ವರಿಷ್ಠರ ಬುಲಾವ್ ಸುಮಲತಾ ದೆಹಲಿಗೆ
ಬೆಂಗಳೂರು: ಬಿಜೆಪಿ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವಂತೆ ಸುಮಲತಾ ಅಂಬರೀಶ್ ಬೇಡಿಕೆ ಇಟ್ಟಿದ್ದಾರೆ. ಈ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದೆ.
ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ ಎಂದು ಹೇಳಲಾಗಿದೆ. ಸುಮಲತಾ ಅಂಬರೀಶ್ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎಂದು ಹೇಳಲಾಗಿತ್ತು. ಆದರೆ, ಈ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಅಭ್ಯರ್ಥಿ ಘೋಷಿಸಿರುವುದರಿಂದ ಅವರ ರಾಜಕೀಯ ನಡೆ ಕುತೂಹಲ ಮೂಡಿಸಿದೆ.
ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ ನಡೆಸಿ ನಿಖಿಲ್ ಕುಮಾರಸ್ವಾಮಿ ಅಥವಾ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಬೆಂಬಲಿಗರಿಂದ ಒತ್ತಡ ಬಂದಿದೆ. ನಿನ್ನೆಯಷ್ಟೇ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಕುಮಾರಸ್ವಾಮಿ ಸೀಟು ಹಂಚಿಕೆ ಚರ್ಚೆ ನಡೆಸಿದ್ದಾರೆ. ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸದಿದ್ದರೆ ಸುಮಲತಾ ಅವರನ್ನ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಅವರೊಂದಿಗೆ ಚರ್ಚೆ ನಡೆಸಿದೆ. ಜೆಡಿಎಸ್‌ಗೆ ಬೇರೆ ಕ್ಷೇತ್ರ ಬಿಟ್ಟು ಕೊಡಬಹುದು. ಮಂಡ್ಯ ಬದಲು ಚಿಕ್ಕಬಳ್ಳಾಪುರ ಕೊಡಲು ಕುಮಾರಸ್ವಾಮಿ ಅವರೊಂದಿಗೆ ಅಮಿತ್ ಶಾ ಚರ್ಚಿಸಿದ್ದು, ಇಂದು ಸುಮಲತಾ ಅವರು ಬಿಜೆಪಿ ನಾಯ ಕರ ಭೇಟಿ ಬಳಿಕ ಮಂಡ್ಯ ಕ್ಷೇತ್ರದ ಟಿಕೆಟ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.