For the best experience, open
https://m.samyuktakarnataka.in
on your mobile browser.

ವಿಕಸಿತ ಭಾರತ @೨೦೪೭

07:00 AM Oct 20, 2024 IST | Samyukta Karnataka
ವಿಕಸಿತ ಭಾರತ  ೨೦೪೭

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮುಂದೆ ಒಂದು ಗುರಿಯನ್ನಿಟ್ಟಿದ್ದಾರೆ. ಭಾರತವು ಸ್ವಾತಂತ್ರ‍್ಯದ ಶತಮಾನೋತ್ಸವವನ್ನು ಸಂಭ್ರಮಿಸುವಷ್ಟೊತ್ತಿಗೆ ಭಾರತ ಹೇಗಿರಬೇಕು? ವಿವಿಧ ಕ್ಷೇತ್ರಗಳಲ್ಲಿ ಎಂತಹ ಸಾಧನೆಯನ್ನು ಮಾಡಿರಬೇಕು? ಜಗತ್ತಿನ ಭೂಪಟದಲ್ಲಿ ಭಾರತದ ಸ್ಥಾನವೇನಾಗಿರಬೇಕು? ಆರ್ಥಿಕಾಭಿವೃದ್ಧಿಯಲ್ಲಿ ಏನನ್ನು ಸಾಧಿಸಿರಬೇಕು ಇತ್ಯಾದಿಗಳನ್ನು ಸ್ಪಷ್ಟವಾಗಿ ಜನರ ಮುಂದಿರಿಸಿದ್ದಾರೆ. ಪ್ರಜೆಗಳ ಆಸೆ ಆಕಾಂಕ್ಷೆಗಳನ್ನು ಮೇಲೆತ್ತರಿಸಲು, ಕಣ್ಣಿನ ಮುಂದೆ ಒಂದು ಗುರಿಯನ್ನಿಟ್ಟು ಆ ದಿಶೆಯಲ್ಲಿ ಮುನ್ನಡೆಯಲು ಒಬ್ಬ ಪ್ರಧಾನಿಯಾಗಿ ಏನು ಮಾಡಬೇಕೋ ಅದನ್ನು ಅವರು ನಿಖರವಾಗಿ ಮಾಡಿದ್ದಾರೆ. ಅಮೃತ ಮಹೋತ್ಸವವನ್ನು ಆಚರಿಸುವ ಅಭಿವೃದ್ಧಿಶೀಲ ಭಾರತವು ಶತ ವರ್ಷಾಚರಣೆ ಮಾಡುವಾಗ ವಿಕಸಿತ ಭಾರತ ಅಂದರೆ ಅಭಿವೃದ್ಧಿಗೊಂಡ ಭಾರತವಾಗಬೇಕೆನ್ನುವುದು ಅವರ ಕನಸು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಭಾರತೀಯರಿಗೆಲ್ಲ ಭಾರತ@೨೦೨೦'' ರ ಕನಸನ್ನು ಕಾಣಲು ಶುರು ಹಚ್ಚಿಸಿದರು. ಅದಕ್ಕಾಗಿ ಅವರದೇ ಆದ ನೀಲನಕ್ಷೆಯನ್ನು ಕಂಡುಕೊಂಡಿದ್ದರು. ಈಗ ಅದರದೇ ಮುಂದುವರಿದ ಭಾಗವಾಗಿ ಮೋದಿ ಅವರುವಿಕಸಿತ ಭಾರತ''ದ ಕನಸನ್ನು ನನಸಾಗಿಸುವ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಭಾರತೀಯರೆಲ್ಲರ ಸಹಭಾಗಿತ್ವವನ್ನು ಬಯಸಿದ್ದಾರೆ.
ಹಾಗಾದರೆ ವಿಕಸಿತ ಭಾರತ ಎಂದರೇನು? ೨೦೨೩ರ ಡಿಸೆಂಬರ್‌ನಲ್ಲಿ ಪ್ರಧಾನಿ ವಿಕಸಿತ ಭಾರತ@೨೦೪೭ ಯುವಧ್ವನಿ'' ಕುರಿತು ದೇಶಾದ್ಯಂತ ಎಲ್ಲಾ ರಾಜಭವನಗಳಲ್ಲಿ ಏರ್ಪಟ್ಟ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಪ್ರಾಧ್ಯಾಪಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ,ಭಾರತದ ಇತಿಹಾಸದಲ್ಲಿ ಅಮೃತಕಾಲದ ಅವಧಿಯಲ್ಲಿ (೭೫ನೇ ವರ್ಷದಿಂದ ೧೦೦ ವರ್ಷದವರೆಗೆ) ಒಂದು ದೊಡ್ಡ ಬದಲಾವಣೆ ಆಗಲಿದೆ'' ಎಂದು ಭವಿಷ್ಯ ನುಡಿದರು.
ಭಾರತಕ್ಕೆ ಈ ಸಮಯವೇ ಅತ್ಯಂತ ಸೂಕ್ತವಾದ ಸಮಯವಾಗಿದೆ. ಭಾರತವು ವಿಕಸಿತವಾಗಲು ಯುವಜನರು ತಮ್ಮದೇ ಆದ ಹೊಸ ಹೊಸ ಉಪಾಯ (IDEA) ಗಳನ್ನು ಕೊಡುವಂತೆ ಅವರು ದೇಶದ ಯುವಜನತೆಗೆ ಆಹ್ವಾನಿಸಿದ್ದಾರೆ. IDEA ಶಬ್ದವು I' ದಿಂದ ಪ್ರಾರಂಭವಾಗುತ್ತದೆ. INDIA ಶಬ್ದವು ಕೂಡ I ಯಿಂದ ಪ್ರಾರಂಭವಾಗುತ್ತದೆ. ಇಂಗ್ಲಿಷಿನ I ಅಂದರೆ ಕನ್ನಡದಲ್ಲಿ ನಾನು ಎಂದರ್ಥ. ಅಂದರೆ ಅಭಿವೃದ್ಧಿಯು I ಅಂದರೆನನ್ನಿಂದ' ಪ್ರಾರಂಭವಾಗಬೇಕು ಎಂದು ಮಾರ್ಮಿಕವಾಗಿ ನುಡಿದರು. ಅವರು ಮುಂದುವರೆದು ಯುವಶಕ್ತಿಯು ಬದಲಾವಣೆಯ ಕಾರಣವೂ ಹೌದು, ಬದಲಾವಣೆಯ ಫಲಾನುಭವಿಯೂ ಹೌದು'' ಎಂದು ನುಡಿದರು. ಇದು ದೇಶದ ಯುವಜನತೆಯ ಮಹತ್ವ ಮತ್ತು ಅವರ ಮೇಲೆ ಪ್ರಧಾನಿಗಿರುವ ವಿಶ್ವಾಸವನ್ನು ತೋರಿಸುತ್ತದೆ. ಅದಕ್ಕೆ ಕಾರಣವೂ ಇದೆ. ಜಗತ್ತಿನ ಯಾವುದೇ ದೇಶದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೂ ಆಯಾ ದೇಶಗಳಲ್ಲಿ ಆಗಿರುವ ಮಹತ್ತರ ಬದಲಾವಣೆ, ಸ್ಥಿತ್ಯಂತರಗಳಿಗೆಲ್ಲ ಆ ದೇಶದ ಯುವಜನತೆಯೇ ಕಾರಣವಾಗಿದೆ. ದೇಶದ ಅಭಿವೃದ್ಧಿಯು ಜನರ ಅಭಿವೃದ್ಧಿಯಿಂದಾಗುತ್ತದೆ. ಅದು ಅವರ ವ್ಯಕ್ತಿತ್ವ ವಿಕಸನದಿಂದ ಆಗುತ್ತದೆ. ಇದರಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರವು ಅತ್ಯಂತ ಮಹತ್ವದ್ದಾಗಿರುತ್ತದೆ. ಈ ಅಮೃತಕಾಲವು ಬಹು ದೊಡ್ಡ ಪರಿವರ್ತನೆಯನ್ನು ತರುವ ಅವಧಿಯಾಗಬೇಕು ಎಂದರು. ಸುಸ್ಥಿರ ಆರ್ಥಿಕಾಭಿವೃದ್ಧಿ, ಸಾಮಾಜಿಕ ಮುನ್ನಡೆ, ಪರಿಣಾಮಕಾರಿ ಆಡಳಿತ, ಮೂಲ ಸೌಕರ್ಯಾಭಿವೃದ್ಧಿ ಮತ್ತು ಪರಮಾಣು ಶಕ್ತಿಯ ಅಭಿವೃದ್ಧಿಗಳು ವಿಕಸಿತ ಭಾರತದ ಪ್ರಮುಖ ಅಂಶಗಳಾಗಿರಬೇಕೆಂದು ಪಟ್ಟಿ ಮಾಡಿದರು. ಭಾರತವು ಜಗತ್ತಿನ ಅತಿ ದೊಡ್ಡ ೩ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ರೂಪುಗೊಳ್ಳಬೇಕು. ಅದಕ್ಕಾಗಿ ೩೦ ಟ್ರಿಲಿಯನ್ GDPಯನ್ನು ೨೫ ವರ್ಷಗಳಲ್ಲಿ ದಾಟಬೇಕು. ಇದಕ್ಕೆ ಡಿಜಿಟಲ್ ಪರಿವರ್ತನೆ, ಹಸಿರು ತಾಂತ್ರಿಕತೆಗಳು, ಉತ್ಪಾದನೆ ಮತ್ತು ನಾವೀನ್ಯತೆಗಳು ಆಧಾರವಾಗಬಲ್ಲವು. ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಿಂದ ಪ್ರೇರಿತವಾದ ಸ್ಮಾರ್ಟ್ ಸಿಟಿಗಳು, ಅತಿ ವೇಗದ ರೈಲುಗಳ ಜಾಲ ಮತ್ತು ಆಧುನಿಕ ಲಾಜಿಸ್ಟಿಕ್‌ಗಳು, ಆರ್ಥಿಕ ಪರಿಹಾರಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಆರ್ಥಿಕ ಸೇವೆಗಳಿಂದ ೨೦೪೭ ರಷ್ಟೊತ್ತಿಗೆ ದೇಶವು ಒಂದು ಜಾಗತಿಕ ಬೃಹತ್ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕು. ಭಾರತವನ್ನು ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಬಾಹ್ಯಾಕಾಶ ಸಂಶೋಧನೆ ಮತ್ತು ಜೀವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ನೇತಾರನನ್ನಾಗಿಸಬೇಕು. ಇಸ್ರೋ, ಇನ್ಫೋಸಿಸ್, ಟಿಸಿಎಸ್ ಮತ್ತು ಬಯೋಕಾನ್‌ದಂತಹ ಭಾರತೀಯ ಕಂಪನಿಗಳ ಸಹಯೋಗದೊಂದಿಗೆ ಭಾರತವನ್ನು ನಾವೀನ್ಯತೆಯ ವಿಶ್ವ ಕೇಂದ್ರವನ್ನಾಗಿಸಬೇಕು. ಸೋಲಾರ್, ಗಾಳಿಶಕ್ತಿ ಮತ್ತು ಹೈಡ್ರೋಜನ್ ಆಧಾರಿತ ತಂತ್ರಜ್ಞಾನದ ವ್ಯಾಪಕವಾದ ಉಪಯೋಗದಿಂದನೆಟ್ ಜೀರೋ ಎಮಿಷನ್''ನ್ನು ಸಾಧಿಸಿ `ಹಸಿರು ಶಕ್ತಿ' ಕ್ಷೇತ್ರದಲ್ಲಿ ನೇತೃತ್ವ ಹೊಂದಬೇಕು. ಕೃತಕ ಬುದ್ಧಿಮತ್ತೆ, ಐಓಟಿ ಮತ್ತು ಆಟೋಮೇಷನ್‌ಗಳ ಸಹಾಯದಿಂದ ಭಾರತದ ಉತ್ಪಾದನಾ ಕ್ಷೇತ್ರವನ್ನು ಪರಿಣಾಮಕಾರಿಯಾಗಿಸಿ, ರಫ್ತನ್ನು ಉತ್ತೇಜಿಸಿ, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕು.
ಇನ್ನು ಆಹಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೈಗೆಟಕುವ ಮೂಲಸೌಕರ್ಯ ಸಹಿತ ಒಂದು ಡಿಜಿಟಲ್ ಆರೋಗ್ಯದ ಬಲಾಢ್ಯ ವ್ಯವಸ್ಥೆಯನ್ನು ರೂಪಿಸಬೇಕು. ಕೃತಕ ಬುದ್ಧಿಮತ್ತೆ ಆಧಾರಿತ ಪರಿಶೋಧನೆ ಮತ್ತು ಸಂಶೋಧನೆ, ಆಧುನಿಕ ತಂತ್ರಜ್ಞಾನಗಳ ನಿರ್ಮಾಣವಾಗಬೇಕು. ವೈದ್ಯಕೀಯ ವ್ಯವಸ್ಥೆಗಳು ಸಾರ್ವಜನಿಕರ ಆರೋಗ್ಯ ಭದ್ರತೆ, ಜಾಗತಿಕ ಮಟ್ಟದ ಕೌಶಲ್ಯಯುಕ್ತ ವಿಜ್ಞಾನ ತಂತ್ರಜ್ಞಾನ, ಆರ್ಥಿಕತೆ ಮತ್ತು ಗಣಿತ (STEM) ಗಳ ಡಿಜಿಟಲ್ ಶಿಕ್ಷಣದಿಂದ ಜಾಗತಿಕ ಅವಶ್ಯಕತೆಗನುಗುಣವಾದ ಶೈಕ್ಷಣಿಕ ವ್ಯವಸ್ಥೆಯನ್ನು ನಿರ್ಮಿಸಬೇಕು. ಸಂಶೋಧನೆ ನಾವೀನ್ಯತೆಗಳಿದ್ದಲ್ಲಿ ಭಾರತವು ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಬಲ್ಲದು.
ಭಾರತದ ಜನಸಂಖ್ಯೆಯೇ ಅದರ ಬಂಡವಾಳ! ಸರಿಯಾದ ನೀತಿ ನಿರೂಪಣೆ ಮತ್ತು ಅನುಷ್ಠಾನದಿಂದ ಬೃಹತ್ ಸಂಖ್ಯೆಯ ಯುವಜನತೆಯನ್ನು ಸೃಜನಾತ್ಮಕ, ಕೌಶಲಯುಕ್ತ ಮತ್ತು ಸಾಮಾಜಿಕ ಭದ್ರತೆಯುಳ್ಳ ಯುವಶಕ್ತಿಯನ್ನಾಗಿಸುವುದು. ಲಿಂಗ ಅಸಮಾನತೆಯನ್ನು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರನ್ನು ನಾಯಕತ್ವದ ಸ್ಥಾನದಲ್ಲಿರಿಸುವ ಮೂಲಕ ಹೋಗಲಾಡಿಸಬಹುದು. ಸುಧಾರಿತ e-ಆಡಳಿತ ಮತ್ತು ವಿಕೇಂದ್ರಿಕರಣಗಳು ಸಾರ್ವಜನಿಕ ಸೇವೆಗಳನ್ನು ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ಮತ್ತು ಕೈಗೆಟಕುವಂತೆ ಮಾಡಬೇಕು.
ಪರಿಸರ ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು ಒಂದು ಅತ್ಯಂತ ಮಹತ್ವದ ಮತ್ತು ಸವಾಲಿನ ಕೆಲಸವಾಗಿದೆ. ನೆಟ್ ಶೂನ್ಯ ಕಾರ್ಬನ್ ಹೊರಸೂಸುವಿಕೆ''ಯನ್ನು ಸಾಧಿಸಬೇಕಿದೆ. ಇದು ವಾತಾವರಣದ ವೈಪರೀತ್ಯಗಳನ್ನು ತಡೆಯುವಲ್ಲಿ ಜಾಗತಿಕ ಪ್ರಯತ್ನಗಳಿಗೆ ಬಹುಮುಖ್ಯ ಕೊಡುಗೆಯಾಗಲಿದೆ. ಸುಸ್ಥಿರ ಕೃಷಿ, ನೀರಿನ ಸೂಕ್ತ ಬಳಕೆ, ಸಂರಕ್ಷಣೆ ಮತ್ತು ಜೀವ ವೈವಿಧ್ಯದ ಸಂರಕ್ಷಣೆಗಳಿಗೆ ಆದ್ಯತೆಯನ್ನು ಕೊಡಬೇಕಿದೆ. ಜಾಗತಿಕ ರಾಜಕಾರಣದಲ್ಲಿ ಗಟ್ಟಿಯಾದ ರಾಜತಾಂತ್ರಿಕತೆ ಮತ್ತು ದಕ್ಷ ನಾಯಕತ್ವವನ್ನು ವಿಶ್ವಸಂಸ್ಥೆಯಂತಹ ಜಾಗತಿಕ ವೇದಿಕೆಗಳಲ್ಲಿ ಸರಿಯಾಗಿ ನಿರ್ವಹಿಸುವುದರಿಂದ ಒಂದು ಬಹುದೊಡ್ಡ ಪಾತ್ರವನ್ನು ನಿರ್ವಹಿಸಬಹುದಾಗಿದೆ. ಜಗದ ಜ್ವಲಂತ ಸಮಸ್ಯೆಗಳಾದ ವಾತಾವರಣದ ಬದಲಾವಣೆ, ಸುಭದ್ರತೆ, ಜಾಗತಿಕ ವ್ಯಾಪಾರಗಳ ಸಮಸ್ಯೆಗಳನ್ನು ಕುರಿತು ಧ್ವನಿ ಎತ್ತಬಹುದಾಗಿದೆ. ಸುಧಾರಿತ ತಾಂತ್ರಿಕತೆಯಿಂದ ಕೂಡಿದ ಆಧುನಿಕ ಸೈನ್ಯದ ಕಾರಣ ರಕ್ಷಣಾ ಮತ್ತು ಸೈಬರ್ ಸೆಕ್ಯೂರಿಟಿಗಳಲ್ಲಿ ಭಾರತದ ಒಂದು ಪ್ರಮುಖ ಜಾಗತಿಕ ಶಕ್ತಿಯಾಗಬೇಕು. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಪಾಲನೆಯ ಯತ್ನಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನಿಕತೆಯೊಂದಿಗೆ ನವೋದಯಕ್ಕೂ ತೆರೆದುಕೊಳ್ಳಬೇಕು. ಕಲೆ, ಸಿನಿಮಾ, ಸಾಹಿತ್ಯ ಮತ್ತು ಸಾಂಪ್ರದಾಯಿಕತೆಗಳು ತಾಂತ್ರಿಕ ಹಾಗೂ ಸಾಂಸ್ಕೃತಿಕ ನಾವೀನ್ಯತೆಗಳೊಂದಿಗೆ ಸಹ ಅಸ್ತಿತ್ವವನ್ನು ಹೊಂದಿರಬೇಕು. ಎಲ್ಲರನ್ನೂ ಒಳಗೊಂಡ ಸಹನೆ, ಸಹಬಾಳ್ವೆ ಪ್ರಾದೇಶಿಕತೆ, ಭಾಷಾ, ಧರ್ಮ, ಸಂಸ್ಕೃತಿಗಳ ವೈವಿಧ್ಯತೆಗಳ ಜೊತೆಗೆ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ಒಟ್ಟಾರೆಯಾಗಿ ೨೦೪೭ರಷ್ಟೊತ್ತಿಗೆ ಭಾರತವು ಒಂದು ಸ್ವಾವಲಂಬಿ, ಸಂಪದ್ಭರಿತ, ಸಶಕ್ತ, ಸುಸಜ್ಜಿತ, ಸುರಕ್ಷಿತ, ಸುಶಾಂತ, ಸುಖಭರಿತ, ಸುಸ್ಥಿರ ದೇಶವಾಗಬೇಕು. ಸುಭದ್ರ ಆರ್ಥಿಕತೆ, ಅತ್ಯಾಧುನಿಕ ತಂತ್ರಜ್ಞಾನ ಎಲ್ಲರನ್ನೊಳಗೊಂಡ ಆಡಳಿತದೊಂದಿಗೆ ಜಗದಸೂಪರ್‌ಪವರ್'' ಆಗಿ ಹೊರಹೊಮ್ಮಬೇಕು. ಅಸಮಾನತೆ, ನಾಗರೀಕರಣ, ವಾತಾವರಣ ಬದಲಾವಣೆಯಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ನಾವೀನ್ಯತೆ, ಸ್ಥಿತಿ ಸ್ಥಾಪಕತ್ವ, ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ಕಟ್ಟಲ್ಪಟ್ಟ ಪ್ರಾಜ್ವಲ್ಯಮಾನ ಭವಿಷ್ಯವನ್ನು ಭಾರತವು ಕಾರ್ಯಸಾಧು ಆಗಿಸಬೇಕು.
ಜನನಕ್ಕಿಂತ ಮೊದಲಿ (ಗರ್ಭಾವಸ್ಥೆ) ನಿಂದ ಮರಣದಾಚೆವರೆಗೂ (ಪುನರ್ಜನ್ಮ) ಜೀವನ ಸಂಸ್ಕಾರದ ಬಗೆಗೆ ನಿಖರವಾದ ವಿಚಾರವನ್ನು ಭಾರತವು ಹೊಂದಿದೆ. ಧರ್ಮಾಧರ್ಮದ ಸ್ಪಷ್ಟತೆಯನ್ನು ಹೊಂದಿರುವ ಭಗವದ್ಗೀತೆಯ ಮೂಲಕ ಮನುಷ್ಯನ ತನು-ಮನಗಳ ನಿರ್ವಹಣೆ ಬಗೆಗೆ ತಿಳಿಸಿದ ಭಾರತದ ಜೀವನ ಕಲೆಯಿಂದ ಮಾತ್ರ ಜಗತ್ತಿನ ಅನೇಕ ಸಮಸ್ಯೆಗಳು ಪರಿಹಾರವಾಗಬಲ್ಲವು. ಎಲ್ಲರ ಜೊತೆಗೂ ಸಹಿಷ್ಣುತೆಯಿಂದ ಸಂಭಾಳಿಸುವ ಕಲೆ ಅದಕ್ಕೆ ಕರಗತವಾಗಿದೆ. ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ನೋಡುವ, ಅಲ್ಲಿರುವ ಎಲ್ಲರನ್ನೂ ಸೋದರರನ್ನಾಗಿ ಕಾಣುವ, ಎಲ್ಲರನ್ನೂ ಸತ್ರಜೆಗಳನ್ನಾಗಿಸುವ ಮತ್ತು ಸಕಲ ಜೀವಾತ್ಮರಿಗೂ ಸುಖವನ್ನೇ ಬಯಸುವ ಭಾರತ ಮಾತ್ರ ಜಗದ ಗುರುವಾಗುವ ಯೋಗ್ಯತೆಯನ್ನು ಮತ್ತು ನೈತಿಕತೆಯನ್ನು ಹೊಂದಿದೆ. ಹೀಗಾಗಿ ಭಾರತದ ಹೊರತಾಗಿ ಜಾಗತಿಕ ಶಾಂತಿ ಇಲ್ಲ. ಭಾರತೀಯ ಕುಟುಂಬ ಪದ್ಧತಿ, ಸಾಮಾಜಿಕ-ಜೀವನಗಳೇ ಜಗತ್ತನ್ನು ಒಂದಾಗಿ ಬಂಧಿಸಬಲ್ಲವು.
ಕಾಯಕವೇ ಕೈಲಾಸವೆನ್ನುವ ಶ್ರಮ ಸಂಸ್ಕೃತಿ, ದಯವೇ ಧರ್ಮದ ಮೂಲವಯ್ಯವೆನ್ನುವ ಮಾನವೀಯತೆಯ ವಿಚಾರ, ಸಕಲ ಜೀವಾತ್ಮರನ್ನೂ ದೇವಾಂಶ ಸಂಭೂತರೆನ್ನುವ ಸಮಾನತೆಯ ಸಹಬಾಳ್ವೆಗಳು ಮಾತ್ರ ಜಗತ್ತನ್ನು ಸುಸ್ಥಿರ ಅಭಿವೃದ್ಧಿ, ಶಾಂತಿ ಮತ್ತು ಸಮರಸತೆಯಡೆಗೆ ಕೊಂಡೊಯ್ಯಬಲ್ಲವು. ಪರಸ್ಪರರನ್ನು ಗೌರವಿಸುವ ಮತ್ತು ಗುಣಗ್ರಾಹಿಯಾದ ಯುವ ಸಮುದಾಯವೇ ಜಗದ ಆಶಾಕಿರಣವಾಗಬಲ್ಲದು. ಆದರೆ ಭಾರತೀಯ ಚಿಂತನೆಯ ಅಡಿಪಾಯವಾಗಿರುವ ಜೀವನ ಮೌಲ್ಯಗಳ ಕ್ರಮೇಣ ಅವಸಾನವು ಒಂದು ಬಹುದೊಡ್ಡ ಸವಾಲು ಆಗಿದೆ. ಅವುಗಳಿಂದ ವಿಮುಖರಾದರೆ ವಿನಾಶ ಖಂಡಿತ. ಭಾರತೀಯ ಜೀವನ ಪದ್ಧತಿಯಿಂದ ದೂರ ಸರಿದರೆ ಸರ್ವನಾಶ ನಿಶ್ಚಿತ. ಆದ್ದರಿಂದ ಭಾರತೀಯ ಪ್ರಸಕ್ತ ಮತ್ತು ಭಾವೀ ಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಾರತ ಮತ್ತು ಭಾರತೀಯ ವಿಚಾರ ಉಳಿದರೆ ಮಾತ್ರ ವಿಶ್ವ ಉಳಿಯುತ್ತದೆ, ವಿಜೃಂಭಿಸುತ್ತದೆ. ಅದುವೇ ವಿಕಸಿತ ಭಾರತದ ಪರಿಕಲ್ಪನೆ ಕೂಡ ಆಗಿರುತ್ತದೆ. ಅಂತಹ ವಿಕಸಿತ ಭಾರತವನ್ನು ಸಾಕಾರಗೊಳಿಸಲು ದೇಶದ ಪ್ರತಿಯೊಬ್ಬ ಪ್ರಜೆಯು ಕಟಿಬದ್ಧನಾಗಿ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಬೇಕಾಗಿದೆ.