For the best experience, open
https://m.samyuktakarnataka.in
on your mobile browser.

ವಿದ್ಯುತ್‌ಗೆ ಲೋ ವೋಲ್ಟೇಜ್ ಅನುದಾನ

03:00 AM Feb 17, 2024 IST | Samyukta Karnataka
ವಿದ್ಯುತ್‌ಗೆ ಲೋ ವೋಲ್ಟೇಜ್ ಅನುದಾನ

ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆ ಘೋಷಿಸಿದ ಮೇಲೆ ರಾಜ್ಯದ ಬಜೆಟ್ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಇದನ್ನು ಭರಿಸುವುದಲ್ಲದೆ ಐಪಿಸೆಟ್, ಬೀದಿದೀಪ ಮತ್ತು ಕುಡಿಯುವ ನೀರಿಗೆ ನೀಡುವ ಸಹಾಯಧನವನ್ನು ಮುಂದುವರಿಸಬೇಕಿದೆ.
ಈಗ ಇಲಾಖೆಗೆ ನೀಡಿರುವುದು ೨೩,೧೫೯ ಕೋಟಿ ರೂ. ಇದರಲ್ಲಿ ೧೯೧೫೨ ಕೋಟಿ ರೂ. ಪಂಪ್‌ಸೆಟ್‌ಗೆ ನೀಡುವ ಉಚಿತ ವಿದ್ಯುತ್‌ಗೆ ಬೇಕು. ಇನ್ನು ಉಳಿಯುವುದು ೪೦೦೭ ಕೋಟಿ ರೂ. ಮಾತ್ರ. ಇದರಲ್ಲಿ ಇಲಾಖೆಯ ಇತರ ಕಾಮಗಾರಿಗಳು ನಡೆಯಬೇಕು. ಕೇಂದ್ರದ ಅನುದಾನ ದೊರಕುವುದು ಅನುಮಾನ.
ಕಳೆದ ವರ್ಷದ ಬಜೆಟ್‌ನಲ್ಲಿ ೨೨೭೭೮ ಕೋಟಿ ರೂ. ನೀಡಲಾಗಿತ್ತು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಜನವರಿ ೨ ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಇರುವ ಅಡ್ಡ ಸಹಾಯಧನ (ಕ್ರಾಸ್ ಸಬ್ಸಿಡಿ)ವನ್ನು ತೆಗೆದುಹಾಕುವಂತೆ ಕೇಳಿತ್ತು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿದಂತೆ ಬಜೆಟ್‌ನಲ್ಲಿ ಕಂಡು ಬಂದಿಲ್ಲ.
ಇದರಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಇರುವ ೫೬೮೦ ಕೋಟಿ ರೂ. ಅಡ್ಡ ಸಹಾಯಧನದ ಹೊರೆ ಕಡಿಮೆಯಾಗುವ ಲಕ್ಷಣ ಇಲ್ಲ. ಕೆಇಆರ್‌ಸಿ ವಿದ್ಯುತ್ ಪರಿಷ್ಕರಣೆಗೆ ಸಾರ್ವಜನಿಕ ವಿಚಾರಣೆ ಕೈಗೊಂಡಿದ್ದು, ಮಂಗಳೂರು, ಮೈಸೂರು, ಬೆಂಗಳೂರು ನಗರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇನ್ನು ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ವಿಚಾರಣೆ ನಡೆಯಬೇಕಿದೆ.
ಮಾರ್ಚ್ ಕೊನೆಯ ವಾರಕ್ಕೆ ಹೊಸ ದರ ಪ್ರಕಟಗೊಳ್ಳಲಿದೆ. ಸರ್ಕಾರ ವಿದ್ಯುತ್ ಸಹಾಯಧನವನ್ನು ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಿದರೆ ಮಾತ್ರ ಗ್ರಾಹಕರ ಮೇಲೆ ಹೊರೆ ಕಡಿಮೆಯಾಗಬಹುದು. ಇಲ್ಲ ಎಂದರೆ ಏಪ್ರಿಲ್ ಮೊದಲ ವಾರದಲ್ಲಿ ದರ ಏರಿಕೆ ಅನಿವಾರ್ಯ.
ಹಸಿರು ಜಲಜನಕ ವಿದ್ಯುತ್‌ಗೆ ಆದ್ಯತೆ
ಸೋಲಾರ್ ಶಕ್ತಿ ಬಳಿಸಿ ನೀರನ್ನು ವಿಭಜಿಸಿ ಜಲಜನಕ ಮತ್ತು ಅಮ್ಲಜನಕ ಉತ್ಪಾದಿಸಬಹುದು. ಇದರಲ್ಲಿ ಜಲಜನಕ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಲಿದೆ.
ರಾಜ್ಯದಲ್ಲಿ ಪ್ರಾಯೋಗಿಕವಾಗಿ ೧೦ ಕೋಟಿ ರೂ.ಗಳಲ್ಲಿ ೩೦೦ಕೆವಿ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲಾಗುವುದು. ಇದು ಮುಂಬರುವ ದಿನಗಳಲ್ಲಿ ಪ್ರಮುಖ ವಿದ್ಯುತ್ ಮೂಲವಾಗಲಿದೆ.