ವಿಕಲಚೇತನರ ನಿಧಿಯನ್ನೂ ಬಿಡದ ರಾಜ್ಯ ಸರ್ಕಾರ
ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗ ಅಂಗವಿಕಲರ ನಿಧಿಯನ್ನೂ ಬಿಡುತ್ತಿಲ್ಲ. ಅದಕ್ಕೂ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಆರೋಪಿಸಿದ್ದಾರೆ.
ರಾಜ್ಯದ ಜನಕ್ಕೆ ಐದು ಗ್ಯಾರಂಟಿಗಳ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೀಗ ಒಂದೊಂದೇ ಇಲಾಖೆಗಳ ಅನುದಾನವನ್ನು ಕಿತ್ತುಕೊಳ್ಳುತ್ತಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ. ಸರ್ಕಾರ, ಅಂಗವಿಕಲರ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡುತ್ತಿದ್ದ ಅನುದಾನವನ್ನು ಶೇ.80ರಷ್ಟು ಕಡಿತಗೊಳಿಸಿ ವಿಕಲಚೇತನರ ನಿಧಿಗೆ ಕನ್ನ ಹಾಕಿದೆ ಎಂದು ಸಚಿವರು ಆರೋಪಿಸಿದ್ದಾರೆ. 2023-24ರಲ್ಲಿ 53 ಕೋಟಿ ರೂಪಾಯಿ ನೀಡುತ್ತಿದ್ದರೆ, ಈಗದನ್ನು ಕೇವಲ 10 ಕೋಟಿಗೆ ಇಳಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಿವ್ಯಾಂಗರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ ಎಂದು ಸಚಿವರು ದೂರಿದ್ದಾರೆ. ವಿಕಲಚೇತನರ ಸಬಲತೆಗೆ ಕೇಂದ್ರದ ಪರಿಶ್ರಮ:* ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ವಿಕಲಚೇತನರ ಸಬಲತೆಗೆ ಶ್ರಮಿಸುತ್ತಿದೆ. ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನೂ ಸಾಮಾನ್ಯರಂತೆ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದ್ದಾರೆ.
ಮೋದಿ ಸರ್ಕಾರ ಭಾರತದಲ್ಲಿ ದಿವ್ಯಾಂಗರ ಜೀವನ ಸುಲಭವಾಗಿಸಲು ನಿರಂತರ ಶ್ರಮಿಸುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅವರ ಅನುದಾನಕ್ಕೂ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ ಜೋಶಿ. ಕೇಂದ್ರ ಸರ್ಕಾರ 90ಕ್ಕೂ ಅಧಿಕ ವಿಮಾನ ನಿಲ್ದಾಣ, 700ಕ್ಕೂ ಅಧಿಕ ರೈಲು ನಿಲ್ದಾಣಗಳು ಮತ್ತು 1700ಕ್ಕು ಹೆಚ್ಚು ಸರ್ಕಾರಿ ಕಟ್ಟಡಗಳಲ್ಲಿ ದಿವ್ಯಾಂಗರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಕಲ್ಪಿಸಿದೆ ಎಂದು ತಿಳಿಸಿದ್ದಾರೆ. 29 ಲಕ್ಷ ದಿವ್ಯಾಂಗರಿಗೆ ಉಪಕರಣ: 17000 ಶಿಬಿರಗಳ ಮೂಲಕ 29 ಲಕ್ಷ ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಗಿದೆ. ವಂದೇ ಭಾರತ್ ರೈಲುಗಳಲ್ಲಿ ಬಾಗಿಲು, ಶೌಚಾಲಯಗಳನ್ನು ದಿವ್ಯಾಂಗರಿಗಾಗಿ ಸುಧಾರಿಸಲಾಗಿದೆ ಎಂದು ಹೇಳಿದ್ದಾರೆ.
1.1 ಕೋಟಿ UDID ಕಾರ್ಡ್: ದೇಶದಲ್ಲಿ 1.1 ಕೋಟಿ UDID ಕಾರ್ಡ್‌ಗಳ ಮೂಲಕ ದಿವ್ಯಾಂಗ ಸಮುದಾಯಕ್ಕೆ ಕೇಂದ್ರದ ವಿವಿಧ ಯೋಜನೆಗಳ ಲಾಭಗಳನ್ನು ತಲುಪಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.