For the best experience, open
https://m.samyuktakarnataka.in
on your mobile browser.

ವಿಕಸಿತ ಭಾರತ ಹಾಗೂ ವಿಶ್ವ ಬಂಧು

04:00 AM May 07, 2024 IST | Samyukta Karnataka
ವಿಕಸಿತ ಭಾರತ ಹಾಗೂ ವಿಶ್ವ ಬಂಧು

೧. ಮುಂದಿನ ೨೫ ವರ್ಷಗಳಲ್ಲಿ ವಿಕಸಿತ ಭಾರತದ ಗುರಿಯನ್ನು ತಲುಪುವ ಹಾದಿಯು ಅನೇಕ ಅಗತ್ಯಗಳನ್ನು ಒಳಗೊಂಡಿದೆ. ಮೊದಲಿಗೆ ಅದಕ್ಕೆ ರಾಷ್ಟ್ರದ ಬಗ್ಗೆ ಒಂದು ದೃಷ್ಟಿಕೋನ ಹೊಂದಿರಬೇಕು ಮತ್ತು ಅಷ್ಟೇ ಮುಖ್ಯವಾಗಿ, ಅದನ್ನು ತಳಮಟ್ಟದಲ್ಲಿ ಕಾರ್ಯಗತಗೊಳಿಸುವ ಸಾಮರ್ಥ್ಯ ಇರಬೇಕು. ಟ್ರ್ಯಾಕ್ ರೆಕಾರ್ಡ್ ಉಳಿಸಿಕೊಳ್ಳುವ ಮೂಲಕ ನಾವು ಅದರಲ್ಲಿ ಭರವಸೆ ಬೆಳೆಸಿಕೊಳ್ಳಬಹುದು. ನಿರಂತರ ಪ್ರಗತಿ ಮತ್ತು ನಿರಂತರ ಸುಧಾರಣೆ ಕೇವಲ ರಾಜಕೀಯ ಸ್ಥಿರತೆಯ ವಾತಾವರಣದಲ್ಲಿ ಮಾತ್ರ ಸಾಧ್ಯ. ಅದರಿಂದ ಮಾತ್ರವೇ ದೀರ್ಘಕಾಲೀನ ಸ್ವರೂಪದ ನೀತಿ-ನಿರೂಪಣೆಗಳ ಪರಿಕಲ್ಪನೆ ಮಾಡಲು ಮತ್ತು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಹೆಚ್ಚಿನವು ಮುಂಬರುವ ವಾರಗಳಲ್ಲಿ ಭಾರತೀಯ ಜನರ ಸಂಚಿತ ರಾಜಕೀಯ ಆಯ್ಕೆಯಿಂದ ನಿರ್ಧರಿಸಲ್ಪಡುತ್ತವೆ. ಆದರೆ ಇಲ್ಲಿರುವ ಒಂದು ನಿರ್ಣಾಯಕ ಅಂಶವೆಂದರೆ ಅಂತರರಾಷ್ಟ್ರೀಯ ಪರಿಸರ ಮತ್ತು ಅದು ವಿಕಸಿತ ಭಾರತಕ್ಕೆ ಅವಕಾಶಗಳು ಮತ್ತು ಸವಾಲುಗಳನ್ನು ಎಸೆಯುವ ಸಾಮರ್ಥ್ಯ.
೨. ತಾತ್ವ್ತಿಕವಾಗಿ, ದೇಶಗಳು ತಮ್ಮ ರಾಷ್ಟ್ರೀಯ ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಜಗತ್ತನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ತಮ್ಮ ವಿದೇಶಾಂಗ ನೀತಿಯನ್ನು ರೂಪಿಸುತ್ತವೆ. ಅದರ ಗುರಿಗಳು ಹೆಚ್ಚಾಗಿ ಸಂಪನ್ಮೂಲಗಳಿಗೆ, ಮಾರುಕಟ್ಟೆಗಳಿಗೆ, ತಂತ್ರಜ್ಞಾನಗಳಿಗೆ ಮತ್ತು ಉತ್ತಮ ಅಭ್ಯಾಸಗಳಿಗೆ ಮಾರ್ಗ ಹಾಕಿಕೊಡುವುದೇ ಆಗಿರುತ್ತದೆ. ಯಾರು ಈ ನಿಟ್ಟಿನಲ್ಲಿ ಸ್ಪಷ್ಟತೆಯನ್ನು ಹೊಂದಿದ್ದಾರೊ, ಅವರೇ ಕಳೆದ ಹಲವು ದಶಕಗಳಲ್ಲಿ ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದವರಾಗಿರುತ್ತಾರೆ. ನಮ್ಮ ವಿಚಾರದಲ್ಲಿ, ೨೦೧೪ ರಿಂದ ಆ ನಿಟ್ಟಿನ ಆದ್ಯತೆಯು ಬಹಳ ತೀಕ್ಷ್ಣವಾಗಿದೆ, ಆದರೆ ಸೈದ್ಧಾಂತಿಕ ಕಾರಣಗಳಿಗಾಗಿ, ನಮ್ಮ ಸ್ವಾತಂತ್ರ್ಯದ ಮೊದಲ ನಾಲ್ಕು ದಶಕಗಳಲ್ಲಿ ಈ ಗಮನ ಅಷ್ಟೊಂದು ಕೇಂದ್ರೀಕೃತವಾಗಿರಲಿಲ್ಲ. ಬದಲು ಅದು ಬಹಳ ಚದುರಿದಂತೆ ಇತ್ತು. ಹೊರಗಿನಿಂದ ಬಂದಂತಹ ಸಿದ್ಧಾಂತಗಳಿಂದಾಗಿ ಪ್ರಭಾವಿತರಾದ ನಾವು ಕೆಲವೊಮ್ಮೆ ನಮ್ಮ ಸ್ವಂತ ಗುರಿಗಳನ್ನು ಇತರರ ಪ್ರಯೋಜನಕ್ಕಾಗಿ ಬಿಟ್ಟು ಕೊಟ್ಟೆವು. ಈಗ ಆಗಿರುವ ದೊಡ್ಡ ಬದಲಾವಣೆಯೆಂದರೆ 'ಭಾರತ ಮೊದಲು' ಎಂಬ ಬಲಿಷ್ಠವಾದ ಪ್ರಜ್ಞೆ. ಆ ಪ್ರಜ್ಞೆಯಲ್ಲಿ ನಾವು ಯಾವ ಹಾದಿಯಲ್ಲಿ ಹೋಗಬೇಕು ಎಂದು ಯೋಚಿಸುವ ವಿಶ್ವಾಸವನ್ನು ಹೊಂದಿದ್ದೇವೆ ಹಾಗು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನೇ ನಮ್ಮ ತೀರ್ಮಾನಗಳ ಪ್ರಧಾನ ಮಾಪಕವಾಗಿ ಬಳಸುತ್ತೇವೆ. ಇದು ನಮ್ಮ ಭಾಗೀದಾರರನ್ನು ಹೆಚ್ಚಿಸುವ ಮತ್ತು ನಮ್ಮ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಬಹು ಮುಖ ರಾಜತಾಂತ್ರಿಕತೆಯನ್ನು ಅನುಸರಿಸಲು ನಮ್ಮನ್ನು ಪ್ರೋತ್ಸಾಹಿಸಿದೆ. ಹಾಗೆಯೇ ನಾವು ಒಂದು ನಿಲುವನ್ನು ತೆಗೆದುಕೊಳ್ಳಬೇಕಾದಾಗ, ಅದಕ್ಕೆ ನಾವು ಹಿಂಜರಿಯುವುದಿಲ್ಲ ಅಥವಾ ಒತ್ತಡಕ್ಕೆ ಒಳಗಾಗುವುದಿಲ್ಲ. ಹಾಗೂ ನಮ್ಮ ಪ್ರಸ್ತುತತೆಯ ಬಗ್ಗೆ ನಿರಂತರವಾದ ಪ್ರತಿಪಾದನೆಯನ್ನು ಮಂಡಿಸುತ್ತಿರುತ್ತೇವೆ. ಇದು ವಿಶ್ವಬಂಧು ಭಾರತ
೩. ಭಾರತವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬೇಕಾದರೆ, ಅದು ಆಳವಾದ ಹಾಗೂ ಬಲಿಷ್ಠವಾದ ರಾಷ್ಟ್ರೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಅದರಲ್ಲಿ ಹೆಚ್ಚಿನವು ಉತ್ಪಾದನೆಯನ್ನು ವಿಸ್ತರಿಸುವುದರಿಂದ ಹೊರಹೊಮ್ಮುತ್ತವೆ ಏಕೆಂದರೆ ಅದು ತಂತ್ರಜ್ಞಾನದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಗತಕಾಲದ ನಿರ್ಲಕ್ಷ್ಯದಿಂದ ಆಚೆ ಬರಲು, ನಾವು ವಿಶೇಷವಾಗಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ತಲೆಮೆಟ್ಟಿ ಹಾರಲು ಯೋಜನೆ ರೂಪಿಸುವುದು ಅತ್ಯಗತ್ಯ. ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ರೂಪುಗೊಂಡ ಬಲವಾದ ಅಂತರರಾಷ್ಟ್ರೀಯ ಸಹಯೋಗದ ಮೂಲಕ ಇದನ್ನು ಸಾಧಿಸಲಾಗುತ್ತದೆ. ಧ್ರುವೀಕೃತಗೊಂಡಿರುವ ಮತ್ತು ಅನುಮಾನಾಸ್ಪದದ ಈ ಜಗತ್ತಿನಲ್ಲಿ, ಪರಿಣಾಮಕಾರಿ ರಾಜತಾಂತ್ರಿಕತೆಯಿಂದ ಮಾತ್ರ ಆ ದಾರಿಯನ್ನು ಸುಗಮಗೊಳಿಸಿಕೊಳ್ಳಬಹುದಾಗಿದೆ. ಅಂತಾರಾಷ್ಟ್ರೀಯ ಆರ್ಥಿಕತೆಯು ಇದೀಗ ತನ್ನ ಪೂರೈಕೆ ಸರಪಳಿಗಳನ್ನು ಪುನರ್ ನಿರ್ಮಿಸುವ ಮತ್ತು ಹೆಚ್ಚು ವಿಶ್ವಾಸಾರ್ಹ ಉತ್ಪಾದನೆಯನ್ನು ಖಚಿತಪಡಿಸುವ ನಡು ಹಾದಿಯಲ್ಲಿದೆ. ಅರೆವಾಹಕಗಳು,(ಸೆಮಿಕಂಡಕ್ಟರ್ ಗಳು) ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಹಸಿರು ತಂತ್ರಜ್ಞಾನಗಳಂತಹ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತವು ಈ ಜಾಲಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದೆ ಎಂದು ಖಾತ್ರಿಪಡಿಸಿಕೊಳ್ಳಲು ವಿಶ್ವ ಬಂಧುವಿನಿಂದ ಮಾತ್ರ ಸಾಧ್ಯ.
೪. ಕೋವಿಡ್ ನಂತರದ ಜಗತ್ತಿನಲ್ಲಿ, ಎಲ್ಲಾ ಪ್ರಮುಖ ರಾಷ್ಟ್ರಗಳು ಕಾರ್ಯತಂತ್ರದ ಸ್ವಾಯತ್ತತೆಯ ಅನ್ವೇಷಣೆಯಲ್ಲಿವೆ. ಅತ್ಯಂತ ಅಭಿವೃದ್ಧಿ ಹೊಂದಿದವರು ಸಹ ತಮ್ಮ ಸಾಮರ್ಥ್ಯಗಳ ದೌರ್ಬಲ್ಯದ ಬಗ್ಗೆ ಮತ್ತು ಬೇರೆಡೆ ಅತಿಯಾದ ಏಕಾಗ್ರತೆಯ ಅವಲಂಬನೆಯ ಬಗ್ಗೆ ಕಳವಳಗೊಂಡಿದ್ದಾರೆ. ಎಲ್ಲವನ್ನೂ ಶಸ್ತ್ರಸಜ್ಜಿತಗೊಳಿಸುತ್ತಿರುವ ಜಗತ್ತಿನಲ್ಲಿ, ಭಾರತವೂ ತನ್ನ ಮೂಲಭೂತ ಅಗತ್ಯಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿಯೇ 'ಮೇಕ್ ಇನ್ ಇಂಡಿಯಾ' ನಮ್ಮ ಆರ್ಥಿಕತೆಗೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಬಹಳ ಮುಖ್ಯವಾಗಿದೆ. ರಕ್ಷಣೆಯಂತಹ ಸವಾಲಿನ ಕ್ಷೇತ್ರಗಳಲ್ಲಿ ನಾವು ಈಗಾಗಲೇ ನೋಡುತ್ತಿರುವಂತೆ, ಇದು ರಫ್ತಿನ ಸಾಧ್ಯತೆಗಳನ್ನು ಸಹ ತೆರೆಯಬಹುದು. ಭಾರತವು ಇಂದು ಸಂಶೋಧನೆ, ವಿನ್ಯಾಸ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಹೆಚ್ಚು ತೀವ್ರವಾದ ತೊಡಗಿಸಿಕೊಳ್ಳುವಿಕೆಯಿಂದ ಮಾತ್ರ ನಾವು ವಿಕಸಿತ ಭಾರತದತ್ತ ನಮ್ಮ ಪ್ರಯಾಣವನ್ನು ತ್ವರಿತಗೊಳಿಸಬಹುದು.
೫. ಭಾರತೀಯ ಕೌಶಲ್ಯಗಳು ಮತ್ತು ಪ್ರತಿಭೆಯ ಮೌಲ್ಯವನ್ನು ಅರಿತುಕೊಳ್ಳುವುದು ನಮ್ಮ ಕಾಲದ ಸ್ವಾಗತಾರ್ಹ ವಾಸ್ತವಗಳಲ್ಲಿ ಒಂದಾಗಿದೆ. ಡಿಜಿಟಲ್ ಡೊಮೇನ್ ನಲ್ಲಿ ನಂಬಿಕೆ ಮತ್ತು ಪಾರದರ್ಶಕತೆಗೆ ನೀಡಲಾದ ಆದ್ಯತೆಯಿಂದ ಇದು ವಿಸ್ತರಿಸಿದೆ. ವಿಶ್ವದ ತೀವ್ರ ಜನಸಂಖ್ಯಾ ಬದಲಾವಣೆಗಳು ವಿವಿಧ ವೃತ್ತಿಗಳಲ್ಲಿ ಹೊಸ ಬೇಡಿಕೆಗಳನ್ನು ಸೃಷ್ಟಿಸುತ್ತಿವೆ. ಅಂತಹ ನಿರೀಕ್ಷೆಗಳ ಲಾಭವನ್ನು ಪಡೆಯಲು ನಮ್ಮ ಸ್ವಂತ ಶಿಕ್ಷಣ ಮತ್ತು ತರಬೇತಿ ಸಾಮರ್ಥ್ಯಗಳನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುವ ಅಗತ್ಯವಿದೆ. ಆದರೆ ನಮ್ಮ ಪಾಲುದಾರರು ಭಾರತೀಯ ಮೌಲ್ಯಗಳು ಮತ್ತು ಅಭ್ಯಾಸಗಳೊಂದಿಗೆ ಅವರ ಹೊಂದಾಣಿಕೆಯನ್ನು ಸಂಪೂರ್ಣವಾಗಿ ಪ್ರಶಂಸಿಸಿದಾಗ ಮಾತ್ರ ಅವುಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಮತ್ತು ನಮ್ಮ ನಾಗರಿಕರಿಗೆ ಅವರು ಎಲ್ಲೇ ಇರಲಿ, ಅವರ ಸುರಕ್ಷತೆಯ ಬಗ್ಗೆ ನಾವು ಖಚಿತವಾಗಿ ಭರವಸೆ ನೀಡಬಹುದು. ಇಂದು ಇವುಗಳನ್ನು ಖಚಿತಪಡಿಸುವುದು ಭಾರತದ ವಿದೇಶಾಂಗ ನೀತಿಯ ಪ್ರಮುಖ ಗುರಿಯಾಗಿದೆ. ಯುರೋಪಿಯನ್ ರಾಷ್ಟçಗಳು, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರರೊಂದಿಗೆ ಚಲನಶೀಲತೆ ಒಪ್ಪಂದಗಳ ತೀರ್ಮಾನವನ್ನು ನಾವು ಈಗಾಗಲೇ ನೋಡಿದ್ದೇವೆ. ಭಾರತೀಯರಿಗೆ ಜಾಗತಿಕ ಕೆಲಸದ ಸ್ಥಳದ ಸೃಷ್ಟಿಯು ವೈಯಕ್ತಿಕ ಅವಕಾಶಗಳನ್ನು ವಿಸ್ತರಿಸುವುದಲ್ಲದೆ ವಿಶಾಲ ರಾಷ್ಟ್ರೀಯ/ದೇಶೀಯ ಸಾಮರ್ಥ್ಯಗಳಿಗೆ ಬಹಳ ದೊಡ್ಡ ಕೊಡುಗೆ ನೀಡುತ್ತದೆ.
೬. ನಾವು ಸಂಘರ್ಷ ಮತ್ತು ಹವಾಮಾನ ಬದಲಾವಣೆಯ ಯುಗವನ್ನು ಪ್ರವೇಶಿಸಿದ್ದೇವೆ. ಇದು ಸಂಪರ್ಕದ ಮೇಲೆ ಪ್ರಬಲ ಪರಿಣಾಮಗಳನ್ನು ಬೀರುವ ಕಾಲಘಟ್ಟ. ಪೂರೈಕೆ ಸರಪಳಿಗಳು ಹೆಚ್ಚು ಸ್ಥಿತಿಸ್ಥಾಪಕತ್ವವುಳ್ಳ ಪುನಶ್ಚೇತನಯುಕ್ತ ಮತ್ತು ಅನವಶ್ಯಕವಾದುದನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುವಂತೆಯೇ, ಲಾಜಿಸ್ಟಿಕ್ಸ್ ಕೂಡ ಆ ನಿಟ್ಟಿನಲ್ಲಿ ಸಾಗುತ್ತಿದೆ. ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ ಅಥವಾ ಸೂಯೆಜ್ ಕಾಲುವೆಯ ನಿರ್ಬಂಧದ ಪರಿಣಾಮಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಉದ್ಯಮವು ವಿಸ್ತಾರಗೊಳ್ಳಲು ಸಾಕಷ್ಟು ದೇಶಗಳು ಒಗ್ಗೂಡಿದಾಗ ಮಾತ್ರ ಇಂತಹ ಅಪಾಯವನ್ನು ಕಡಿಮೆ ಮಾಡಲು ಸಾಧ್ಯ. ಕುತೂಹಲಕಾರಿಯಾದ ಸಂಗತಿ ಎಂದರೆ, ಇತ್ತೀಚಿನ ಅನೇಕ ಪ್ರಯತ್ನಗಳು ಭಾರತದ ಮೇಲೆ ಕೇಂದ್ರೀಕೃತವಾಗಿವೆ. ಐಎಂಇಸಿ ಕಾರಿಡಾರ್ ನಮ್ಮನ್ನು ಅರೇಬಿಯನ್ ಪರ್ಯಾಯ ದ್ವೀಪದ ಮೂಲಕ ಯುರೋಪ್ ಮತ್ತು ಅಟ್ಲಾಂಟಿಕ್ ಗೆ ಸಂಪರ್ಕಿಸುತ್ತದೆ. ಐಎನ್‌ಎಸ್ಟಿಸಿಯು ಇರಾನ್ ಮತ್ತು ರಷ್ಯಾವನ್ನು ಇದೇ ಉದ್ದೇಶದೊಂದಿಗೆ ಜೋಡಿಸುತ್ತದೆ. ನಮ್ಮ ಪೂರ್ವಕ್ಕೆ, ತ್ರಿಪಕ್ಷೀಯ ಹೆದ್ದಾರಿಯು ನಮ್ಮನ್ನು ಪೆಸಿಫಿಕ್ ವರೆಗೆ ಕರೆದೊಯ್ಯಬಹುದು.
೭. ಬದಲಾಗುತ್ತಿರುವ ಜಗತ್ತಿನಲ್ಲಿ ಭದ್ರತೆ ಮತ್ತು ರಾಜಕೀಯ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಇದೇ ತರ್ಕ ಅನ್ವಯಿಸುತ್ತದೆ. ಅದು ಕ್ವಾಡ್ ಅಥವಾ ಬ್ರಿಕ್ಸ್, ಐ ೨ ಯು ೨, ಎಸ್.ಸಿ.ಒ ಅಥವಾ ಪೂರ್ವ ಏಷ್ಯಾ ಶೃಂಗಸಭೆಯಾಗಿರಲಿ, ಭಾರತದ ಹಿತಾಸಕ್ತಿಗಳು ಅದರ ಲೆಕ್ಕಾಚಾರಗಳ ಕೇಂದ್ರಬಿಂದುವಾಗಿವೆ. ಈ ಉಪಕ್ರಮಗಳು ಪಾಲುದಾರರ/ಭಾಗೀದಾರರ ವಿಶಾಲವಾದ ಶ್ರೇಣಿಯನ್ನು ಒಳಗೊಂಡಿರುತ್ತವೆ, ಕೆಲವೊಮ್ಮೆ ಪರಸ್ಪರ ವಿರೋಧಾಭಾಸವನ್ನೂ ಒಳಗೊಂಡಿರುತ್ತವೆ. ಅವೆಲ್ಲವನ್ನೂ ನಿಭಾಯಿಸಲು; ಮುಂದೆ ಕೊಂಡೊಯ್ಯಲು ವಿಶ್ವಬಂಧು ಬೇಕು. ಅದರಿಂದಾಗಿಯೇ ಇದು ಮೋದಿ ಕೀ ಗ್ಯಾರಂಟಿಯ ಪ್ರಮುಖ ಅಂಶವಾಗಿದೆ.