ವಿಡಿಯೋ ಮೂಲಕ ಹೊರಬಂದ ಸಂಗತಿ: ಶ್ರಮಿಕ ವರ್ಗದ ಮೇಲೆ ಅಮಾನವೀಯ ಶೋಷಣೆ
ವಿಜಯಪುರ : ತುತ್ತಿನ ಚೀಲ ತುಂಬಿಕೊಳ್ಳಲು ಬೆವರು ಹರಿಸುವ ಇಟ್ಟಂಗಿಭಟ್ಟಿಯ ಶ್ರಮಿಕ ವರ್ಗದವರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಸಿದಂತೆ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ವಿಜಯಪುರದ ಗಾಂಧಿ ನಗರ ಬಳಿ ಇರುವ ಇಟ್ಟಂಗಿ ಭಟ್ಟಿಯೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ದುಡಿಯವ ವರ್ಗದ ಮೇಲೆ ಮನಬಂದಂತೆ ಪೈಪ್ ಮೊದಲಾದವುಗಳಿಂದ ಮನಬಂದಂತೆ ಥಳಿಸಿದ ಅಮಾನವೀಯ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಇಟ್ಟಂಗಿಭಟ್ಟಿ ಮಾಲೀಕ ಖೇಮು ರಾಠೋಡ ಹಾಗೂ ಆತನ ಬೆಂಬಲಿಗರಿಂದ ಕೃತ್ಯ ನಡೆದಿದೆ. ಮೂಲತ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದ ಮೂವರು ಕಾರ್ಮಿಕರಾದ ಸದಾಶಿವ ಮಾದರ್, ಸದಾಶಿವ ಬಬಲಾದಿ, ಉಮೇಶ ಮಾದರ್ ಮೇಲೆ ಹಲ್ಲೆ ನಡೆದಿದೆ. ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಈ ಶ್ರಮಿಕರಿಗೆ ಮನಬಂದಂತೆ ಥಳಿಸಲಾಗಿದೆ, ಗಾಯಗೊಂಡ ಕಾರ್ಮಿಕರು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿತರ ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖೇಮು ರಾಠೋಡ, ಸಚಿನ ಮಾನವರ ಹಾಗೂ ವಿಶಾಲ ಜುಮನಾಳ ಮೂವರು ಆರೋಪಿತರನ್ನು ಬಂಧಿಸಲಾಗಿರುತ್ತದೆ. ಇನ್ನೂಳಿದ ಆರೋಪಿತರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ.
ಕಳೆದ ದಿ.೧೫ ರಂದು ಇಟ್ಟಂಗಿ ಭಟ್ಟಿ ಮಾಲೀಕರು ಕಾರ್ಮಿಕರಿಗೆ ಫೋನ್ ಮಾಡಿ ಕೆಲಸಕ್ಕೆ ಮರಳಿ ಬರುವಂತೆ ತಿಳಿಸಿದ್ದು, ಆಗ ಕಾರ್ಮಿಕರು ಹಬ್ಬದ ಖರ್ಚಿಗೆ ೧೦ ಸಾವಿರ ಹಣ ಕೇಳಿದ್ದು, ಮಾಲೀಕ ಕೊಡುತ್ತೇನೆ ಅಂತಾ ಹೇಳಿ ಇಟ್ಟಂಗಿ ಭಟ್ಟಿಗೆ ಬರಲು ಹೇಳಿದ್ದು, ಅದರಂತೆ ಮೂವರು ಕಾರ್ಮಿಕರು ಅಂದೇ ಬೆಳಿಗ್ಗೆ ಭಟ್ಟಿಗೆ ಆಗಮಿಸಿದ್ದರು. ಆಗ ಮಾಲೀಕರು ಹಾಗೂ ಆತನ ಸಹಚರರು ಕಾರ್ಮಿಕರನ್ನು ರೂಮ್ ನಲ್ಲಿ ಕೈ ಕಾಲು ಕಟ್ಟಿ ಹಾಕಿ, ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿ ರೂಮ್ ನಲ್ಲಿ ಕೂಡಿ ಹಾಕಿದ್ದು, ಮಾರನೇಯ ದಿನ ಕಾರ್ಮಿಕರನ್ನು ರೂಮ್‌ನಿಂದ ಹೊರಗೆ ಕರೆದುಕೊಂಡು ಬಂದು ಪುನಃ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಈ ಕುರಿತಾದ ವಿಡಿಯೋ ವೈರಲ್ ಆಗಿದೆ. ಪರಿಣಾಮ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷö್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.