ವಿಪರೀತ ಜ್ಞಾನವೇ ಅಜ್ಞಾನ
ಭಗವಂತನಲ್ಲಿ ಏನನ್ನು ಬೇಡಬೇಕು ಎಂದರೆ ಬೆಳಕಿನೋಪಮೆಯಲ್ಲಿರುವ ಜ್ಞಾನವನ್ನು ಬೇಡಬೇಕು ಎಂದು ಶಾಸ್ತçಗಳು ಹೇಳುತ್ತವೆ.
ಉಳಿದುದನ್ನು ಬೇಡಿದರೆ ಅದು ಈ ಜನ್ಮಕ್ಕೆ ಮಾತ್ರ ಸೀಮಿತ. ಜನ್ಮಾಂತರಗಳ ಪುಣ್ಯ ಲಭಿಸಬೇಕಾದರೆ ಭಗವಂತನ ಕುರಿತಾದ ಜ್ಞಾನವನ್ನು ಪಡೆಯಬೇಕು. ಜೀವಿಗಳು ಅನೇಕ ರೀತಿಯಲ್ಲಿ ಪಾಪ ಕರ್ಮಗಳನ್ನು ಮಾಡುತ್ತಲೇ ಇರುತ್ತದೆ. ಇದರಿಂದ ಅಜ್ಞಾನವು ಹೆಚ್ಚುತ್ತದೆ. ಅಜ್ಞಾನ ಪಾಪಕ್ಕೆ ಸಮಾನ. ಇದಲ್ಲದೇ ಅನೇಕ ತರಹದ ಪಾಪಗಳು ಪರಿಹಾರವಾಗಬೇಕಾದರೆ ಆರ್ತತೆಯಿಂದ ಪ್ರಾರ್ಥನೆ ಮಾಡಬೇಕು. ಆ ತರಹದ ಪಾಪಗಳನ್ನು ಪರಿಹರಿಸಿ, ಮಹಾತ್ಮರ ಸೇವೆಯನ್ನು ಮಾಡಿಸಿ, ಶಾಸ್ತ್ರಗಳ ಅಧ್ಯಯನ ಶ್ರವಣವನ್ನು ಮಾಡಿಸಿ, ಧ್ಯಾನವನ್ನು ಕೊಡು ಹಾಗೂ ಲಭಿಸಿದ ಜ್ಞಾನ ಉಳಿಯುವಂತೆ ಮಾಡು ಎಂದು ಭಗವಂತನಲ್ಲಿ ಬೇಡಿಕೊಳ್ಳಬೇಕು. ಇಷ್ಟೇ ಅಲ್ಲ; ಲಭಿಸಿದ ಜ್ಞಾನ ಬೆಳೆಯುವಂತೆ ಮಾಡಿ ಆ ಜ್ಞಾನವನ್ನು ಸಾರ್ಥಕವಾಗುವಂತೆ ಮಾಡಿ ಅಪರೋಕ್ಷ ಜ್ಞಾನವನ್ನು ನೀಡಿ ಮೋಕ್ಷವನ್ನು ನೀಡು ಎಂದು ತಮಸೋಮ ಜ್ಯೋತಿರ್ಗಮಯ ಎಂಬ ಪ್ರಾರ್ಥನೆಯನ್ನು ಮಾಡಿದರೆ ನಮ್ಮ ಜನ್ಮ ಸಾರ್ಥಕವಾದಂತೆ.
ಉಪನಿಷತ್ತಲ್ಲಿ ಅಜ್ಞಾನವನ್ನು ಮೃತ್ಯು ಎಂದು ಕರೆದಿರುತ್ತಾರೆ. ಅಜ್ಞಾನವೆಂದರೆ ಯಥಾರ್ಥವಾದ ಜ್ಞಾನ ಇಲ್ಲದಿರುವುದು. ಅಜ್ಞಾನವೆಂದರೆ ಸಂಶಯ.
ಅಜ್ಞಾನ, ಸಂಶಯ, ವಿಪರೀತ ಜ್ಞಾನ ಇವುಗಳನ್ನು ಪರಿಹಾರ ಮಾಡುವುದಕ್ಕೆ ನಾವು ಪ್ರಯತ್ನ ಮಾಡಬೇಕು. ಅಂತಹ `ಅಜ್ಞಾನವನ್ನು ಅಳಿಸಿ ಯಥಾರ್ಥವಾದ ಜ್ಞಾನವನ್ನು ಕೊಟ್ಟು ರಕ್ಷಿಸೋಯೆಮ್ಮ ಅನವರತ…'ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು.
ಎಲ್ಲಾ ಅಧ್ಯಾತ್ಮ ಬಂಧುಗಳು, ಜಿಜ್ಞಾಸುಗಳು, ಸಜ್ಜನರು ಸಾಧಕರುಗಳು, ಮೋಕ್ಷುಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಶ್ರದ್ಧೆಯಿಂದ ಭಕ್ತಿಯಿಂದ, ದೇವರನ್ನು ಭಜಿಸುವಂತಹ ಸಾತ್ವಿಕ ಭಕ್ತರು ಅಮಯಕರಾದ ಶ್ರದ್ಧಾವಂತರಾದ ಶುದ್ಧ ಸಂಪ್ರದಾಯದಂತೆ ಭಗವಂತನಲ್ಲಿ ಭಕ್ತಿಯನ್ನು ಮಾಡಿ ಉಪಾಸನೆಯನ್ನು ಮಾಡುವಂತಹವರು ಹೇರಳವಾಗಿದ್ದಾರೆ.
ಆದರೆ ಅಂತಹ ಸಜ್ಜನರ ಮನಸ್ಸಿನಲ್ಲಿ ತಪ್ಪು ಭಾವನೆಗಳು ಬರುವಂತೆ ಮಾಡುವ ವಿಷಯ ಬೀಜವನ್ನು ಬಿತ್ತುವಂತಹ ಅನೇಕ ಸಂಗತಿಗಳು ಜಗತ್ತಿನಲ್ಲಿ ಸುತ್ತಮುತ್ತಲಿರುತ್ತವೆ. ಅಂತಹ ಸಂದರ್ಭದಲ್ಲಿ ಮನುಷ್ಯನಲ್ಲಿ ಶಂಕೆ ಬರದಂತೆ ಹಾಗೆ ವಾಯುದೇವರು ಅನುಗ್ರಹವನ್ನು ಮಾಡಬೇಕು ಎಂದು ಪ್ರಾರ್ಥನೆಯನ್ನು ಮಾಡಬೇಕು.
ಎಂತಹ ವಾದಿಗಳು ನಾಸ್ತಿಕರು ಆಸ್ತಿಕರಾಗಿಯೂ ಇರುವಂತವರು ಮಾಡುವ ಅಕ್ಷೇಪಗಳು ಯಾವ ರೀತಿಯಲ್ಲಿ ಇದ್ದರೂ ಮನಸ್ಸಿನಲ್ಲಿ ಸಂಶಯ ಬರದಂತೆ ಇರುವಂತಹ ಅತ್ಯಂತ ದೃಢವಾದ ದೇವರ ಹಾಗೂ ತತ್ವದ ಬಗ್ಗೆ ಭಗವದ್ಭಕ್ತರ ಬಗ್ಗೆ ಗುರುಗಳ ಬಗ್ಗೆ ಯಥಾರ್ಥವಾದ ಜ್ಞಾನವನ್ನು ಪಡೆದುಕೊಳ್ಳುವಂತಹ ಅಗತ್ಯ ಬಹಳವಿದೆ. ಕಾರಣವಿಷ್ಟೇ ತಮಸೋಮ ಜ್ಯೋತಿರ್ಗಮಯ.