ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಕಸಿತ ಭಾರತ ೨೦೪೭: ಗುರಿ-ದಾರಿ

03:30 AM Aug 31, 2024 IST | Samyukta Karnataka

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ನಡೆಸಿದರು. ಅವರು ಭಾರತ ಸ್ವಾತಂತ್ರ್ಯ ಪಡೆದ ೧೦೦ನೇ ವರ್ಷದ ವೇಳೆಗೆ, ಅಂದರೆ ೨೦೪೭ರ ವೇಳೆಗೆ ಭಾರತ ಮುಂದುವರಿದ ರಾಷ್ಟ್ರವಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಷ್ಟ್ರದೊಡನೆ ಹಂಚಿಕೊಂಡರು. ಪ್ರಧಾನಿಯವರು ತಮ್ಮ ಈ ಮಹತ್ವಾಕಾಂಕ್ಷಿ ಗುರಿಯನ್ನು ವಿಕಸಿತ ಭಾರತ' ಎಂದು ಕರೆದಿದ್ದಾರೆ. ಈ ಯೋಜನೆ, ಪ್ರಸ್ತುತ ಡಾಲರ್ ಮೌಲ್ಯದಲ್ಲಿ ೨೦,೦೦೦ ಅಮೆರಿಕನ್ ಡಾಲರ್‌ಗಳ (೧೬.೭ ಲಕ್ಷ ರೂಪಾಯಿಗಳ) ನೈಜ ತಲಾ ಆದಾಯ ಸಾಧಿಸುವ ಗುರಿ ಹೊಂದಿದೆ. ಒಂದು ವೇಳೆ ಭಾರತ ಏನಾದರೂ ಈ ಗುರಿಯನ್ನು ಸಾಧಿಸಲು ಯಶಸ್ವಿಯಾದರೆ, ಭಾರತ ಗ್ರೀಸ್‌ನಂತಹ ಸಾಧಾರಣ ಶ್ರೀಮಂತ ಯುರೋಪಿಯನ್ ದೇಶಕ್ಕೆ ಸರಿಸಮನಾಗಿ ನಿಲ್ಲಲಿದೆ. ನೈಜ ತಲಾ ಆದಾಯ (ರಿಯಲ್ ಪರ್ ಕ್ಯಾಪಿಟಾ ಇನ್‌ಕಂ) ಎನ್ನುವುದು ಹಣದುಬ್ಬರಕ್ಕೆ ಸರಿ ಹೊಂದಿಸಿ, ಒಂದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆ ಸಂಪಾದಿಸುವ ಸರಾಸರಿ ತಲಾ ವಾರ್ಷಿಕ ಆದಾಯವಾಗಿದೆ. ಇದು ಜನರ ಖರೀದಿಸುವ ಸಾಮರ್ಥ್ಯದ ಪ್ರತಿಬಿಂಬವಾಗಿದ್ದು, ಅವರು ತಮ್ಮ ಆದಾಯದಲ್ಲಿ ಎಷ್ಟರಮಟ್ಟಿಗೆ ಸರಕು ಮತ್ತು ಸೇವೆಗಳನ್ನು ಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಇದು ಕಾಲಕಾಲಕ್ಕೆ ಹೆಚ್ಚಾಗುತ್ತಿರುವ ವಸ್ತುಗಳ ಬೆಲೆಯನ್ನೂ ಪರಿಗಣಿಸುತ್ತದೆ. ಇಂದಿನ ಸನ್ನಿವೇಶದಲ್ಲಿ, ಭಾರತದ ತಲಾ ಆದಾಯ ೨,೫೦೦ ಡಾಲರ್ (೨.೦೯ ಲಕ್ಷ ರೂಪಾಯಿ) ಆಗಿದೆ. ೨೦೪೭ರ ವೇಳೆಗೆ ಭಾರತ ತಾನು ಹಾಕಿಕೊಂಡಿರುವ ಗುರಿ ಸಾಧಿಸಬೇಕಾದರೆ ಕೇವಲ ೨೩ ವರ್ಷಗಳ ಅವಧಿಯಲ್ಲಿ ಭಾರತ ತನ್ನ ತಲಾ ಆದಾಯವನ್ನು ಎಂಟು ಪಟ್ಟು ಹೆಚ್ಚಿಸಬೇಕು. ಭಾರತೀಯರಿಗೆ ಸುಲಭವಾಗಿ ಅರ್ಥವಾಗುವ ಕ್ರಿಕೆಟ್ ಪರಿಭಾಷೆಯಲ್ಲಿ ಇದನ್ನು ವಿವರಿಸುವುದಾದರೆ, ಬ್ಯಾಟಿಂಗ್ ನಡೆಸಲು ಹೆಚ್ಚು ಹೆಚ್ಚು ಕಷ್ಟಕರವಾಗುತ್ತಿರುವ ಪಿಚ್‌ನಲ್ಲಿ ಏಕದಿನ ಇನಿಂಗ್ಸ್‌ನಲ್ಲಿ ೪೦೦ ರನ್‌ಗಳನ್ನು ಗಳಿಸುವ ಗುರಿಗೆ ಇದನ್ನು ಹೋಲಿಸಬಹುದು! ಭಾರತ ಈ ಗುರಿಯನ್ನು ಸಾಧಿಸಬೇಕಾದರೆ, ಹೆಚ್ಚು ಸಮರ್ಥವಾದ ಮತ್ತು ನಿರ್ಣಾಯಕವಾದ ಕಾರ್ಯತಂತ್ರಗಳ ಅವಶ್ಯಕತೆ ಇದೆ. ಹಂತ ಹಂತವಾಗಿ, ನಿಧಾನವಾಗಿ ನೀತಿಗಳನ್ನು ಜಾರಿಗೆ ತರುವುದರಿಂದ ಯಾವುದೇ ಪ್ರಯೋಜನಗಳು ಸಾಧಿತವಾಗುವುದಿಲ್ಲ. ಈ ಗುರಿಯನ್ನು ಸಾಧಿಸಬೇಕಾದರೆ, ಭಾರತ ಮುಂದಿನ ೨೩ ವರ್ಷಗಳ ಕಾಲ, ಪ್ರತಿವರ್ಷವೂ ೯.೪% ನೈಜ ಅಭಿವೃದ್ಧಿ ದರವನ್ನು ಸಾಧಿಸಬೇಕು. ಹಿಂದಿನ ಕಾಲದಲ್ಲಿ ಕೆಲವು ಆರ್ಥಿಕತೆಗಳು ಇಂತಹ ಅಸಾಧಾರಣ ಪ್ರಗತಿಯನ್ನು ಸಾಧಿಸಿವೆ. ಉದಾಹರಣೆಗೆ, ೧೯೬೦ರ ದಶಕದಿಂದ ೧೯೯೦ರ ದಶಕದ ತನಕ, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ತೈವಾನ್‌ನಂತಹ ಪೂರ್ವ ಏಷ್ಯಾದ ದೇಶಗಳು ಅಂದಾಜು ಸರಾಸರಿ ೮%ರ ಸುತ್ತಮುತ್ತಲಿನ ಪ್ರಗತಿಯ ದರವನ್ನು ಸಾಧಿಸಿದ್ದವು. ಅಪಾರ ಆರ್ಥಿಕ ಪ್ರಗತಿಯ ಈ ಅವಧಿಯನ್ನುಈಸ್ಟ್ ಏಷ್ಯನ್ ಮಿರಾಕಲ್' (ಪೂರ್ವ ಏಷ್ಯಾದ ಪವಾಡ) ಎಂದೂ ಕರೆಯಲಾಗುತ್ತದೆ. ೧೯೭೮ರ ಆರ್ಥಿಕ ಸುಧಾರಣೆಗಳ ಬಳಿಕ, ಚೀನಾ ಸಹ ತನ್ನದೇ ಆದ ಆರ್ಥಿಕ ಪವಾಡವನ್ನು ಸೃಷ್ಟಿಸಿಕೊಂಡಿತು. ಅದು ಹಲವು ವರ್ಷಗಳ ಕಾಲ ನಿರಂತರವಾಗಿ ಬಹುತೇಕ ೧೦% ಆರ್ಥಿಕ ಪ್ರಗತಿಯ ದರವನ್ನು ದಾಖಲಿಸಿತ್ತು.
ಇದೇ ರೀತಿಯ ಯಶಸ್ಸನ್ನು ಸಾಧಿಸಬೇಕು ಎಂದಾದರೆ, ಭಾರತವೂ ತನ್ನದೇ ಆದ ಹೊಸ ಪವಾಡವೊಂದನ್ನು ಸೃಷ್ಟಿಸುವುದು ಅನಿವಾರ್ಯವೂ ಹೌದು.
ಹಾಗೆಂದು ಭಾರತ ಕಣ್ಣು ಮುಚ್ಚಿಕೊಂಡು ಪೂರ್ವ ಏಷ್ಯಾ ಅಥವಾ ಚೀನಾದ ಪ್ರಗತಿ ಮಾದರಿಗಳನ್ನು ಅನುಸರಿಸಲು ಸಾಧ್ಯವಿಲ್ಲ. ಆ ದೇಶಗಳು ಅಪಾರ ಆರ್ಥಿಕ ಪ್ರಗತಿ ಸಾಧಿಸಿದ ಅವಧಿಯಲ್ಲಿ ಅವುಗಳು ಹೊಂದಿದ್ದ ರಾಜಕೀಯ ವಾತಾವರಣ ಇಂದು ಭಾರತ ಹೊಂದಿರುವ ರಾಜಕೀಯ ಪರಿಸ್ಥಿತಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಆದರೆ, ಆ ಆರ್ಥಿಕತೆಗಳು ಉತ್ಪಾದನಾ ಕೇಂದ್ರಿತ ಮತ್ತು ರಫ್ತು ಕೇಂದ್ರಿತ ಪ್ರಗತಿಯ ಮೇಲೆ ಅವಲಂಬಿತವಾಗಿದ್ದು, ಇಂದಿನಮಟ್ಟಿಗೆ ಭಾರತಕ್ಕೆ ಅದೇ ರೀತಿಯ ಅಭಿವೃದ್ಧಿ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲ.
ಹಿಂದೆ ಜಾಗತಿಕ ವ್ಯಾಪಾರ ಹೆಚ್ಚು ಮುಕ್ತವಾಗಿತ್ತು. ಆದರೆ ಇಂದು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದಂತಹ ದೇಶಗಳು, ಸಂಘಟನೆಗಳು ತಮ್ಮದೇ ಆದ ಉದ್ಯಮಗಳ ರಕ್ಷಣೆಗೆ ನಿಂತಿರುವುದರಿಂದ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಜಗತ್ತು ಅಂದಿನಷ್ಟು ತೆರೆದಿಲ್ಲ. ಈ ರಕ್ಷಣಾತ್ಮಕ ನಡೆ ಮತ್ತು ೨೦೦೮ರ ಆರ್ಥಿಕ ಬಿಕ್ಕಟ್ಟು ಮತ್ತು ೨೦೨೦ರ ಕೋವಿಡ್-೧೯ ಸಾಂಕ್ರಾಮಿಕಗಳು ಜಾಗತಿಕ ಪೂರೈಕೆ ಸರಪಳಿಯ ದೌರ್ಬಲ್ಯವನ್ನು ತೆರೆದಿಟ್ಟವು. ಇದರ ಪರಿಣಾಮವಾಗಿ ದೇಶಗಳು ಪರಸ್ಪರರೊಡನೆ ವ್ಯಾಪಾರ ನಡೆಸಲು ಹಿಂದೇಟು ಹಾಕತೊಡಗಿದವು. ೨೦೦೮ರಿಂದ ಜಾಗತಿಕ ಜಿಡಿಪಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಕೊಡುಗೆಯ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಾ ಸಾಗಿದೆ. ಕೆಲವು ಆರ್ಥಿಕ ತಜ್ಞರು ಈ ಬೆಳವಣಿಗೆಯನ್ನು `ಡಿಗ್ಲೋಬಲೈಸೇಷನ್' ಎಂದು ಕರೆದಿದ್ದಾರೆ.
ಡಿಗ್ಲೋಬಲೈಸೇಷನ್ ಎಂದರೆ, ದೇಶಗಳು ಪರಸ್ಪರರೊಡನೆ ಕಡಿಮೆ ವ್ಯಾಪಾರ ವಹಿವಾಟುಗಳನ್ನು ನಡೆಸಿ, ಆರ್ಥಿಕ ಸಂಬಂಧವನ್ನು ಕಡಿಮೆಗೊಳಿಸುವ ಪ್ರಕ್ರಿಯೆ. ಇದರ ಪರಿಣಾಮವಾಗಿ ಜಾಗತಿಕ ಸಹಕಾರ ಮತ್ತು ಏಕತೆಯ ಭಾವ ಕಡಿಮೆಯಾಗುತ್ತಾ ಬಂದಿದೆ.
ಈಗ ಜಗತ್ತನ್ನು ಹವಾಮಾನ ಬದಲಾವಣೆಯ ಭೀತಿಯೂ ಬಾಧಿಸುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಭಾರತಕ್ಕೆ ತನ್ನ ಆದಾಯವನ್ನು ಎಂಟು ಪಟ್ಟು ಹೆಚ್ಚಿಸುವುದು ಕಷ್ಟಕರ ಸವಾಲು. ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಹೊರಸೂಸುವಿಕೆ ನಡೆಸದ ಹೊರತು, ಈ ಪ್ರಮಾಣದ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಹೆಚ್ಚಿನ ದೇಶಗಳು ತಮ್ಮ ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಲು ಒಪ್ಪಿಗೆ ಸೂಚಿಸಿರುವುದರಿಂದ, ಕಟ್ಟುನಿಟ್ಟಿನ ಹವಾಮಾನ ನಿಯಮಾವಳಿಗಳನ್ನು ಪಾಲಿಸದ ಆರ್ಥಿಕತೆಗಳು ಹೆಚ್ಚಿನ ಸವಾಲು ಎದುರಿಸಬೇಕಾಗಿ ಬರಬಹುದು.
ಸ್ವಯಂಚಾಲಿತತೆ ಮತ್ತು ಕೃತಕ ಬುದ್ಧಿಮತ್ತೆಗಳು (ಎಐ) ಈಗ ಹೆಚ್ಚು ಚಾಲ್ತಿಗೆ ಬರುತ್ತಿದ್ದು, ಮಾನವರ ಅವಶ್ಯಕತೆ ಇರುವ ಕಾರ್ಯಗಳು ಮತ್ತು ಕಡಿಮೆ ಕೌಶಲ ಅವಶ್ಯಕತೆ ಇರುವ ಕೆಲಸಗಳು ಅಪಾಯದ ಅಂಚಿನಲ್ಲಿವೆ. ಈ ಕಾರಣದಿಂದಲೇ ಅಪಾರ ಪ್ರಮಾಣದ ಹಣ ಮತ್ತು ಹೆಚ್ಚಿನ ಸಂಬಳ ಹೊಂದಿರುವ ದೇಶಗಳು ರೋಬೋಟಿಕ್ಸ್ನಂತಹ ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಬಳಸುತ್ತಿವೆ.
ಚೀನಾ ಸೇರಿದಂತೆ ಪೂರ್ವ ಏಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ಆರ್ಥಿಕ ಪ್ರಗತಿಯನ್ನು ಗಮನಿಸಿದರೆ ವೇಗದ ಪ್ರಗತಿ ಸಾಧಿಸಲು ಕೃಷಿಯನ್ನು ಆರ್ಥಿಕತೆಯ ಮೂಲ ತಳಹದಿಯಾಗಿಸುವ ಬದಲು ಉತ್ಪಾದನಾ ಉದ್ಯಮವಾಗಿಸಬೇಕು ಎಂಬ ಚಿತ್ರಣ ಲಭಿಸುತ್ತದೆ.
ಒಂದು ಬಾರಿ ಉತ್ಪಾದನಾ ವಲಯ ಪ್ರಗತಿ ಸಾಧಿಸಿದರೆ ಬಳಿಕ ಸೇವಾ ವಲಯವೂ ಸಾಮಾನ್ಯವಾಗಿ ಅಭಿವೃದ್ಧಿ ಹೊಂದುತ್ತದೆ. ಆದರೆ ಭಾರತ ಇದರಿಂದ ವಿಭಿನ್ನವಾದ ದೃಷ್ಟಿಕೋನವನ್ನು ಅನುಸರಿಸುವ ಅವಶ್ಯಕತೆ ಇದ್ದು, ಭಾರತದಲ್ಲಿ ಸೇವಾ ವಲಯ ಅಭಿವೃದ್ಧಿಯ ನೇತೃತ್ವ ವಹಿಸಬೇಕಿದೆ. ಡಾ. ರಘುರಾಮ್ ರಾಜನ್ ಮತ್ತು ರೋಹಿತ್ ಲಾಂಬಾ ಅವರಂತಹ ಅರ್ಥಶಾಸ್ತ್ರಜ್ಞರು ಈ ಅಭಿಪ್ರಾಯ ಹೊಂದಿದ್ದಾರೆ.

Next Article