ವರಿಷ್ಠರು ಎಚ್ಚರಿಸಿದಾಗ್ಯೂ ಇನ್ನೂ ಬಾಯಿಗೆ ಬೀಗ ಬಿದ್ದಿಲ್ಲ
ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಬೇಕು ಎಂದು ವರಿಷ್ಠರು ಹೇಳಿದಾಗ್ಯೂ ಕೆಲವರು ಏನೇನೋ ಮಾತನಾಡಿದರೆ ನಾನು ಉತ್ತರ ಕೊಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪರೋಕ್ಷವಾಗಿ ಸತೀಶ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಮತ್ತು ದಲಿತ ಸಿಎಂ ವಿಚಾರದ ಬಗ್ಗೆ ಚಕಾರ ಎತ್ತದಂತೆ ನಮ್ಮ ವರಿಷ್ಠರು ಸ್ಪಷ್ಟ ಸಂದೇಶ ನೀಡಿದ್ದಾರೆ. ಕೆಲವರಿಗೆ ಈ ಸಂದೇಶ ಅರ್ಥವಾದಂತೆ ಕಾಣುತ್ತಿಲ್ಲ. ನಾವು ಮಾತ್ರ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ದುಡಿಯುತ್ತೇವೆ ಎಂದರು.
ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬೆಳಗಾವಿಯಲ್ಲಿ ನಾವು ಕಸ ಹೊಡೆದು, ಕೊಳೆ ತೆಗೆಯುತ್ತೇವೆ. ಅಲ್ಲಿನ `ಗಾಂಧಿ ಬಾವಿ'ಯ ನೀರು ಸಿಂಪಡಿಸಿ, ಶುದ್ಧಗೊಳಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬೆಳಗಾವಿ ನಾಯಕರಿಗೆ ಟಾಂಗ್ ನೀಡಿದರು.
ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ಜೈ ಬಾಪು, ಜೈ ಭೀಮ್ ಹಾಗೂ ಜೈ ಸಂವಿಧಾನ ಕಾರ್ಯಕ್ರಮದ ಪೂರ್ವಾಭಾವಿಯಾಗಿ ಶನಿವಾರ ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ನಾಲ್ಕು ಜಿಲ್ಲೆಗಳ ಸಭೆ ಮಾಡಲಿದ್ದೇವೆ. ಅಲ್ಲದೆ, ಎಲ್ಲ ಪಕ್ಷದ ಶಾಸಕರನ್ನು ಕಾರ್ಯಕ್ರಮಕ್ಕೆ ಅಹ್ವಾನ ಮಾಡಲಾಗುವುದು. ಹೀಗಾಗಿ ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸರಣಿ ದರೋಡೆ ಪ್ರಕರಣಗಳ ಬಗ್ಗೆ ಗೃಹ ಸಚಿವರು ಉತ್ತರ ಕೊಡ್ತಾರೆ. ಮಹದಾಯಿ ವಿಚಾರವಾಗಿ ಹತ್ತು ದಿನದ ಹಿಂದೆ ದೆಹಲಿಯಲ್ಲಿ ಸಭೆ ಕರೆಯಲಾಗಿತ್ತು. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದೆ. ಆದರೆ, ಏನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಡಿಸಿಎಂ ಶಿವಕುಮಾರ ಅವರೊಂದಿಗಿದ್ದರು. ವಿಮಾನ ನಿಲ್ದಾಣದಿಂದ ಅವರೊಂದಿಗೇ ಬೆಳಗಾವಿಗೆ ಪ್ರಯಾಣ ಬೆಳೆಸಿದರು.