For the best experience, open
https://m.samyuktakarnataka.in
on your mobile browser.

ವರಮಹಾಲಕ್ಷ್ಮೀ ಪೂಜೆ ಸಡಗರ

07:20 PM Aug 16, 2024 IST | Samyukta Karnataka
ವರಮಹಾಲಕ್ಷ್ಮೀ ಪೂಜೆ ಸಡಗರ

ಮಂಗಳೂರು: ವರಮಹಾಲಕ್ಷ್ಮೀ ಹಬ್ಬದಂದು ಪೂಜೆ ಮಾಡಿದವರಿಗೆ ಅಷ್ಟಲಕ್ಷ್ಮಿಯರ ಸಿದ್ಧಿ ದೊರೆತು, ಕುಟುಂಬದಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದೇವಿ ದೇವಸ್ಥಾನಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಇಂದು ವರಮಹಾಲಕ್ಷ್ಮೀ ವ್ರತಾಚರಣೆ, ಪೂಜೆ ಶ್ರದ್ಧೆ ಭಕ್ತಿಯಿಂದ ನೆರವೇರಿತು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಳ, ರಥಬೀದಿ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು.
ದೇವಸ್ಥಾನಗಳಲ್ಲಿ ಕಲಶ ಸ್ಥಾಪನೆ, ಲಲಿತಾ ಸಹಸ್ರನಾಮ ಪಠಣ, ಮಹಾಪೂಜೆ, ಭಜನೆ, ಶ್ರೀ ಭಗವನ್ನಾಮ ಸಂಕೀರ್ತ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಸುಮಂಗಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಹೂವು ದುಬಾರಿ…: ವರಮಹಾಲಕ್ಷ್ಮೀ ಪೂಜೆ ಹಾಗೂ ಸೋಣ ಸಂಕ್ರಮಣ ಒಂದೇ ದಿನ ಬಂದ ಕಾರಣ ಹೂವಿನ ದರ ಗಗನಕ್ಕೇರಿತ್ತು. ಆದರೂ ಪೂಜೆಗೆ ಬೇಕಾದ ಹೂವುಗಳನ್ನು ಭಕ್ತರು ದುಬಾರಿ ಹಣ ನೀಡಿ ಖರೀದಿಸಿದರು.