ವಿದ್ಯೇಶತೀರ್ಥರಿಗೆ ಸಪ್ತತಿ ಅಭಿನಂದನೋತ್ಸವ
ಉಡುಪಿ: ಉಡುಪಿಯಲ್ಲಿ 45ನೇ ಚಾತುರ್ಮಾಸ್ಯ ವ್ರತವನ್ನು ಜ್ಞಾನ ಯಜ್ಞದ ಮೂಲಕ ಸಂಪನ್ನಗೊಳಿಸುತ್ತಿರುವ 70 ವಸಂತ ಕಂಡ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣಮಠದ ವತಿಯಿಂದ ಶ್ರೀ ಸುಗುಣೇಂದ್ರತೀರ್ಥರ ನೇತೃತ್ವದಲ್ಲಿ ಅಭಿನಂದನೋತ್ಸವ ಶುಕ್ರವಾರ ಸಂಜೆ ವೈಭವದಿಂದ ನೆರವೇರಿತು.
ಉಡುಪಿ ರಥಬೀದಿ ಶ್ರೀ ಭಂಡಾರಕೇರಿ ಮಠದ ಉಪಾಸ್ಯ ಮೂರ್ತಿ ಶ್ರೀ ಕೋದಂಡರಾಮದೇವರ ಸ್ವರ್ಣ ರಥೋತ್ಸವ ನೆರವೇರಿದ ಬಳಿಕ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ
ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಮಾತೆಯರಿಂದ 'ಶ್ರೀ ವಿದ್ಯೇಶ ತೀರ್ಥ ವಿರಚಿತ' ಕೃತಿಗಳ ಸಾಮೂಹಿಕ ಗಾಯನ, ವೇದ ನಾದ, ಘೋಷಗಳ ಹಿನ್ನೆಲೆಯಲ್ಲಿ ನಾಣ್ಯಗಳಿಂದ ಸಾಲಂಕೃತ ತುಲಾಭಾರ ನಡೆಸಿ, ಯಕ್ಷ ಕಿರೀಟಾಲಂಕೃತ ಸಿಂಹಾಸನದಲ್ಲಿ ಕೂರಿಸಿ ಶಾಲು ಹಾರ ಪುಷ್ಪಕಿರೀಟ ಧಾರಣ, ಪುಷ್ಪಾಭಿಷೇಕ, ಬೃಹತ್ ಕಡಗೋಲು, ನಿಧಿ, ಫಲವಸ್ತು ಸಹಿತ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ "ಶ್ರೀ ಭಾಗವತ ಭಾಸ್ಕರ" ಬಿರುದು, ಸನ್ಮಾನ ಪತ್ರ ಸಮರ್ಪಣೆಯನ್ನು ಶ್ರೀ ಪುತ್ತಿಗೆ ಉಭಯಶ್ರೀಗಳು ಮಾಡಿ ಧನ್ಯತೆ ಮೆರೆದರು. ಬಳಿಕ ಸಂದೇಶ ನೀಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಶ್ರೀ ವಿದ್ಯೇಶತೀರ್ಥರು ಕಠಿಣ ಯತಿಧರ್ಮ ಪಾಲನೆ, ಶ್ರೀ ರಾಮದೇವರ ನಿತ್ಯೋಪಾಸನೆ, ಅಖಂಡ ಅಧ್ಯಯನ, ವೇದವ್ಯಾಖ್ಯಾನ, ಹರಿಕೀರ್ತನೆಗಳ ರಚನೆ, ವಿದ್ವತ್ ಪೋಷಣೆ, ನಿರಂತರ ಭಾಗವತ ಪ್ರವಚನ, ಮನೆಮನೆಗಳಲ್ಲಿ ಭಾಗವತ ಅಭಿಯಾನ ಸನಾತನ ಭಾರತೀಯ ಪರಂಪರೆಗೆ ಕೀರ್ತಿ ತಂದಿದೆ.
ಅವರ ಅನನ್ಯ ಭಕ್ತಿ, ಸ್ತುತಿ, ಶ್ರುತಿ, ಶಕ್ತಿ, ದ್ಯುತಿ, ಸ್ಫೂರ್ತಿ, ಯುಕ್ತಿ ಹೀಗೆ ಸಪ್ತ 'ತಿ' ಗಳ ಸಂಗಮವೇ ಅವರ ಸಾರ್ಥಕ ಜೀವನದ ೭೦ ವಸಂತಕ್ಕೆ ಶೋಭೆ ತಂದಿದೆ ಎಂದರು.
ಅವರೊಂದಿಗೆ ತಾವು ಸಹಪಾಠಿಗಳಾಗಿದ್ದ ದಿನಗಳನ್ನು ಸ್ಮರಿಸಿಕೊಂಡು ತಮ್ಮ ಪರ್ಯಾಯಕಾಲದಲ್ಲಿ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ನಡೆಸಿದ್ದಕ್ಕಾಗಿ ಪುತ್ತಿಗೆ ಶ್ರೀ ಗಳು ಅಭಿನಂದಿಸಿದರು.
ನೂರಾರು ಹರಿಕೀರ್ತನೆಗಳನ್ನು ರಚಿಸಿ ಅಪರೂಪದ ಕವಿಹೃದಯಿ ಆಗಿರುವ ಅವರು ಶ್ರೀ ವ್ಯಾಸರಾಜರು, ಕನಕ ಪುರಂದರರೇ ಮೊದಲಾದ ಹರಿದಾಸರ ಪರಂಪರೆಗೆ ಸೇರಿದ ಕೀರ್ತಿವಂತರಾಗಿದ್ದಾರೆ. ವಿದ್ಯೇಶ ವಿಠಲದಾಸರಾಗಿದ್ದಾರೆ ಎಂದು ಪುತ್ತಿಗೆ ಶ್ರೀ ಪ್ರಶಂಶಿಸಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರು.