ವಾಹನಗಳ ಮೇಲೆ ಕಲ್ಲು ತೂರಿ ದರೋಡೆಗೆ ಯತ್ನ
ದರೋಡೆಕೋರರ ಗುಂಪು ಕತ್ತಲಿನಲ್ಲಿ ಬಸ್‌ಗಳು ಹಾಗೂ ಖಾಸಗಿ ಲಾರಿ, ಕಾರು ಹಾಗೂ ಟೆಂಪೋಗಳಿಗೆ ಕಲ್ಲು ತೂರಾಟ ಮಾಡಿ ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದಾರೆ
ರಾಯಚೂರು: ನಡುರಾತ್ರಿ 20 ಸರ್ಕಾರಿ ಬಸ್‌ಗಳು ಸೇರಿದಂತೆ ಹಲವು ಖಾಸಗಿ ವಾಹನಗಳಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದು ದರೋಡೆ ಮಾಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ತಡರಾತ್ರಿ 2.30ರ ಸಮಯದಲ್ಲಿ 15ರಿಂದ20 ಜನರಿದ್ದ ದರೋಡೆಕೋರರ ಗುಂಪು ಕತ್ತಲಿನಲ್ಲಿ ಬಸ್‌ಗಳು ಹಾಗೂ ಖಾಸಗಿ ಲಾರಿ, ಕಾರು ಹಾಗೂ ಟೆಂಪೋಗಳಿಗೆ ಕಲ್ಲು ತೂರಾಟ ಮಾಡಿ ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದಾರೆ. ಚಾಲಕರು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದರೋಡೆಕೋರರು ಗುರುಗುಂಟಾ ಮಾರ್ಗವಾಗಿ ಸಾಗುವ 20 ಬಸ್‌ಗಳ ಮೇಲೆ ಕಲ್ಲು ತೂರಿದ್ದಾರೆ. ಬಸ್‌ಗಳ ಚಾಲಕರು ಸ್ಥಳದಲ್ಲಿ ನಿಲ್ಲಿಸಿದ್ದರೆ ದರೋಡೆಕೋರರು ಲೂಟಿ ಮಾಡುವ ಸಾಧ್ಯತೆ ಇತ್ತು. ಈ ಕುರಿತು ಚಾಲಕರಿಂದ ನಿಖರವಾದ ಮಾಹಿತಿ ಪಡೆಯುತ್ತಿದ್ದೇವೆ. ಒಟ್ಟು ಎಷ್ಟು ಬಸ್‌ಗಳಿಗೆ ದರೋಡೆಕೋರರು ಕಲ್ಲು ಎಸೆದಿದ್ದಾರೆ ಎನ್ನುವ ಮಾಹಿತಿ ಪಡೆದು ದೂರು ದಾಖಲು ಮಾಡಲಾಗುವುದು' ಎಂದು ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಿಷಯ ತಿಳಿದ ಹಟ್ಟಿ, ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿದ್ದು. ಪೊಲೀಸ್ ಠಾಣೆಯಲ್ಲಿ ಕೆಕೆಆರ್‌ಟಿಸಿ ಬಸ್ ಚಾಲನಾ ಸಿಬ್ಬಂದಿಗಳು ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.