For the best experience, open
https://m.samyuktakarnataka.in
on your mobile browser.

ವಿದ್ಯುತ್ ಲೈನ್ ಯೋಜನೆಗೆ ವಿರೋಧ : ಸಂತ್ರಸ್ತರಿಂದ ಕಾಮಗಾರಿ ಸ್ಥಗಿತ

07:24 PM Sep 14, 2024 IST | Samyukta Karnataka
ವಿದ್ಯುತ್ ಲೈನ್ ಯೋಜನೆಗೆ ವಿರೋಧ   ಸಂತ್ರಸ್ತರಿಂದ ಕಾಮಗಾರಿ ಸ್ಥಗಿತ

ಮೂಡುಬಿದಿರೆ : ಉಡುಪಿ - ಕಾಸರಗೋಡು ನಡುವೆ ಹಾದು ಹೋಗುವ ೪೪೦ ಕೆವಿ ವಿದ್ಯುತ್ ಲೈನ್ ಕಾಮಗಾರಿಯು ನಿಡ್ಡೋಡಿ ಕೊಲತ್ತಾರು ಪ್ರದೇಶದಲ್ಲಿ ನಡೆಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ಸಂತ್ರಸ್ತರು ಪ್ರತಿಭಟಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ಶನಿವಾರ ನಡೆದಿದೆ.

ನಿಡ್ಡೋಡಿಯ ಕೊಲತ್ತಾರು ಪ್ರದೇಶದ ಸರ್ಕಾರಿ ಸ್ಥಳದಲ್ಲಿ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಖಾಸಗಿ ಸ್ಥಳಗಳಲ್ಲಿಯೂ ಸ್ಥಳ ಗುರುತು ಮಾಡಲಾಗಿದ್ದು ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಸ್ಟೆರ್‌ಲೈಟ್ ಕಂಪನಿಯ ಅಧಿಕಾರಿಗಳು ಕಾಮಗಾರಿ ನಡೆಸುತ್ತಿದ್ದು ಈ ವೇಳೆ ಸ್ಥಳಕ್ಕಾಗಮಿಸಿದ ರೈತ ಮುಖಂಡರು, ನೂರಕ್ಕೂ ಅಧಿಕ ಸ್ಥಳೀಯರು ಹಾಗೂ ಸಂತ್ರಸ್ತರು ಯಾವುದೇ ಕಾರಣಕ್ಕೂ ಖಾಸಗಿ ಸ್ಥಳದಲ್ಲಿ ಮಾಲೀಕರ ಅನುಮತಿಯಿಲ್ಲದೆ ಕಾಮಗಾರಿ ನಡೆಸಕೂಡದು. ಬಲತ್ಕಾರವಾಗಿ ಕಾಮಗಾರಿ ನಡೆಸಿದರೆ ಮುಂದೆ ಆಗುವ ಅನಾಹುತಗಳಿಗೆ ಕಂಪನಿಯ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕಾಗಮಿಸಿದ ಪೋಲಿಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ ಸಂತ್ರಸ್ತರು, ರೈತ ಮುಖಂಡರು ಹಾಗೂ ಕಂಪನಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಕಂಪನಿಯ ಮ್ಯಾನೇಜರ್ ವೆಂಕಟೇಶ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಹೇಳಿದ್ದು ಇದಕ್ಕೆ ಒಪ್ಪದ ರೈತರು ಕಾಮಗಾರಿಯನ್ನೇ ನಡೆಸಬಾರದು. ನಿರ್ಮಿಸಿದ ಟವರನ್ನು ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಬಳಿಕ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜಿಲ್ಲೆಯ ಶಾಸಕರು, ಸಂಸದರು, ಕಂಪನಿ ಅಧಿಕಾರಿಗಳು ಹಾಗೂ ಸಂತ್ರಸ್ತರ ಜಂಟಿ ಸಭೆ ನಡೆಸಿ ಅಲ್ಲಿ ಕೈಗೊಂಡ ನಿರ್ಣಯದಂತೆ ಮುಂದುವರಿಯುವುದು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಕಂಪನಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡಲಾಯಿತು.
೪೪೦ ಕೆವಿ ವಿದ್ಯುತ್‌ಲೈನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಜು ಗೌಡ, ರಾಜ್ಯ ರೈತ ಸಂಘ ಹಸುರುಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಸಂಯೋಜಕ ದಯಾನಂದ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಅಲ್ಫೋನ್ಸ್ ಲೋಬೋ, ಏಳಿಂಜೆ ವಲಯದ ಅಧ್ಯಕ್ಷ ಸುಕೇಶ್ಚಂದ್ರ ಶೆಟ್ಟಿ, ಏಳಿಂಜೆಯ ಸಂತ್ರಸ್ತೆ ಕೌಶಲ್ಯ ಎಂ. ಶೆಟ್ಟಿ ಮತ್ತಿತರರು ಮಾತನಾಡಿ ಯೋಜನೆಯಿಂದಾಗಿ ರೈತರಿಗಾಗುವ ತೊಂದರೆಯನ್ನು ವಿವರಿಸಿದರು.