ವಿಜಯೇಂದ್ರ ನಮ್ಮ ನಾಯಕನಲ್ಲ…
ಬೆಳಗಾವಿ: ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು `ನಮ್ಮ ನಾಯಕ' ಎಂದು ಒಪ್ಪಿಕೊಳ್ಳಲ್ಲ ಎನ್ನುವ ಮೂಲಕ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ ವಿರುದ್ಧ ಸಿಡಿದೆದ್ದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿ ಇರುವವರೆಗೆ ಯಾವುದೇ ಪ್ರಚಾರಕ್ಕೆ ಹೋಗದಿರಲು ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು.
ಇನ್ನು ನನ್ನನ್ನು ಪ್ರಚಾರಕ್ಕೆ ಕರೆಯಲು ವಿಜಯೇಂದ್ರ ಯಾರು? ಅವನು ಕರೆದರೂ ಹೋಗಲ್ಲ. ಅವನ ಮುಖವನ್ನೂ ನೋಡೋದಿಲ್ಲ ಎಂದು ರಮೇಶ ಜಾರಕಿಹೊಳಿ ಕಿಡಿಕಾರಿದರು.
ಬರುವ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದು ಆಗಲಿ ಎಂದು ಹಾರೈಸುತ್ತೇನೆ. ಆದರೆ, ವಿಜಯೇಂದ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವವರೆಗೆ ಯಾವುದೇ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ, ಫೋನ್ ಮೂಲಕ ಪಕ್ಷದ ಪರ ಕೆಲಸ ಮಾಡುತ್ತೇನೆ. ಹೈಕಮಾಂಡ್ ಹೋಗು ಎಂದರೆ ಹೋಗುತ್ತೇನೆ. ಆದರೆ, ಈವರೆಗೂ ಯಾರೂ ನನ್ನನ್ನು ಕರೆದಿಲ್ಲ. ಹೋಗಲೇಬೇಕು ಎಂದು ಸೂಚಿಸಿದರೆ ಹೋಗುವೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಸಿಎಂ ಆಗಲು ಯೋಗೇಶ್ವರ್ ಕಾರಣ ಎಂಬ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ನೂರಕ್ಕೆ ನೂರು ಸತ್ಯ ಎಂದರು.
ಯೋಗೇಶ್ವರ್, ನಾನು ಮತ್ತು ಎನ್.ಆರ್. ಸಂತೋಷ್ ಮುಂಚೂಣಿಯಲ್ಲಿ ಇದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮತ್ತು ಆರ್ ಶಂಕರ್ ಮಂತ್ರಿ ಆಗಿದ್ದೆವು. ಆದರೆ, ನಮಗೆ ಪ್ರಮಾಣವಚನ ನೀಡಿರಲಿಲ್ಲ. ಹಾಗಾಗಿ, ಅವತ್ತೇ ಸಾಯಂಕಾಲ ಸರ್ಕಾರ ತೆಗೆಯಲು ನಿರ್ಣಯ ಕೈಗೊಂಡಿದ್ದೆವು. ಆದರೆ ನಮ್ಮ ಪಕ್ಷಕ್ಕೆ ಮುಜುಗರ ಆಗುವ ಕಾರಣಕ್ಕಾಗಿ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.