ್ನ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಸರಣಿ ಸಾವಿನ ಬೆನ್ನಲ್ಲೇ, ನವೆಂಬರ್ 16ನೆ ತಾರೀಖಿನಂದು ಖಾಸಗಿ ಕಂಪನಿಯೊಂದು ಸರಬರಾಜು ಮಾಡಿರುವ Ringer Lactate Infusion ಔಷದಿಯನ್ನ ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸುತ್ತೋಲೆ ಹೊರಡಿಸಿದೆ.

ಬಳ್ಳಾರಿಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೂ ಈ ಸುತ್ತೋಲೆಗೂ ಏನಾದರೂ ಸಂಬಂಧವಿದೆಯೇ? ಈ ಕಳಪೆ ಗುಣಮಟ್ಟದ ಔಷಧಿ ಪೂರೈಕೆಗೆ, ಬಳಕೆಗೆ ಹೊಣೆ ಯಾರು? ಸರ್ಕಾರ ವರದಿಯನ್ನ ಮುಚ್ಚಿಡುವ ಮೂಲಕ ಯಾರನ್ನು ರಕ್ಷಿಸುತ್ತಿದೆ?

ಇಡೀ ಕರ್ನಾಟಕವೇ ಬೆಚ್ಚಿ ಬೀಳುವ ಇಂತಹ ಆಘಾತಕಾರಿ ಘಟನೆ ನಡೆದಿದ್ದರೂ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿ ಕೆ ಶಿವಕುಮಾರ ಅವರಾಗಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದಿರಲಿ, ಕನಿಷ್ಠ ಪಕ್ಷ ಸಂತಾಪ ಕೂಡ ಸೂಚಿಸಿಲ್ಲ. ಇನ್ನು ಬಳ್ಳಾರಿ ಉಸ್ತುವಾರಿ ಸಚಿವ
ಜಮೀರ್‌ ಅಹ್ಮದ್‌ ಅವರು ಈವರೆಗೂ ಜಿಲ್ಲೆಗೆ ಭೇಟಿ ನೀಡುವ ಗೋಜಿಗೂ ಹೋಗಿಲ್ಲ. ಈ ಪ್ರಕರಣದ ನೈತಿಕೆ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ ಗುಂಡುರಾವ್‌ ಹಾಗು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್‌ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಒತ್ತಾಯಿಸುತ್ತೇನೆ ಎಂದಿದ್ದಾರೆ.

Tags :