For the best experience, open
https://m.samyuktakarnataka.in
on your mobile browser.

ವಾರದೊಳಗೆ ಸಿಎಂ ಮತ್ತೊಂದು ಸಭೆ ಕರೆಯಲಿದ್ದಾರೆ

02:49 PM Dec 13, 2023 IST | Samyukta Karnataka
ವಾರದೊಳಗೆ ಸಿಎಂ ಮತ್ತೊಂದು ಸಭೆ ಕರೆಯಲಿದ್ದಾರೆ

ಬೆಳಗಾವಿ: ತಾಂತ್ರಿಕ ಮಾಹಿತಿಗಳನ್ನು ಪಡೆದು, ಒಂದು ವಾರದೊಳಗಾಗಿ ಪಂಚಮಸಾಲಿ ಮುಖಂಡರ ಸಭೆ ಕರೆದು, ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತವಾದ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಬೆಳಗಾವಿಯಲ್ಲಿ ಬುಧವಾರ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ನಿರಂತರವಾಗಿ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಸುಧೀರ್ಘ ಹೋರಾಟ ನಡೆದಿದೆ. ಏನನ್ನಾದರೂ ಪಡೆಯಬೇಕಾದರೆ ನಾವು ಹೋರಾಟ ಮಾಡಿಯೇ ಪಡೆಯಬೇಕಾಗಿದೆ. ಹೋರಾಟ ನಮ್ಮ ರಕ್ತದಲ್ಲೇ ಬಂದಿದೆ ಎಂದು ಅವರು ಹೇಳಿದರು. ನಾವು ಪಂಚಮಸಾಲಿ‌ ಮಂತ್ರಿಗಳು ಹಾಗೂ ಶಾಸಕರು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇವೆ. ನಿನ್ನೆ ಕೂಡ ಭೇಟಿಯಾಗಿ ಮಾತನಾಡಿದ್ದೇವೆ‌. ವಾರದೊಳಗಾಗಿ ಹಿಂದುಳಿದ ವರ್ಗಗಳ ಆಯೋಗದ ಜತೆ ಚರ್ಚಿಸಿ, ಪಂಚಮಸಾಲಿ ಪ್ರಮುಖರ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ನಾವು ಯಾರ ಪಾಲನ್ನೂ ಕೇಳುತ್ತಿಲ್ಲ, ಬೇರೆಯವರಿಗೆ ಕೊಡಲು ನಮ್ಮ ಅಭ್ಯಂತರವಿಲ್ಲ ನಮಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಅವರು ತಿಳಿಸಿದರು. ನಾವು ನ್ಯಾಯ ಸಿಗುವವರೆಗೂ ಶಾಂತಿಯುತವಾಗಿ ಹೋರಾಟ ಮಾಡೋಣ, ಸಮಾಜದ ಮಗಳಾಗಿ ನಾನು ಹೋರಾಟದಲ್ಲಿ‌ ಹಿಂದಿನಿಂದಲೂ ಭಾಗವಹಿಸುತ್ತ ಬಂದಿದ್ದೇನೆ. ಮುಂದೆಯೂ ಹೋರಾಟದಲ್ಲಿ ಇರುತ್ತೇನೆ. ನಮಗೆ ಖಂಡಿತ ಜಯ ಸಿಗುವ ವಿಶ್ವಾಸವಿದೆ ಎಂದು ಹೆಬ್ಬಾಳಕರ್ ತಿಳಿಸಿದರು.