ವಿದ್ಯಾರ್ಥಿನಿಯ ಕೊಲೆ: ಬಾಲಕಿಯ ರುಂಡದೊಂದಿಗೆ ಆರೋಪಿ ಪರಾರಿ
ಮಡಿಕೇರಿ: ಎಸ್ಎಸ್ಎಲ್ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ಬರ್ಬರ ಹತ್ಯೆಯಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುತ್ಲು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಅಪ್ರಾಪ್ತ ಬಾಲಕಿಯನ್ನು ವಿವಾಹ ಮಾಡುವದಕ್ಕೆ ಪೋಷಕರು ಮುಂದಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕುಟುಂಬವನ್ನು ಭೇಟಿ ಮಾಡಿ ಬಾಲಕಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡುವಂತೆ ಮನವೊಲಿಸಿದ್ದರು. ಮೃತ ಬಾಲಕಿಯನ್ನು ಸೂರಲಬ್ಬಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯುಎಸ್ ಮೀನಾ ಎಂದು ಗುರುತಿಸಲಾಗಿದೆ. ಹಂತಕನನ್ನು 32 ವರ್ಷದ ಪ್ರಕಾಶ್ ಎಂದು ಗುರುತಿಸಲಾಗಿದೆ. ಹಂತಕನ ಜೊತೆ ಎಂಗೇಜ್ಮೆಂಟ್ ಮಾಡುವ ವೇಳೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಮೇ.9 ರಂದು ತಡೆದಿದ್ದರು, ಇದರಿಂದ ಕುಪಿತಗೊಂಡ ಪ್ರಕಾಶ್ ಸಂಜೆ ವೇಳೆಗೆ ಮೀನಾಳ ಮನೆಗೆ ಬಂದು ಆಕೆಯ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾನೆ. ಮಾರನೇ ದಿನ ಗ್ರಾಮದ ಪಕ್ಕದ ಅರಣ್ಯದ ಬಳಿ ಬಾಲಕಿಯ ರುಂಡವಿಲ್ಲದ ದೇಹ ಪತ್ತೆಯಾಗಿದೆ. ಆರೋಪಿ ರುಂಡದೊಂದಿಗೆ ಪರಾರಿಯಾಗಿದ್ದಾನೆ. ಪೊಲೀಸರು ಹಂತಕನಿಗಾಗಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.