ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿದ್ಯುತ್ ಅಪಘಾತ ಹೆಚ್ಚಳ ಹೈಕೋರ್ಟ್ ಚಾಟಿ

03:30 AM Nov 15, 2024 IST | Samyukta Karnataka

ರಾಜ್ಯದಲ್ಲಿ ವಿದ್ಯುತ್ ಅಪಘಾತಗಳು ಅಧಿಕಗೊಳ್ಳುತ್ತಿದ್ದರೂ ಎಂಜಿನಿಯರ್‌ಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದೆ. ಡಿಸೆಂಬರ್ ೨೦೨೦ರಲ್ಲಿ ಜಗಳೂರಿಗೆ ಸೇರಿದ ಹೊಲಕ್ಕೆ ಹೋಗುತ್ತಿದ್ದ ೧೫ ವರ್ಷದ ಬಾಲಕ ಪಾಂಡುರಂಗ ಜಾರಿ ಬಿದ್ದು ಕಾಲು ವಿದ್ಯುತ್ ಕಂಬಕ್ಕೆ ತಗುಲಿದ ಕೂಡಲೇ ಕೈಕಾಲು ಸ್ವಾಧೀನ ಕಳೆದುಕೊಂಡುಬಿಟ್ಟ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಉಪಯೋಗವಾಗಲಿಲ್ಲ. ಅಂದಿನಿಂದ ಇಂದಿನವರೆಗೆ ವಿಚಾರಣೆ ಮುಂದುವರಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಮ್ಮದೇನೂ ತಪ್ಪಿಲ್ಲ ಎಂದು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹೈಕೋರ್ಟ್ ಒಪ್ಪಿಲ್ಲ.
ವಿದ್ಯುತ್ ಅಪಘಾತ ಸಂಭವಿಸಿದರೆ ಅದರ ಬಗ್ಗೆ ಕೂಲಂಕಷ ತನಿಖೆ ನಡೆಯುವುದೇ ಇಲ್ಲ. ಪೊಲೀಸರು ಎಫ್‌ಐಆರ್ ದಾಖಲಿಸಿ ವಿದ್ಯುತ್ ಇಲಾಖೆಗೆ ಪ್ರಕರಣವನ್ನು ಒಪ್ಪಿಸಿ ಬಿಡುತ್ತಾರೆ. ವಿದ್ಯುತ್ ಪರಿವೀಕ್ಷಕರು ತಮ್ಮ ವರದಿಯನ್ನು ಸಲ್ಲಿಸುತ್ತಾರೆ. ಅದರಲ್ಲಿ ವಿದ್ಯುತ್ ಅಪಘಾತಕ್ಕೆ ಕಾರಣವನ್ನೂ ಬರೆದಿರುತ್ತಾರೆ. ಆದರೆ ವಿದ್ಯುತ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಇಆರ್‌ಸಿ ಸೇರಿದಂತೆ ಯಾವುದೇ ಇಲಾಖೆ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರ ಸಾವಿಗೆ ಮತ್ತು ಗಾಯಗೊಂಡವರಿಗೆ ಎಂದು ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಅಪಘಾತಕ್ಕೆ ಕಾರಣ ಯಾರು ಎಂಬುದು ತೀರ್ಮಾನವಾಗುವುದಿಲ್ಲ. ಪ್ರತಿಯೊಂದು ಪ್ರಕರಣ ನಡೆದ ಮೇಲೆ ಕೆಲವು ತಿಂಗಳ ನಂತರ ಸಂಬಂಧಪಟ್ಟ ಎಂಜಿನಿಯರ್ ಸೇರಿ ಸಿಬ್ಬಂದಿ ಹೈಕೋರ್ಟ್‌ನಿಂದ ಪ್ರಕರಣ ಮುಕ್ತಾಯಗೊಳಿಸುವಂತೆ ಮನವಿ ಸಲ್ಲಿಸಿ ಬಚಾವ್ ಆಗುತ್ತಾರೆ. ಸತ್ತವರ ಮನೆಯವರು ಮಾತ್ರ ಜೀವನ ಪೂರ್ತಿ ಕೊರಗಿನಲ್ಲೇ ಇರುತ್ತಾರೆ. ಆದರೆ ಈ ಬಾರಿ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪ್ರಕರಣ ಮುಚ್ಚಿಹಾಕಲು ಅವಕಾಶ ನೀಡಿಲ್ಲ. ತನಿಖೆ ನಡೆಯಲೇಬೇಕು ಎಂದು ತಾಕೀತು ಮಾಡಿದ್ದಾರೆ. ಇದರಿಂದ ಮೊಕದ್ದಮೆ ಮುಂದುವರಿದಿದೆ.
ರಸ್ತೆ ಅಪಘಾತಕ್ಕೂ ವಿದ್ಯುತ್ ಅಪಘಾತಕ್ಕೂ ಅಜಗಜಾಂತರವಿದೆ. ರಸ್ತೆ ಅಪಘಾತ ಆಕಸ್ಮಿಕ. ಆದರೆ ವಿದ್ಯುತ್ ಅಪಘಾತ ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ವಿದ್ಯುತ್ ಅಪಘಾತ ನಡೆಯಲು ಯಾರೋ ಒಬ್ಬರ ನಿರ್ಲಕ್ಷ್ಯವೇ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ಅದನ್ನು ವಿದ್ಯುತ್ ಪರಿವೀಕ್ಷಕರು ತಮ್ಮ ವರದಿಯಲ್ಲಿ ತಿಳಿಸಿಯೇ ಇರುತ್ತಾರೆ. ಅಲ್ಲದೆ ಸರ್ಕಾರ ಹಿರಿಯ ಎಂಜಿನಿಯರ್‌ಗಳ ಮೂಲಕ ತನಿಖೆ ನಡೆಸುತ್ತದೆ. ಅದರ ವರದಿಯನ್ನೂ ಗಂಭೀರವಾಗಿ ತೆಗೆದುಕೊಂಡಲ್ಲಿ ಅಪಘಾತ ನಡೆಯದಂತೆ ಮಾಡಬಹುದು. ಸುಮಂತ್ ಕೆಪಿಟಿಸಿಎಲ್ ನಿರ್ದೇಶಕರಾಗಿ ದುಡಿದವರು. ವಿದ್ಯುತ್ ಕ್ಷೇತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಅವರು ಅಪಘಾತದ ಬಗ್ಗೆ ನೀಡಿದ ವರದಿ ಈಗಲೂ ಅನಾಥವಾಗಿದೆ. ಈ ವರದಿ ಬಂದ ಮೇಲೂ ಅಪಘಾತಗಳು ಸಂಭವಿಸಿದೆ ಎಂದರೆ ಸರ್ಕಾರಕ್ಕೆ ಅಪಘಾತ ಕಡಿಮೆ ಮಾಡುವ ಕಾಳಜಿ ಇಲ್ಲ ಎಂಬುದು ಸ್ಪಷ್ಟ.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ೪೭೩ ಜನ ಸತ್ತಿದ್ದಾರೆ. ೧೬೯ ಜನ ಗಾಯಗೊಂಡರು. ಅದಕ್ಕೆ ಹಿಂದಿನ ವರ್ಷ ೫೩೮ ಜನ ಸತ್ತಿದ್ದರು. ನವೆಂಬರ್ ೧೯, ೨೦೨೩ರಂದು ಬೆಳಗ್ಗೆ ಸಜೀವ ವೈರ್ ತುಳಿದು ೨೩ ವರ್ಷದ ಮಹಿಳೆ ಮತ್ತು ಕೈಯಲ್ಲಿದ್ದ ೯ ತಿಂಗಳ ಹಸುಗೂಸು ಸುಟ್ಟು ಭಸ್ಮವಾಗಿದ್ದು ಇನ್ನೂ ಜನರ ಮನದಲ್ಲಿ ಕಹಿ ನೆನಪಾಗಿ ಉಳಿದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಎಂಡಿ ಹಾಗೂ ಕೆಪಿಟಿಸಿಎಲ್ ವಿತರಣ ನಿರ್ದೇಶಕರಾಗಿದ್ದ ಸುಮಂತ್ ಉತ್ತಮ ವರದಿ ನೀಡಿದ್ದರೂ ಕೂಡ ಅದರ ಅನುಷ್ಠಾನಕ್ಕೆ ವಿದ್ಯುತ್ ಇಲಾಖೆ ಮುಂದಾಗಿಲ್ಲ. ವಿದ್ಯುತ್ ಎಲ್ಲಿರುತ್ತದೋ ಅಲ್ಲಿ ಅಪಘಾತ ಸಂಭವಿಸುವ ಸಂದರ್ಭಗಳು ಇದ್ದೇ ಇರುತ್ತವೆ. ಇದಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ. ವಿದ್ಯುತ್ ತಂತಿಯನ್ನು ಸಾರ್ವಜನಿಕರು ಮುಟ್ಟುವುದು ಅಪರಾಧ ಎಂದು ನಾವು ಕಾನೂನಿನಲ್ಲಿ ಹೇಳಿದ್ದೇವೆ. ಆದರೆ ಸಾರ್ವಜನಿಕರಿಗೆ ಗಮನಕ್ಕೆ ಬಾರದೆ ವಿದ್ಯುತ್ ಅಪಘಾತಕ್ಕೆ ಒಳಗಾಗುವ ಸಂದರ್ಭಗಳು ಅಧಿಕಗೊಳ್ಳುತ್ತಿದೆ. ಇದಕ್ಕೆ ನಿರ್ಲಕ್ಷ್ಯ ಕಾರಣವೇ ಹೊರತು ಮತ್ತೇನೂ ಅಲ್ಲ. ಈಗ ಅತ್ಯಾಧುನಿಕ ಯಂತ್ರ ಮತ್ತು ಉಪಕರಣಗಳು ಬಂದಿದೆ. ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳನ್ನು ಪ್ರಕಟಿಸಿದೆ. ಆದರೂ ದೇಶದಲ್ಲಿ ಎಲ್ಲಾದರೂ ಒಂದು ಕಡೆ ವಿದ್ಯುತ್ ಅವಘಡ ಸಂಭವಿಸುತ್ತಲೇ ಇರುತ್ತದೆ. ಇದನ್ನು ಕಡಿಮೆ ಮಾಡಲು ವಿದ್ಯುತ್ ನೌಕರರು ಮತ್ತು ಸಾರ್ವಜನಿಕರು ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಕೇಂದ್ರ ಸರ್ಕಾರ ದೇಶಾದ್ಯಂತ ಜೂನ್ ೨೬ ರಿಂದ ವಿದ್ಯುತ್ ಸುರಕ್ಷತಾ ಸಪ್ತಾಹ ಆಚರಿಸುತ್ತಿದೆ.
ವಿದ್ಯುತ್ ಉತ್ಪಾದನೆ ಕೇಂದ್ರದಿಂದ ಹಿಡಿದು ಗ್ರಾಹಕರು ಮನೆಯಲ್ಲಿ ವಿದ್ಯುತ್ ಬಳಸುವವರೆಗೆ ಎಲ್ಲ ಹಂತದಲ್ಲೂ ಸುರಕ್ಷತೆಗೆ ಆದ್ಯತೆ ನೀಡುವುದು ಅಗತ್ಯ. ವಿದ್ಯುತ್ ಉತ್ಪಾದನೆಯಾದ ಸ್ಥಳದಿಂದ ದೂರದ ಪ್ರದೇಶಗಳಿಗೆ ೪೦೦ ಕೆವಿಗಿಂತ ಹೆಚ್ಚು ಪ್ರಮಾಣದ ವಿದ್ಯುತ್ ರವಾನೆ ಮಾಡಲು ದೊಡ್ಡ ದೊಡ್ಡ ಗೋಪುರಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಹೈವೋಲ್ಟೇಜ್ ವಿದ್ಯುತ್ ಇರುವುದರಿಂದ ಇದನ್ನು ಯಾರೂ ಮುಟ್ಟಬಾರದು. ಹಕ್ಕಿ ಕೂಡ ಇದರ ಹತ್ತಿರ ಹಾರಾಟ ಮಾಡುವುದಿಲ್ಲ. ಈ ಗೋಪುರಗಳ ಕೆಳಗೆ ಯಾರೂ ವಾಸಿಸುವಂತಿಲ್ಲ ಎಂದು ನಿಯಮ ಮಾಡಲಾಗಿದೆ. ಆದರೂ ಕೆಲವು ಕಡೆ ಸಮೀಪದಲ್ಲಿ ಜನವಸತಿಗಳಿವೆ. ಇಲ್ಲಿ ಸುರಕ್ಷಿತ ಎಂದರೆ ಭೂಮಿ ಒಳಗೆ ಕೇಬಲ್ ಹಾಕುವುದು. ಈ ಕೆಲಸಕ್ಕೆ ಹೆಚ್ಚು ಬಂಡವಾಳ ಬೇಕು. ಆದರೂ ಸರ್ಕಾರ ಹಂತಹಂತವಾಗಿ ಭೂಗರ್ಭದಲ್ಲಿ ಕೇಬಲ್ ಅಳವಡಿಸುವ ಕೆಲಸ ಕೈಗೊಂಡಿದೆ. ಈ ಕೇಬಲ್ ಹೊರಗೆ ಕಾಣಿಸಬಾರದು. ಇದಲ್ಲದೆ ಕಂಬಗಳ ಮೇಲೆ ವಿದ್ಯುತ್ ತಂತಿ ತೆಗೆದುಕೊಂಡು ಹೋಗುವ ಪರಿಪಾಠವಿದೆ. ಇದರಲ್ಲೂ ಎಬಿಸಿ ಕೇಬಲ್ ಬಳಸಿದರೆ ಅಪಾಯವಿಲ್ಲ. ಇದೂ ಕೂಡ ಹೆಚ್ಚಿನ ಬಂಡವಾಳ ಬೇಡುತ್ತದೆ. ಮನೆಗೆ ಹಾಗೂ ಕೈಗಾರಿಕೆಗಳಿಗೆ ಕೇಬಲ್ ಮೂಲಕ ಭೂಮಿ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ವ್ಯವಸ್ಥೆ ಇದೆ. ಇದು ಸುರಕ್ಷಿತ. ಕೆಲವು ಕಡೆ ಇನ್ನೂ ಕಂಬದ ಮೇಲೆ ವಿದ್ಯುತ್ ತಂತಿ ತೆಗೆದುಕೊಂಡು ಹೋಗುವ ಪದ್ಧತಿ ಇದೆ. ಇದು ಅಪಾಯಕಾರಿ ಎಂಬುದರಲ್ಲಿ ಸಂದೇಹವಿಲ್ಲ.
ಸುರಕ್ಷಿತ ಕ್ರಮ ಅಗತ್ಯ
ಎಲ್ಲೇ ವಿದ್ಯುತ್ ಬಳಸಿದರೂ ಕೆಲವು ಸುರಕ್ಷಿತ ಕ್ರಮ ಕೈಗೊಳ್ಳುವುದು ಅಗತ್ಯ. ಮೊದಲು ವಿದ್ಯುತ್ ಅಳವಡಿಕೆಗೆ ಪರಿಣತರ ನೆರವನ್ನು ಪಡೆಯುವುದು ಅಗತ್ಯ. ಸುಲಭ ನಾನೇ ಮಾಡುತ್ತೇನೆ ಎನ್ನುವವರು ಬಹಳ ಜನ. ಅವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ವಿದ್ಯುತ್ ಪಡೆಯುವಾಗ ಸಿಂಗಲ್ ಫೇಸ್ ಮತ್ತು ತ್ರಿಫೇಸ್ ತಿಳಿದುಕೊಂಡಿರಬೇಕು. ಉತ್ತಮ ದರ್ಜೆಯ ವೈರ್ ಬಳಸಬೇಕು. ಇಲ್ಲದಿದ್ದಲ್ಲಿ ಶಾರ್ಟ್ ಸರ್ಕ್ಯೂಟ್ ನಿಶ್ಚಿತ. ಪ್ರತಿ ಮನೆ, ಅಂಗಡಿ, ಕೈಗಾರಿಕೆಗಳಿದ್ದರೆ ಮೊದಲು ಫ್ಯೂಸ್ ಇರಲೇಬೇಕು. ಫ್ಯೂಸ್‌ನಲ್ಲಿ ಪ್ರತ್ಯೇಕ ವೈರ್ ಬಳಸಬೇಕು. ಅದಕ್ಕೆ ಬೇರೆ ವೈರು ಬಳಸಿದರೆ ಫ್ಯೂಸ್ ಹೋಗುವುದೇ ಇಲ್ಲ. ಇದರಿಂದ ಕಟ್ಟಡ ಒಳಗೆ ಇರುವ ಎಲ್ಲ ಉಪಕರಣಗಳು ಹೋಗುತ್ತವೆ. ಇದರೊಂದಿಗೆ ಎಂಸಿಬಿ ಮತ್ತು ಇಎಲ್‌ಸಿಬಿ ಅಳವಡಿಕೆ ಕಡ್ಡಾಯ. ಇದನ್ನು ಬಳಸುವಾಗ ಆ ಕಟ್ಟಡದಲ್ಲಿ ಎಷ್ಟು ವಿದ್ಯುತ್ ಬಳಸುತ್ತಾರೋ ಅಷ್ಟೇ ಪ್ರಮಾಣದ ಎಂಸಿಬಿ ಬಳಸಬೇಕು. ಎಲ್ಲರೂ ಹೆಚ್ಚಿನ ಪ್ರಮಾಣದ ಎಂಸಿಬಿ ಅಳವಡಿಸಿಬಿಡುತ್ತಾರೆ. ಅದು ಸರಿಯಲ್ಲ. ಎಎಲ್‌ಸಿಬಿ ಮತ್ತಷ್ಟು ಸೂಕ್ಷ್ಮ, ಇವುಗಳು ಸುರಕ್ಷತೆಗೆ ಬಳಸುವ ಉಪಕರಣಗಳು. ಇದಲ್ಲದೆ ಪ್ರತಿ ಹಂತದಲ್ಲೂ ಅರ್ಥಿಂಗ್ ಪರೀಕ್ಷಿಸಬೇಕು. ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಹಿಡಿದು ಮನೆಯವರೆಗೆ ಎಲ್ಲ ಹಂತದಲ್ಲೂ ಅರ್ಥಿಂಗ್ ಸಮರ್ಪಕವಾಗಿದೆಯೇ ಎಂಬುದನ್ನು ನೋಡಬೇಕು. ಇದನ್ನು ಪರಿಣತರೇ ಮಾಡಬೇಕು. ಅರ್ಥಿಂಗ್‌ಗೆ ತಾಮ್ರದ ತಂತಿ ಬಳಸುವುದು ಅಗತ್ಯ.
ಅಪಘಾತಗಳಿಗೆ ಕಾರಣ
ವಿದ್ಯುತ್ ನೇರ ಸಂಪರ್ಕಕ್ಕೆ ಬಂದರೆ ಶಾಕ್ ಆಗುತ್ತದೆ. ಇದರಿಂದ ಪಾರಾಗಬೇಕು ಎಂದರೆ ವಿದ್ಯುತ್ ಪ್ರವಾಹ ಸಾಗಿಹೋಗದ ವಸ್ತುಗಳನ್ನು ಬಳಸಬೇಕು. ರಬ್ಬರ್, ಮರದ ವಸ್ತುಗಳನ್ನು ಬಳಸಿದರೆ ಪಾರಾಗಬಹುದು. ನೀರಿನಿಂದ ದೂರ ಇರಬೇಕು. ಮನೆಯಲ್ಲಿ ವಿದ್ಯುತ್ ಅಪಘಾತ ಸಂಭವಿಸುವುದು ಸಾಮಾನ್ಯ. ಅಲ್ಲಿ ಯಾವುದೋ ಸಮಾರಂಭಕ್ಕಾಗಿ ತಾತ್ಕಾಲಿಕವಾಗಿ ವೈರ್ ಎಳೆಯುವುದುಂಟು. ಉತ್ತಮ ದರ್ಜೆಯ ವೈರ್ ಬಳಸಬೇಕು. ಒಂದೇ ಪ್ಲಗ್‌ಗೆ ಮೂರು-ನಾಲ್ಕು ಸಂಪರ್ಕಗಳನ್ನು ಕಲ್ಪಿಸಬೇಕು. ವೈರುಗಳನ್ನು ನೇರವಾಗಿ ಸಿಗಿಸುವುದು ಸರಿಯಲ್ಲ. ಹಳೆಯ ವೈರು ಬಳಸಬಾರದು. ಕಂಬಗಳ ಮೇಲಿರುವ ತಂತಿಗೆ ನೇರವಾಗಿ ಹುಕ್ ಮಾಡುವುದು ಸರಿಯಲ್ಲ. ಹಳ್ಳಿಗಳಲ್ಲಿ ರಥೋತ್ಸವ ನಡೆಯುವಾಗ ರಸ್ತೆಗೆ ಅಡ್ಡಲಾಗಿ ವೈರುಗಳಿದ್ದರೆ ವಿದ್ಯುತ್ ಸಂಪರ್ಕ ತೆಗೆಯಬೇಕು. ಜನರೇಟರ್ ಬಳಸುವ ಹಾಗಿದ್ದರೆ ಅದರ ವಾಹನ ದೂರದಲ್ಲಿರಬೇಕು.

Next Article