ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿದೆ
ಇದು ಅವಕಾಶ, ಸವಾಲು ಎರಡೂ ಆಗಿದೆ
ತುಮಕೂರು: ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ. ವಸ್ತುಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿ ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ಪತ್ರಿಕೆಗಳು ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೀಳು ಎಂಬ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೌಢ್ಯದ ಸುದ್ದಿಗಳನ್ನು , ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬಾರದು. ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿದೆ. ಇದು ಅವಕಾಶ, ಸವಾಲು ಎರಡೂ ಆಗಿದೆ. ದೇಶದ ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ಆಗ ಹಕ್ಕು-ಕರ್ತವ್ಯ ಎರಡೂ ಗೊತ್ತಾಗುತ್ತದೆ. ನಿಮ್ಮದು ಶಕ್ತಿಯುತ ಮಾಧ್ಯಮ. ಜನ ನಿಮ್ಮ ಕಡೆ ನೋಡ್ತಾ ಇದ್ದಾರೆ. ಈ ಎಚ್ಚರಿಕೆ ಸದಾ ಇರಬೇಕು. ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ, ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಪತ್ರಕರ್ತರ ಮಾಸಾಶನವನ್ನೂ 3 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.