ವಿಜ್ಞಾನ ಲೋಕದ ಅನರ್ಘ್ಯರತ್ನ ರಾಮನ್
ಸಿ.ವಿ. ರಾಮನ್ ವಿಜ್ಞಾನ ಲೋಕದ ಅನರ್ಘ್ಯ ರತ್ನ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರು ಚಿರಸ್ಥಾಯಿಯಾಗಿ ನೆಲೆಗೊಳಿಸಿ ಶಾಶ್ವತ ಕೀರ್ತಿಯನ್ನು ಪಡೆದ ಸಿ.ವಿ. ರಾಮನ್‌ರಿಗೆ ಅವರೇ ಸಾಟಿ. ರಾಮನ್ ಪರಿಣಾಮ ಎಂಬ ಸಂಶೋಧನೆಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಸಂಶೋಧನೆಯನ್ನು ಹೆಚ್ಚೆಂದರೆ ಇನ್ನೂರು ರೂಗಳ ಬೆಲೆಯ ಒಂದು ಉಪಕರಣದಿಂದ ಮಾಡಿದ್ದರು. ಆದರೆ ಇಂದು ರಾಮನ್ ಪರಿಣಾಮವನ್ನು ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಪಕರಣದಿಂದ ಅಧ್ಯಯನ ಮಾಡಲಾಗುತ್ತಿದೆ.
ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದ ಅವರು ಎಳೆಯ ವಯಸ್ಸಿನಿಂದಲೂ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು.
ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ತೇರ್ಗಡೆಯಾಗಿ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸಲು ತಂದೆ ತಾಯಿ ಯೋಚಿಸಿದ್ದರು. ವಿದ್ಯೆ- ಬುದ್ಧಿ ಎರಡೂ ಕೈಯಲ್ಲಿದ್ದರೂ, ಆರೋಗ್ಯ ಅವರ ಸಾಧನೆಗೆ ಸ್ವಲ್ಪ ತೊಡಕಾಯಿತು. ವಿದೇಶಕ್ಕೆ ಹೋಗುವ ಆಸೆಯನ್ನು ಬ್ರಿಟಿಷ್ ವೈದ್ಯರ ಸಲಹೆಯ ಮೇರೆಗೆ ಕೈಬಿಟ್ಟರು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜನ್ನು ಸೇರ್ಪಡೆಗೊಂಡು ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿಯನ್ನು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನವನ್ನು ಪಡೆದರು.
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಭೌತಶಾಸ್ತ್ರದಲ್ಲಿ ಅನೇಕ ಸಂಶೋಧನೆ ಕೈಗೊಂಡು ಬೆಳಕಿನ ವಿವರ್ತನೆಯ (diffraction)ಮೇಲೆ ಕೆಲಸ ಮಾಡಿದ್ದರು. ಈ ವಿಷಯದ ಮೇಲಿನ ಮೊದಲ ಸಂಶೋಧನಾ ಪ್ರಬಂಧ ೧೯೦೬ರಲ್ಲಿ ಪ್ರಕಟವಾಯಿತು.
೧೯೦೭ರಲ್ಲಿ ಸಾರ್ವಜನಿಕ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಕಲ್ಕತ್ತಾದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು.
ಆ ಹುದ್ದೆಯಲ್ಲಿ ಅವರಿಗೆ ವಿಪರೀತ ಕೆಲಸವಿದ್ದರೂ ಸಂಜೆಯ ವೇಳೆಯನ್ನು ವೈಜ್ಞಾನಿಕ ಸಂಶೋಧನೆಗೆ ಮೀಸಲಿಟ್ಟಿದ್ದರು. ಕಚೇರಿಯ ವೇಳೆ ಮುಗಿದ ನಂತರ ಅವರು ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ನ ಪ್ರಯೋಗಾಲಯದಲ್ಲಿ ಕಾಲ ಕಳೆಯುತ್ತಿದ್ದರು.
ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಜೀವನದ ಪ್ರತಿ ಹಂತದಲ್ಲೂ ಪ್ರಕೃತಿಯ ಸೊಬಗನ್ನು, ಪ್ರತಿ ವಸ್ತುವಿನಲ್ಲೂ ಇದು ಹೀಗೇಕಾಯಿತು….? ಎಂದು ವಿಮರ್ಶಿಸುವ ಗುಣವೇ ಸಿ.ವಿ .ರಾಮನ್‌ರನ್ನು ಸಂಶೋಧನೆಗೆ ತೊಡಗುವಂತೆ ಮಾಡುತ್ತಿತ್ತು.
ಯುರೋಪಿಗೆ ಸಮುದ್ರ ಮಾರ್ಗದ ಮೂಲಕ ಪ್ರಯಾಣ ಬೆಳೆಸುತ್ತಿದ್ದಾಗ ಮೆಡಿಟರೇನಿಯನ್ ಸಮುದ್ರ ಮತ್ತು ಹಿಮನದಿಗಳ ಮೂಲಕ ಸಾಗಬೇಕಿತ್ತು. ಆಗ ಸಮುದ್ರದ ನೀಲಿ ಬಣ್ಣವನ್ನು ನೋಡಿ ಇದಕ್ಕೆ ಕಾರಣವೇನಿರಬಹುದೆಂದು ತರ್ಕಿಸಿದರು.
ಭಾರತಕ್ಕೆ ಮರಳಿ ಬಂದ ನಂತರ ನೀರಿನಿಂದ ಬೆಳಕು ಚದುರಿ ಹೋಗುವುದಕ್ಕೆ ಮತ್ತು ಹಿಮದ ಪಾರದರ್ಶಕ ತುಂಡುಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳನ್ನು ಕೈಗೊಳ್ಳುತ್ತಾರೆ. ಈ ಪ್ರಯೋಗಗಳ ಆಧಾರದ ಮೇಲೆ ಅವರು ಸಮುದ್ರದ ನೀರು ಮತ್ತು ಆಕಾಶದ ನೀಲಿ ಬಣ್ಣಕ್ಕೆ ವೈಜ್ಞಾನಿಕ ವಿವರಣೆಯನ್ನು ನೀಡುತ್ತಾರೆ.
ವಾತಾವರಣದಲ್ಲಿರುವ ಧೂಳಿನ ಕಣಗಳು ಭಾಗಶಃ ಬೆಳಕನ್ನು ಚದುರಿಸುತ್ತದೆ ಎನ್ನುವುದನ್ನು ಮೊದಲಿಗೆ ಕಂಡುಹಿಡಿದರು. ಹೀಗೆ ಬೆಳಕು ಚದುರಿದಾಗ ಅದರ ಎಲ್ಲ ಬಣ್ಣಗಳೂ ಕೂಡ ಚದುರುತ್ತದೆ. ಹೆಚ್ಚು ಚದುರುವುದು ಕೆಂಪು ಬಣ್ಣ. ನಂತರ ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು ಬೆಳಕು ಚದುರುವ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಿಸುವ ಸಾಧ್ಯತೆಯಿಂದ. ಇದು ಲಕ್ಷದಲ್ಲಿ ಒಂದಕ್ಕೆ ಮಾತ್ರ ಅಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುತ್ತದೆ ಎನ್ನುವುದನ್ನು ಕಂಡುಹಿಡಿದರು. ಇದನ್ನೇ "ರಾಮನ್ ಪರಿಣಾಮ" ಎಂದು ಕರೆಯಲಾಯಿತು.
ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ನ ನಿರ್ದೇಶಕರಾಗಿ ಅಧಿಕಾರವನ್ನು ಸ್ವೀಕರಿಸಿ ರಾಮನ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಇಲ್ಲಿ ರಾಮನ್ ರಿಸರ್ಚ್ ಇನ್ಸಿಟಿಟ್ಯೂಟ್ ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಆರಂಭಿಸಿದರು. ಇದು ಯುವ ವಿಜ್ಞಾನಿಗಳಿಗೆ ಸಂಶೋಧನೆಯನ್ನು ಕೈಗೊಳ್ಳಲು ಮತ್ತು ಭೌತಶಾಸ್ತ್ರದ ಅಧ್ಯಯನದ ವೇದಿಕೆಯಾಯಿತು.
ತಮಿಳುನಾಡಿನಲ್ಲಿ ಹುಟ್ಟಿದರೂ ಬೆಂಗಳೂರಿನ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ತಮ್ಮ ವಿಶ್ರಾಂತ ಜೀವನವನ್ನು ಬೆಂಗಳೂರಿನಲ್ಲೇ ಕಳೆದರೂ ಎನ್ನುವುದು ಗಮನಾರ್ಹವಾದ ವಿಷಯ.
ಸಿವಿ ರಾಮನ್ ಅವರ ಸಂಶೋಧನೆಗೆ ದೊರೆತ ಪ್ರಶಸ್ತಿ ಪಾರಿತೋಷಕಗಳು ಅಪರಿಮಿತ. ನೈಟ್ ಪ್ರಶಸ್ತಿ, ಭಾರತ ರತ್ನ, ಲೆನಿನ್ ಶಾಂತಿ ಪ್ರಶಸ್ತಿ, ಫೆಲೋ ಆಫ್ ರಾಯಲ್ ಸೊಸೈಟಿಯ ಸದಸ್ಯತ್ವ, ಲೆನಿನ್ ಶಾಂತಿ ಪ್ರಶಸ್ತಿ, ಮೈಸೂರು ಮಹಾರಾಜರಿಂದ ದೊರೆತ ರಾಜಸಭಾ ಭೂಷಣ ಗೌರವ, ನೈಟ್ ಹುಡ್ ಪ್ರಶಸ್ತಿ, ನೊಬೆಲ್ ಪ್ರಶಸ್ತಿ…… ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಭೌತಶಾಸ್ತ್ರದ ಅಧ್ಯಯನಕ್ಕಾಗಿ ದೊರೆತಿವೆ.