ವಿಪಕ್ಷಗಳಿಗೆ ಸಿದ್ದರಾಮಯ್ಯ ಕಂಡರೆ ಭಯ...
ಕೊಪ್ಪಳ: ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಂಡರೆ ಹೆದರಿಕೆ ಇದೆ. ಹಾಗಾಗಿ ಬೇರೆ ಬೇರೆ ಆಪಾದನೆ ಮಾಡುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜಯ್ ಧರ್ಮಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣ ಮೂರು ಉಪಚುನಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೇ ಗ್ಯಾರಂಟಿ ಯೋಜನೆಗಳು ಬಡವರಿಗೆ ಅನುಕೂಲ ಆಗಿವೆ. ಆದರೆ ಬಿಜೆಪಿಯವರು ಆದಾನಿ ಮತ್ತು ಅಂಬಾನಿಗೆ ಅನುಕೂಲ ಮಾಡಿದ್ದಾರೆ. ಹಾಗಾಗಿ ೩ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಪಿವೈ ಕಾಂಗ್ರೆಸ್ ಸೇರ್ಪಡೆ ಸ್ವಾಗತಾರ್ಹ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ಸೇರ್ಪಡೆ ಆಗಿರುವುದು ಸ್ವಾಗತಾರ್ಹ. ಸಿದ್ಧಾಂತ ಮತ್ತು ಪಕ್ಷವನ್ನು ಮೆಚ್ಚಿ ಯಾರಾದರೂ ಬರಬಹುದು. ೨೫ಕ್ಕೆ ಪಕ್ಷ ಉತ್ತಮ ನಿರ್ಣಯ ಕೈಗೊಳ್ಳಲಿದೆ ಎಂದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯ ಮುತ್ತುರಾಜ್ ಕುಷ್ಟಗಿ ಇದ್ದರು.