For the best experience, open
https://m.samyuktakarnataka.in
on your mobile browser.

ವಿನಯ್ ಕುಲಕರ್ಣಿ ಪ್ರಕರಣ ಕಾಯ್ದಿರಿಸಿದ ತೀರ್ಪು

09:23 PM Nov 26, 2024 IST | Samyukta Karnataka
ವಿನಯ್ ಕುಲಕರ್ಣಿ ಪ್ರಕರಣ ಕಾಯ್ದಿರಿಸಿದ ತೀರ್ಪು

ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿ ಬಸವರಾಜ್ ಮುತ್ತಗಿ ಅವರ ಮಾಫಿ ಸಾಕ್ಷಿಯಾಗಿರುವ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತು.
ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ನಡೆಸಿತು. ಈ ವೇಳೆ ವಿನಯ್ ಕುಲಕರ್ಣಿ ಪರ ವಕೀಲ, ಆರೋಪಿ ಬಸವರಾಜ್ ಮುತ್ತಗಿ ಹೇಳಿಕೆಯನ್ನು ಪರಿಗಣಿಸುವಾಗ ಸೂಕ್ತ ಕಾನೂನು ಕ್ರಮಗಳ ಪಾಲಿಸಿಲ್ಲ. ಹಾಗಾಗಿ, ಸೆಷನ್ಸ್ ಕೋರ್ಟ್ ಬಸವರಾಜ್ ಮುತ್ತಗಿಯನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಿರುವ ಕ್ರಮವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಬಸವರಾಜ್ ಮುತ್ತಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-೧೯೭೩ರ (ಸಿಆರ್‌ಪಿಸಿ) ಕಲಂ ೩೦೬ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಗುಣವಾಗಿ ಸೆಷನ್ಸ್ ನ್ಯಾಯಾಲಯ ಸಿಆರ್‌ಪಿಸಿ ಕಲಂ ೧೬೪ರ ಅಡಿಯಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲು ಮಾಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ ಎಂದರು. ವಾದ, ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿತು.

Tags :