ವಿಪ್ರ ಸಮಾಜ ಗಾಯತ್ರಿ ಮಂತ್ರದ ಅನುಷ್ಟಾನದಲ್ಲಿ ಒಂದಾಗಬೇಕು
ಮಂಗಳೂರು: ರಾಷ್ಟ್ರವನ್ನು ಒಂದು ಗೂಡಿಸುವ ರಾಷ್ಟ್ರ ಗೀತೆ ಇರುವಂತೆ ಬ್ರಾಹ್ಮಣ ಸಮುದಾಯಕ್ಕೆ ಗಾಯತ್ರಿ ಮಂತ್ರವೇ ಒಂದು ಗೀತೆ. ವಿಪ್ರ ಸಮಾಜವಿಡೀ ಗಾಯತ್ರಿ ಮಂತ್ರದ ಅನುಷ್ಟಾನದಲ್ಲಿ ಒಂದಾಗಬೇಕು.ದಿಯೋ ಯೋನಾ ಪ್ರಚೋದಯಾತ್ ಎನ್ನುವಂತೆ ಸ್ವಾರ್ಥವಿಲ್ಲದೆ ಎಲ್ಲರಿಗೂ ಸದ್ಬುದ್ಧಿ ಸತ್ ಚಿಂತನೆ ಕೊಡು ಎಂದು ಪ್ರಾರ್ಥಿಸುವುದೇ ಆಗಿದೆ ಎಂದು ಪೇಜಾವರ ಅದೋಕ್ಷಜ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳರವರು ನುಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮಸಭೆಯಲ್ಲಿ ಅವರು ಇಂದು ಆಶೀರ್ವವಚನ ನೀಡಿದರು.
ಬ್ರಾಹ್ಮಣರು ಅನುಸರಿಸಬೇಕಾದ ಹಲವು ಅನುಷ್ಟಾನಗಳಿವೆ. ಕನಿಷ್ಠ ಗಾಯತ್ರಿಯನ್ನು ಮಾಡದೇ ಹೋದಲ್ಲಿ ನಾವು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆ ಉಳಿಯಲಾರದು. ಋಷಿಗಳಿಂದ , ಹಿರಿಯರಿಂದ ಬಂದ ಅನುಷ್ಟಾನವನ್ನು ನಾವು ಮಾಡುತ್ತಾ ಬಂದಿದ್ದೇವೆ. ಇದು ಮುಂದಿನ ಪೀಳಿಗೆಗೂ ಮುಂದುವರಿಯಬೇಕಿದೆ ಎಂದರು.
ಲೋಕದಲ್ಲಿ ನಡೆಯುವ ಅನಿಷ್ಟಗಳಿಗೆ ಬ್ರಾಹ್ಮಣ ಸಮಾಜ ಕಾರಣ ಎಂದು ದೂಷಣೆ ಮಾಡುವ ಪ್ರವೃತ್ತಿ ಬೆಳೆದು ಬರುತ್ತಿದೆ.ಜಾತ್ಯಾತೀತ ಎನ್ನುವ ಮನೋ‘ವ ಮಾತ್ರವಿದೆ ಆದರೆ ಪ್ರತಿಯೊಂದಕ್ಕೂ ಜಾತಿಯನ್ನು ಮುಂದಿಟ್ಟು ಜಾತಿ ಲೆಕ್ಕಾಚಾರ ಮಾಡಲೂ ಮುಂದಾಗಿದ್ದಾರೆ.ಇದರ ಬಗ್ಗೆ ಪ್ರಜಾಪ್ರಭುತ್ವದಡಿ ಪ್ರಶ್ನಿಸಿದರೆ ನಿಂದಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ರಾಜಕಾರಣಿಗಳಿಗೆ ಮಾತ್ರವೆ ಎಂದು ಪ್ರಶ್ನಿಸಿದರು.
ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಮಾತನಾಡಿ, ಬ್ರಾಹ್ಮಣ ಸಮುದಾಯವು ಉದ್ದಾರವನ್ನು ಸ್ವತಃ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿಯೂ ಈ ಸಂಸ್ಕಾರವನ್ನು ಬಿತ್ತಬೇಕು. ನಿತ್ಯವೂ ೧೦೮ ಗಾಯತ್ರಿ ಮಂತ್ರವನ್ನು ಅನುಷ್ಟಾನಿಸಿ ಬ್ರಾಹ್ಮಣತ್ವದ ಶಕ್ತಿ ವೃದ್ಧಿಸಿಕೊಳ್ಳಬೇಕು.ನಮ್ಮನ್ನು ಅನುಸರಿಸುವವರಿಗೆ ನಾವು ಮಾರ್ಗದರ್ಶಕರಾಗಬೇಕು ಎಂದರು.
ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಬ್ರಾಹ್ಮಣ ಸಮುದಾಯದ ಎಲ್ಲರ ಸಹಕಾರದಲ್ಲಿ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದೆ. ಸಮಾಜದ ಏಳಿಗೆಗಾಗಿ ಇಂತಹ ವಿಪ್ರ ಸಂಗಮ ನಿರಂತರವಾಗಿ ಮುಂದುವರಿಯುವ ಮೂಲಕ ನಮ್ಮ ಗೌರವ,ಸ್ಥಾನಮಾನವನ್ನು ಉಳಿಸಿಕೊಳ್ಳಬೇಕಿದೆಯೆಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಅಧ್ಯಕ್ಷ, ಹಿರಿಯ ವಕೀಲ, ಸಂಗಮದ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಕ್ಷೇತ್ರದ ಹಿರಿಯ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ದಾನಿ, ವಸಂತ ಪಾಠ ಶಿಬಿರದ ರೂವಾರಿ ಸುರೇಶ್ ರಾವ್ ಕಟೀಲು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಬ್ರಾಹ್ಮಣ ಅಭಿವೃದ್ಧಿ ಸಮಿತಿಯ ಮಾಜಿ ನಿರ್ದೇಶಕ ಡಾ. ಬಿ.ಎಸ್ ರಾಘವೇಂದ್ರ ಭಟ್, ವೇ.ಮೂ ಸೂರ್ಯನಾರಾಯಣ ಭಟ್ ಕಶೆಕೋಡಿ, ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಆಸ್ರಣ್ಣ, ಸಂಚಾಲಕ ಸುರೇಶ್ ರಾವ್ ಚಿತ್ರಾಪುರ, ಕೃಷ್ಣ ಭಟ್ ಕದ್ರಿ, ಎಂ.ಟಿ ಭಟ್, ಸುಬ್ರಹ್ಮಣ್ಯ ಕೋರಿಯರ್, ಸಮಿತಿಯ ಪದಾಧಿಕಾರಿಗಳು, ಬ್ರಾಹ್ಮಣ ಸಮಾಜದ ವಿವಿ‘ಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಗಾಯತ್ರಿ ಸಂಗಮ ಅಧ್ಯಕ್ಷ ಮಹೇಶ್ ಕಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಡಿ ಶಾಸ್ತ್ರಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ವಂದಿಸಿದರು. ಶಾಸಕ ಡಾ. ಭರತ್ ಶೆಟ್ಟಿ ವೆ, ಮೇಯರ್ ಮನೋಜ್ ಕುಮಾರ್ ಭೇಟಿ ನೀಡಿದರು.