ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿದ್ಯುತ್‌ಗೆ ಇಲ್ಲದ ಜಿಎಸ್‌ಟಿ ಬ್ಯಾಟರಿ ವಾಹನಕ್ಕೆ ಏಕೆ

03:34 AM Aug 30, 2024 IST | Samyukta Karnataka

ದೇಶದಾದ್ಯಂತ ವಿದ್ಯುತ್‌ಗೆ ಜಿಎಸ್‌ಟಿ ತೆರಿಗೆ ವಿಧಿಸುವ ಪದ್ಧತಿ ಇಲ್ಲ. ವಿದ್ಯುತ್ ರಂಗದಲ್ಲಿ ಬಳಸುವ ಎಲ್ಲ ಉಪಕರಣಗಳಿಗೆ ಜಿಎಸ್‌ಟಿ ಇರುವುದರಿಂದ ವಿದ್ಯುತ್‌ಗೆ ಮತ್ತೊಂದು ಜಿಎಸ್‌ಟಿ ವಿಧಿಸಲು ಬರುವುದಿಲ್ಲ. ಈಗ ಗೃಹ ಬಳಕೆದಾರರು ಬಳಸುವ ವಿದ್ಯುತ್‌ಗೆ ಜಿಎಸ್‌ಟಿ ವಿಧಿಸಲು ಬರುವುದಿಲ್ಲ. ಆದರೆ ಅದೇ ವಿದ್ಯುತ್ತನ್ನು ಬೇರೆ ರೂಪದಲ್ಲಿ ಕೊಟ್ಟು ಸೇವಾ ಶುಲ್ಕ ವಿಧಿಸಿದರೆ ಅದಕ್ಕೆ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿ ಬೀಳುತ್ತದೆ. ಇದಕ್ಕೆ ಜಿಎಸ್‌ಟಿ ಮಂಡಳಿ ಕೊಡುವ ಕಾರಣ ಸೇವಾ ಶುಲ್ಕದ ಪದ ಎಲ್ಲಿ ಬಳಕೆಯಾಗುತ್ತದೋ ಅಲ್ಲಿ ಜಿಎಸ್‌ಟಿ ಅನ್ವಯ
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಇವಿ ವಾಹನಗಳಿಗೆ ಚಾರ್ಜಿಂಗ್ ಸ್ಥಾಪಿಸಲು ದರ ನಿಗದಿಪಡಿಸಿದೆ. ಅದರಲ್ಲಿ ಈಗ ಜಿಎಸ್‌ಟಿ ಶುಲ್ಕವನ್ನೂ ಸೇರಿಸಲಾಗಿದೆ. ಬೆಸ್ಕಾಂ ಇದಕ್ಕೆ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಅವರು ಪ್ರಕಟಿಸಿರುವ ದರದಲ್ಲಿ ಜಿಎಸ್‌ಟಿ ಸೇರ್ಪಡೆಗೊಂಡಿದೆ. ಇದರ ಬಗ್ಗೆ ತೆರಿಗೆ ಸಲಹೆಗಾರರನ್ನು ಕೇಳಿದಾಗ ಅವರು ವಿದ್ಯುತ್ ರಂಗದ ಮೇಲೆ ಜಿಎಸ್‌ಟಿ ಇಲ್ಲ. ಅದರೆ ಸೇವಾ ಶುಲ್ಕ ಎಂದು ಸಂಗ್ರಹಿಸಿದರೆ ಅದಕ್ಕೆ ಜಿಎಸ್‌ಟಿ ಬೀಳುತ್ತದೆ. ನಮ್ಮ ರಾಜ್ಯದ ಪ್ರತಿನಿಧಿಯಾಗಿರುವ ಸಚಿವ ಕೃಷ್ಣ ಬೈರೇಗೌಡ ಇದನ್ನು ಅಖಿಲ ಭಾರತ ಮಟ್ಟದ ಜಿಎಸ್‌ಟಿ ಸಮಿತಿಯಲ್ಲಿ ಪ್ರಶ್ನಿಸಬೇಕು. ವಿದ್ಯುತ್ ರೀತಿ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ಅದು ಅವೈಜ್ಞಾನಿಕವಾದರೂ ಪ್ರಶ್ನಿಸದೇ ಹೋದಲ್ಲಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ವಿಚಿತ್ರ ವಾದ
ಈಗ ಬಹುತೇಕ ಬ್ಯಾಟರಿ ಚಾಲಿತ ವಾಹನ ಹೊಂದಿರುವವರು ತಮ್ಮ ಮನೆಯಲ್ಲೇ ವಿದ್ಯುತ್ ಬಳಸಿಕೊಂಡು ವಾಹನಗಳನ್ನು ರೀಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸೇವಾ ಶುಲ್ಕ, ಜಿಎಸ್‌ಟಿ ಯಾವುದೂ ಅನ್ವಯವಾಗುವುದಿಲ್ಲ. ಅದೇ ವಾಹನವನ್ನು ಹೊರಗಡೆ ಇರುವ ರೀಚಾರ್ಜ್ ಕೇಂದ್ರದಲ್ಲಿ ರಿಚಾರ್ಜ್ ಮಾಡಿಸಿದರೆ ಅದಕ್ಕೆ ಜಿಎಸ್‌ಟಿ ಕೊಡಬೇಕು. ಇದು ವಿಚಿತ್ರವಾಗಿ ಕಂಡರೂ. ನಿಜ. ವಾಹನ ಮಾಲೀಕರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸರ್ಕಾರ ಕೂಡ ಇದರ ಬಗ್ಗೆ ಕಾಳಜಿವಹಿಸಿಲ್ಲ. ಕೇಂದ್ರ ಸರ್ಕಾರ ಇವಿ ವಾಹನಗಳ ಸಂಖ್ಯೆ ಹೆಚ್ಚಿಸಬೇಕೆಂದು ಹಲವು ರಿಯಾಯಿತಿಗಳನ್ನು ಘೋಷಿಸಿದೆ. ಸೋಲಾರ್ ವಿದ್ಯುತ್ ಬಳಸಿ ಇವಿ ವಾಹನಗಳನ್ನು ರಿಚಾರ್ಜ್ ಮಾಡಿಕೊಂಡರೆ ಅದಕ್ಕೆ ಯಾವುದೇ ತೆರಿಗೆ ವಿಧಿಸಬಾರದು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಅದೇ ಸರ್ಕಾರ ಜಿಎಸ್‌ಟಿ ವಿಚಾರ ಬಂದಾಗ ಯಾವುದೇ ಮುಲಾಜಿಲ್ಲದೆ ತೆರಿಗೆ ವಸೂಲು ಮಾಡುತ್ತಿದೆ. ಇದು ಒಂದು ಕಡೆ ರಿಯಾಯಿತಿ ನೀಡಿದಂತೆ ಮತ್ತೊಂದು ಕಡೆ ಅದೇ ಹಣವನ್ನು ತೆರಿಗೆ ರೂಪದಲ್ಲಿ ಪಡೆಯುವ ವ್ಯವಹಾರ ಎಂಬುದರಲ್ಲಿ ಸಂದೇಹವಿಲ್ಲ. ಜಿಎಸ್‌ಟಿಯಿಂದ ಸರ್ಕಾರ ಮತ್ತು ಉದ್ಯಮಿಗಳಿಗೆ ಅನುಕೂಲವಾಗಿರುವುದು ನಿಜ. ಆದರೆ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಈಗ ಮೊದಲು ತೆರಿಗೆ ನೀಡಿ ಅಮೇಲೆ ವಸ್ತುಗಳನ್ನು ಬಳಸಬೇಕಾಗಿ ಬಂದಿದೆ.
ವಿದ್ಯುತ್ ಇಲಾಖೆಗೂ ಜಿಎಸ್‌ಟಿ ತೆರಿಗೆ ಇಲಾಖೆಗೂ ಸಂಬಂಧವೇ ಇಲ್ಲ. ವಿದ್ಯುತ್ ಇಲಾಖೆಯನ್ನು ಕೇಳಿದರೆ ತೆರಿಗೆ ನಮಗೆ ಬರುವುದಿಲ್ಲ ಎಂಬ ಉತ್ತರ ಬರುತ್ತದೆ. ತೆರಿಗೆ ಇಲಾಖೆ ಕೇಳಿದರೆ ನಮಗೆ ಇದು ಬರುವುದಿಲ್ಲ. ಅವರು ಸೇವಾ ಶುಲ್ಕ ವಿಧಿಸಿದರೆ ಅದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆ ಎನ್ನುತ್ತಾರೆ. ಹೀಗಾಗಿ ಇವಿ ವಾಹನ ಬಳಸುವವರು ಅನಗತ್ಯವಾಗಿ ಹೆಚ್ಚಿನ ಹಣ ನೀಡಬೇಕಾಗಿ ಬಂದಿದೆ.
ರಿಚಾರ್ಜ್ ಉಪಕರಣ
ಇವಿ ವಾಹನ ಖರೀದಿ ಮಾಡುವವರಿಗೆ ರಿಚಾರ್ಜ್ ಉಪಕರಣವನ್ನು ಕಂಪನಿಯೇ ನೀಡುತ್ತೆ. ಅದನ್ನು ತಂದು ನೇರವಾಗಿ ಮನೆಯಲ್ಲೇ ಬಳಸಬಹುದು. ಹೀಗಿರುವಾಗಿ ಹೊರಗಡೆ ರೀಚಾರ್ಜ್ ಕೇಂದ್ರದಲ್ಲಿ ಸೇವಾ ಶುಲ್ಕ ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ವಿದ್ಯುತ್ ಇಲಾಖೆ ವಿವರಿಸಬೇಕು. ಈಗಲೇ ವಿದ್ಯುತ್ ಇಲಾಖೆಯ ರೀಚಾರ್ಜಿಂಗ್ ಕೇಂದ್ರ ಮತ್ತು ಖಾಸಗಿ ಕೇಂದ್ರಗಳ ವಿದ್ಯುತ್ ಶುಲ್ಕದಲ್ಲಿ ವ್ಯತ್ಯಾಸವಿದೆ. ಇದರ ಬಗ್ಗೆ ಕೆಇಆರ್‌ಸಿ ತಲೆಕೆಡಿಸಿಕೊಂಡಿಲ್ಲ. ವಿದ್ಯುತ್ ಮಾರಾಟ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಕೆಇಆರ್‌ಸಿ ಅನುಮತಿ ಬೇಕೇ ಬೇಕು. ಅಲ್ಲದೆ ಏಕರೂಪ ದರ ಕಾಯ್ದಕೊಂಡು ಹೋಗುವುದು ಕೆಇಆರ್‌ಸಿ ಕರ್ತವ್ಯವೂ ಹೌದು. ಇನ್ನುಮುಂದೆ ಬ್ಯಾಟಿರಿ ಚಾಲಿತ ವಾಹನಗಳ ಸಂಖ್ಯೆ ಅಧಿಕಗೊಂಡಂತೆ ಇವುಗಳಲ್ಲಿ ಬಳಸುವ ವಿದ್ಯುತ್ ಬಗ್ಗೆ ಸೂಕ್ತ ನಿಯಮಗಳನ್ನು ರಚಿಸುವುದು ಅಗತ್ಯ. ವಿದ್ಯುತ್ ದರದಲ್ಲೇ ಎಲ್ಲವನ್ನೂ ಸೇರ್ಪಡೆ ಮಾಡಿದರೆ ಜಿಎಸ್‌ಟಿ ಪ್ರಶ್ನೆಯೇ ಬರುವುದಿಲ್ಲ. ಅಲ್ಲದೆ ಸೇವಾಶುಲ್ಕದ ಪ್ರಸ್ತಾಪವೇ ಬಿಲ್‌ನಲ್ಲಿ ಇಲ್ಲದಂತೆ ಮಾಡಬಹುದು. ಇದು ಸುಲಭದ ಕೆಲಸವಾದರೂ ಯಾರೂ ಜವಾಬ್ದಾರಿ ಹೊರಲು ಸಿದ್ಧರಿಲ್ಲ.
ಸೋಲಾರ್ ಚಾರ್ಜಿಂಗ್
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮತ್ತು ರೀಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದರೆ ಅತಿ ಕಡಿಮ ದರದಲ್ಲಿ ಇವಿ ವಾಹನಗಳಿಗೆ ವಿದ್ಯುತ್ ಒದಗಿಸಬಹುದು. ಈ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಕೇಂದ್ರದ ನೆರವಿನೊಂದಿಗೆ ಸ್ಥಳೀಯ ಯುವಕರಿಗೆ ನೆರವು ನೀಡಿ ವೃತ್ತಿಯಾಗಿ ಕೈಗೊಳ್ಳಲು ಅವಕಾಶ ನೀಡಬಹುದು.
ಆಗ ಇವಿ ವಾಹನಗಳ ಬಳಕೆ ಅಧಿಕಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ರೀತಿ ವಿದ್ಯುತ್ ಉತ್ಪಾದಿಸುವವರಿಗೆ ಒಂದು ಟ್ರಾನ್ಸ್ಫಾರ್ಮರ್ ಮತ್ತು ಇನ್‌ವರ್ಟರ್ ಬೇಕಾಗುತ್ತದೆ. ಕಡಿಮೆ ದರದಲ್ಲಿ ವಿದ್ಯುತ್ ಲಭಿಸಿದರೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕೇವಲ ಜಿಎಸ್‌ಟಿ ಸಂಗ್ರಹಿಸುವುದೇ ಸರ್ಕಾರದ ಕರ್ತವ್ಯವಾಗಬಾರದು.
ಸೋಲಾರ್ ಮತ್ತು ಬ್ಯಾಟರಿ ಚಾಲಿತ ವಾಹನ ಬಳಸುವುದರಿಂದ ವಾತಾವರಣಕ್ಕೆ ಇಂಗಾಲಾಮ್ಲ ಹೊರಸೂಸುವುದು ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನಸಾಮಾನ್ಯರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಕೆಲಸ ಮೊದಲು ನಿಲ್ಲಬೇಕು.

Next Article