For the best experience, open
https://m.samyuktakarnataka.in
on your mobile browser.

ವಾಲ್ಮೀಕಿ ನಿಗಮದ ಯೋಜನೆ ಫಲಾನುಭವಿಗಳಿಗೆ ತಲುಪಿಸಿ

07:35 PM Jul 15, 2024 IST | Samyukta Karnataka
ವಾಲ್ಮೀಕಿ ನಿಗಮದ ಯೋಜನೆ ಫಲಾನುಭವಿಗಳಿಗೆ ತಲುಪಿಸಿ

ಕೊಪ್ಪಳ: ಪರಿಶಿಷ್ಟ ಪಂಗಡದ ಜನತೆಯ ಕಲ್ಯಾಣಕ್ಕಾಗಿ ಮೀಸಲಿಟ್ಟ 187 ಕೋಟಿ ರೂ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಪರಸ್ಪರ ಹಂಚಿಕೊಂಡಿರುವುದು ಅಕ್ಷಮ್ಯ ಅಪರಾಧ. ಅಲ್ಲದೇ ವಿವಿಧ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಶೀಘ್ರವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ ಹೇಳಿದರು.
ನಗರದ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಸಾಲ ಸೌಲಭ್ಯ ಪಡೆದು, ಏನಾದರೂ ಉದ್ಯೋಗ ನಡೆಸಲು ತೀರ್ಮಾನಿಸಿ ಸಮುದಾಯದ ಯುವ ಸಮೂಹ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಹಾಕಿದ್ದು, ಆ ಅರ್ಜಿಗಳನ್ನು ನೂರೆಂಟು ಕುಂಟು ನೆಪ ಹೇಳಿ, ಅಧಿಕಾರಿಗಳು ಕಸದ ಬುಟ್ಟಿಗೆ ಎಸೆಯುತ್ತ ಬಂದಿರುವುದು ವಿಪರ್ಯಾಸ. ಸ್ವಾತಂತ್ರ್ಯ ನಂತರದ ದಿನಗಳಿಂದ ಇಲ್ಲಿಯತನಕ ಪರಿಶಿಷ್ಟರ ಜೀವನಮಟ್ಟ ಸುಧಾರಿಸಿಲ್ಲ. ಏಕೆಂದರೆ ಅವರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡುವ ಹಣ ಸಮುದಾಯದ ವ್ಯಕ್ತಿಗಳಿಗೆ ತಲುಪುವುದೇ ಇಲ್ಲ. ವಾಲ್ಮೀಕಿ ಸಮುದಾಯದ ವ್ಯಕ್ತಿ ಪರಿಶಿಷ್ಟ ಪಂಗಡದ ಸಚಿವರಾದಾಗ ಹರ್ಷವಾಗಿತ್ತು. ಆದರೆ ಅದೇ ವ್ಯಕ್ತಿ ಸಮುದಾಯದ ಏಳಿಗೆಗೆ ಉರುಳಾಗಿದ್ದು, ಅತ್ಯಂತ ವಿಪರ್ಯಾಸ. ರಾಜ್ಯ ಸರ್ಕಾರ ಹಣ ವಶಪಡಿಕೊ‌ಂಡು, ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

ನೇರ ಸಾಲ ಯೋಜನೆಯಡಿ ಫಲಾನುಭವಿಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭಿಸಬೇಕು. ಕಾರು, ಸರಕು ವಾಹನ ಸೇರಿ ಮುಂತಾದ ವಾಹನಗಳನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ನೀಡಬೇಕು. ಬ್ಯಾಂಕ್ ಅಥವಾ ಶಾಸಕರ ಮುಖಾಂತರ ಫಲಾನುಭವಿಗಳಿಗೆ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಪ್ರತಿವರ್ಷ ಪರಿಶಿಷ್ಟ ಪಂಗಡದ ಜನತೆಯ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. ನಿಗಮದ ಕೆಲಸ-ಕಾರ್ಯಗಳು ಪಾರದರ್ಶಕತೆಯಿಂದ ನಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೆಂಗಳೂರು ಮಹಾಸಭಾದ ತಾಲ್ಲೂಕಾಧ್ಯಕ್ಷ ಶರಣಪ್ಪ ಹ.ನಾಯಕ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ, ಹುಲುಗಪ್ಪ ಇದ್ದರು.