ವಿಜಯಪುರ: ಫುಡ್ ಪಾರ್ಕ್ ಸ್ಥಾಪನೆಯತ್ತ ಮಹತ್ತರ ಹೆಜ್ಜೆ!
ವಿಜಯಪುರ: ಆಹಾರ ಪಾರ್ಕ್ ಸಾಕಾರಗೊಳಿಸುವ ನಮ್ಮ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬಸವನಾಡಿನ ಜೋಳ, ದ್ರಾಕ್ಷಿ, ದಾಳಿಂಬೆ, ನಿಂಬೆ ವಿಶ್ವವ್ಯಾಪಿ ಹೆಸರುಗಳಿಸಿದೆ. ಇಲ್ಲಿನ ತರಕಾರಿ-ಹಣ್ಣುಗಳಿಗೂ ಹೇರಳ ಮಾರುಕಟ್ಟೆಯಿದೆ. ಜಿಲ್ಲೆಯಲ್ಲಿ ಫುಡ್ ಪಾರ್ಕ್ ಸ್ಥಾಪನೆಯಾದಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ನಮ್ಮ ರೈತರ ಬದುಕು ಮತ್ತಷ್ಟು ಹಸನಾಗಲಿದೆ.
ಆಹಾರ ಪಾರ್ಕ್ ಸಾಕಾರಗೊಳಿಸುವ ನಮ್ಮ ಪ್ರಯತ್ನ ನಿರಂತರವಾಗಿ ನಡೆದಿದೆ. ಈ ಸಂಬಂಧ ಶನಿವಾರ ಜಿಲ್ಲಾಧಿಕಾರಿಗಳಾದ ಶ್ರೀ ಟಿ. ಭೂಬಾಲನ್, ಶಾಸಕರಾದ ಶ್ರೀ ವಿಠ್ಠಲ ಕಟಕಧೋಂಡಾ, ಆಹಾರ ಮತ್ತು ಸಂಸ್ಕರಣೆ ಹಾಗೂ ಹಾರ್ವೆಸ್ಟಿಂಗ್ ಟೆಕ್ನಾಲಜಿ ವಿಶೇಷ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಸಿಂಧೂರಿ, ವಿವಿಧ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದೆ.
ಉದ್ದೇಶಿತ ಆಹಾರ ಪಾರ್ಕ್ ನಲ್ಲಿ ರೈತರಿಗೆ ಅನುಕೂಲವಾಗುವಂತೆ 25 ಸಾವಿರ ಮೆಟ್ರಿಕ್ ಸ್ಟೋರೇಜ್ ಗೆ ಅವಕಾಶ ಕಲ್ಪಿಸುವುದು, ದ್ರಾಕ್ಷಿ, ದಾಳಿಂಬೆ, ನಿಂಬೆ, ತೊಗರಿ, ಜೋಳ ಮುಂತಾದ ಬೆಳೆಗಳ ಸಂಸ್ಕರಣೆಗೆ ಆಸ್ಪದ ನೀಡುವುದು, ರೈತರ ಸಾಮಾನ್ಯ ಮೂಲಭೂತ ಸೌಕರ್ಯಗಳಾದ ಶೀತಲ ಗೃಹಗಳು, ಗೋದಾಮುಗಳು, ಪ್ಯಾಕೇಜಿಂಗ್ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದ್ದು ಶೀಘ್ರದಲ್ಲೇ ಫುಡ್ ಪಾರ್ಕ್ ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.