For the best experience, open
https://m.samyuktakarnataka.in
on your mobile browser.

ವಿಚಾರಣೆಯ ಬಳಿಕ ಹಾಲು ಯಾವುದು, ನೀರು ಯಾವುದು ಎಂದು ಗೊತ್ತಾಗುತ್ತೆ

05:17 PM Jul 28, 2024 IST | Samyukta Karnataka
ವಿಚಾರಣೆಯ ಬಳಿಕ ಹಾಲು ಯಾವುದು  ನೀರು ಯಾವುದು ಎಂದು ಗೊತ್ತಾಗುತ್ತೆ

ಮಂಗಳೂರು: ಮೈಸೂರಿನ ಮೂಡಾ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆಗೆ ಆದೇಶಿಸಿದ್ದಾರೆ. ವಿಚಾರಣೆ ಬಳಿಕ ಹಾಲು ಯಾವುದು, ನೀರು ಯಾವುದೆಂದು ಗೊತ್ತಾಗುತ್ತದೆ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಮೂಡಾ ಹಗರಣ ಖಂಡಿಸಿ ಮೈಸೂರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ನಡೆಸುವ ವಿಚಾರ ಕುರಿತಂತೆ ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರಿಗೆ ಕಲ್ಲು ಹೊಡೆಯುವ ಮೊದಲು ಅವರು ಗಾಜಿನ ಮನೆಯಲ್ಲಿದ್ದಾರೆಂದು ತಿಳಿದುಕೊಂಡರೆ ಬಹಳ ಒಳ್ಳೆಯದು ಎಂದು ಬಿಜೆಪಿ ಹಾಗೂ ಜೆಡಿಎಸ್‌ಗೆ ಬುದ್ದಿಮಾತು ಹೇಳಿದ ಅವರು, ಹಗರಣ ಆಗಿದೆಯೋ ಗೊತ್ತಿಲ್ಲ, ಆದರೆ ಆಪಾದನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲದೆ ಸಿಬಿಐ, ಇಡಿ ಎಲ್ಲವೂ ವಿಚಾರಣೆಗೆ ಮುಂದೆ ಬಂದಿದೆ. ಅಂತಿಮವಾದ ನಿರ್ಣಯ ಬಂದ ಬಳಿಕ ಯಾರು ಎಲ್ಲಿದ್ದಾರೆಂದು ಗೊತ್ತಾಗುತ್ತದೆ ಎಂದರು.
ಬಿಜೆಪಿಗೆ ಟಾಂಗ್:
ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕೆಂದು ನಿರಂತರ ಪ್ರಯತ್ನ ನಡೆಯುತ್ತಿದೆ. ಬಿಜೆಪಿ, ಸಂಘ ಪರಿವಾರ, ಕಾಂಗ್ರೆಸ್ ಪಕ್ಷದ ವಿರೋಧಿಗಳು ಈ ಕೆಲಸ ಮಾಡುತ್ತಿದ್ದಾರೆ. ಇದು ಹೊಸದೇನು ಅಲ್ಲ, ೨ಜಿ, ೩ಜಿ ನಡೆದು ೧೦ ವರ್ಷ ಕಳೆಯಿತು. ಆ ಮಹಾನುಭಾವ ವಿಶ್ವಗುರು ಯಾರನ್ನಾದರೂ ಜೈಲಿಗೆ ಕಳುಹಿಸಿದ್ದಾರಾ ಎಂದು ಪ್ರಧಾನಿ ಮೋದಿ ಅವರ ಹೆಸರೆತ್ತದೆ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.
ನೀವು ತೊಳೆದುಕೊಂಡಿರಿ ಎಂದು ಮಸಿ ಬಳಿದು ಬಿಡುವುದು ಅವರ ಜಾಯಮಾನ. ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನತೆ ಉತ್ತರ ಕೊಟ್ಟಿದ್ದಾರೆ. ಕಟ್ಟಿಟ್ಟು ಕೊಟ್ಟ ಬುತ್ತಿ ಹೇಳಿಕೊಟ್ಟ ಮಾತು ಬಹಳ ದೂರ ಬರೋದಿಲ್ಲ. ಸುಳ್ಳು ಬಹಳ ದಿವಸ ಇರೋದಿಲ್ಲ ಎಂದು ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದರು.
ಕರ್ನಾಟಕದಲ್ಲಿ ಆಗಿರುವ ಘಟನೆಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರನ್ನು ಹೈಕಮಾಂಡ್ ಕರೆಯುವುದು ಸಂಪ್ರದಾಯ. ಯಾವ ವಿಚಾರ ಮಾತನಾಡುತ್ತಾರೆ ಎಂದು ನೋಡಬೇಕಿದೆ. ಸೈಟ್ ವಿಚಾರ ಬಂದಾಗ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬಹಳಷ್ಟು ಜನ ಇರುತ್ತಾರೆ. ಅದರ ಬಗ್ಗೆ ಮಾತನಾಡಿ ಏನು ಪ್ರಯೋಜನ ಇಲ್ಲ. ಹಾಗೆ ಮಾತನಾಡಬೇಕಾದರೆ ಬೇರೆ ರೀತಿಯ ವೇದಿಕೆ ಬೇಕಾಗುತ್ತದೆ ಎಂದರು.
ಸಿಎಂ, ಡಿಸಿಎಂ ವಿರುದ್ಧ ಬಿಜೆಪಿ ಮಾಡಿರುವ ಅಪಾದನೆಗೆ ತನಿಖಾ ವರದಿ ಬಂದ ಬಳಿಕ ನೋಡುವ ಎಂದ ಹರಿಪ್ರಸಾದ್, ಬಿಜೆಪಿಯ ಶೇ. ೪೦ ಕಮಿಷನ್ ಆರೋಪದ ತನಿಖೆ ಯಾಕೆ ಇನ್ನೂ ನಡೆದಿಲ್ಲ ಎಂದು ಸಿಎಂ, ಡಿಸಿಎಂನ್ನೇ ಕೇಳಬೇಕು. ಅವರೇ ಉತ್ತರಿಸುತ್ತಾರೆ, ನಾನು ಸರ್ಕಾರದಲ್ಲಿ ಇಲ್ಲ, ಆದರೆ ಸರ್ಕಾರದ ಪರವಾಗಿ ಇರುವವನು ಎಂದು ಹರಿಪ್ರಸಾದ್ ಉತ್ತರಿಸಿದರು.
ತನಿಖೆಗಳ ಬಗ್ಗೆ ಸರ್ಕಾರ ಉತ್ತರ:
ಕಾಂಗ್ರೆಸ್ ಪಕ್ಷ ದ್ವೇಷ ರಾಜಕಾರಣ, ಸೇಡಿನ ರಾಜಕಾರಣ ಮಾಡುವುದಿಲ್ಲ. ಇದನ್ನು ರಾಹುಲ್ ಗಾಂಧಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಝೀರೋ ಟಾಲರೆನ್ಸ್ ಆನ್ ಕರಪ್ಶನ್ ಎಂದಿದ್ದಾರೆ. ಯಾವುದೇ ರೀತಿಯ ಭ್ರಷ್ಟಾಚಾರ ಮಾಡುವುದಿಲ್ಲ ಎಂದಿದ್ದಾರೆ. ಪಾರ್ಟಿ ಕಾಲಕಾಲಕ್ಕೆ ಯಾವ್ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ನೋಡಬೇಕು. ತನಿಖೆಗಳ ಬಗ್ಗೆ ಮುಖ್ಯಮಂತ್ರಿ, ಮಂತ್ರಿಗಳಲ್ಲಿ ಕೇಳಬೇಕು. ಉತ್ತರ ಕೊಡಬೇಕಾದುದು ಸರ್ಕಾರ. ನಾನು ಪಕ್ಷದಲ್ಲಿ ಇದ್ದೇನೆಯೇ ವಿನಃ ಸರ್ಕಾರದಲ್ಲಿ ಇಲ್ಲ. ಸರ್ಕಾರದಲ್ಲಿ ಏನು ನಡೆಯುತ್ತದೆ ಎಂದು ಅಲ್ಲಿರುವ ಸದಸ್ಯರ ಬಳಿ ಕೇಳಬೇಕು. ಈ ಬಗ್ಗೆ ನಾನು ಕೇಳೋದಕ್ಕೆ ಹೋಗಿಲ್ಲ ಎಂದರು.
ನೀತಿ ಆಯೋಗ ಬಾಯ್ಕಾಟ್‌ಗೆ ಸಮರ್ಥನೆ:
ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಗಳು ಹೇಳಿದ್ದಕ್ಕೆ ತಾಳ ಹಾಕುವ ಹಾಗೆ ಮಾಡುವುದಕ್ಕೆ ಇದೆ. ನೀತಿ ಆಯೋಗ ಸರಿ ಇದ್ದರೆ ಬಜೆಟ್‌ನಲ್ಲಿ ಅತೀ ಹೆಚ್ಚು ತೆರಿಗೆ ಮೂಲಕ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು. ರೋಗಗ್ರಸ್ತ ರಾಜ್ಯಗಳಿಗೆ ಹೆಚ್ಚಿನ ಹಣ ಕೊಟ್ಟಿದ್ದಾರೆ. ರಕ್ತ, ಬೆವರು ಸುರಿಸಿ ತೆರಿಗೆ ಪಾವತಿಸುವ ರಾಜ್ಯಗಳು ನಾವು. ಬೇರೆಯವರಿಗೆ ಕೊಡಬೇಡಿ ಎಂದು ಹೇಳುವುದಿಲ್ಲ, ನಮ್ಮ ಪಾಲು ನಮಗೆ ಕೊಡಿ ಎಂದು ಕೇಳಿದರೂ ಕೊಟ್ಟಿಲ್ಲ. ಅದಕ್ಕೆ ನಾವು ನೀತಿ ಆಯೋಗವನ್ನು ಬಹಿಷ್ಕರಿಸಿದ್ದೇವೆ ಎಂದು ಅವರು ಸಿಎಂ ನೀತಿ ಆಯೋಗದ ಸಭೆಗೆ ತೆರಳದೇ ಇರುವುದನ್ನು ಸಮರ್ಥಿಸಿದರು.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರೋಧ ಮಾಡಿ ಬಳಿಕ ಸಭೆಗೆ ಹೋಗಿರುವುದು ಅವರಿಗೆ ಬಿಟ್ಟ ವಿಚಾರ, ಯೋಜನಾ ಆಯೋಗ ಸಾವರ್ಕರ್ ಇರಿಸಿದ ಹೆಸರಲ್ಲ. ದೇಶದ ಸ್ವತಂತ್ರ ಹೋರಾಟದ ಉತ್ತುಂಗ ನಾಯಕ ಸುಭಾಷ್ ಚಂದ್ರ ಬೋಸ್, ಮಹಾತ್ಮಾಗಾಂಧಿ, ನೆಹರೂ ಇರಿಸಿದವನ್ನೆಲ್ಲ ಬದಲಾವಣೆ ಮಾಡುತ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ಮೇಲೆ ಇವರಿಗೇನು ಕೋಪ? ಆಯೋಗದ ಹೆಸರನ್ನು ಯಾಕೆ ಬದಲಾವಣೆ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.