For the best experience, open
https://m.samyuktakarnataka.in
on your mobile browser.

ವಿಪ್ ಉಲ್ಲಂಘನೆ: ಪಾಲಿಕೆ ಸದಸ್ಯತ್ವ ರದ್ದು

11:45 PM Feb 10, 2024 IST | Samyukta Karnataka
ವಿಪ್ ಉಲ್ಲಂಘನೆ  ಪಾಲಿಕೆ ಸದಸ್ಯತ್ವ ರದ್ದು

ಹುಬ್ಬಳ್ಳಿ: ೨೦೨೩ರ ಜೂನ್ ೨೦ರಂದು ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ವೇಳೆ ಪಕ್ಷದವತಿಯಿಂದ ಅಧಿಕೃತವಾಗಿ ಜಾರಿ ಮಾಡಿದ ವಿಪ್‌ನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ೫೪ನೇ ವಾರ್ಡಿನ ಬಿಜೆಪಿ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ಅವರನ್ನು ಮಹಾನಗರ ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ ಶೆಟ್ಟೆಣ್ಣವರ ಆದೇಶಿಸಿದ್ದಾರೆ.

ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ( ಪಕ್ಷಾಂತರ ನಿಷೇಧ) ಕಾಯ್ದೆ -೧೯೮೭ರ ಕಲಂ-೩ (೧) (ಬಿ) ನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಪ್ ಉಲ್ಲಂಘನೆಗೆ ಸಂಬAಧಿಸಿದAತೆ ಅಂದಿನ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ ದೂರು ದಾಖಲಿಸಿದ್ದರು. ಉದ್ದೇಶಪೂರ್ವಕವಾಗಿಯೇ ಚುನಾವಣೆಗೆ ಗೈರಾಗಿದ್ದರು ಎಂದು ದೂರಿದ್ದರು. ಈ ದೂರು ನಿರಾಕರಿಸಿದ ಸದಸ್ಯೆ ಸರಸ್ವತಿ ಧೋಂಗಡಿಯವರು, ಆರೋಗ್ಯ ಸಮಸ್ಯೆ, ಉಪಚಾರದಲ್ಲಿದ್ದುದ್ದರಿಂದ ಚುನಾವಣೆಗೆ ಗೈರಾಗಲು ಕಾರಣ. ಉದ್ದೇಶಪೂರ್ವಕವಾಗಿ ಅಲ್ಲ ಎಂದು ಪ್ರತಿಕ್ರಿಯಿಸಿದ್ದರು. ಈ ಕುರಿತು ವಿಚಾರಣೆ ನಡೆದು ಅಂತಿಮವಾಗಿ ಸರಸ್ವತಿ ಧೋಂಗಡಿ ಸದಸ್ಯತ್ವ ರದ್ದುಪಡಿಸಿ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.

ನನ್ನಿಂದ ಯಾವ ಲೋಪವೂ ಆಗಿಲ್ಲ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸದಸ್ಯೆ ಸರಸ್ವತಿ ಧೋಂಗಡಿ ತಿಳಿಸಿದ್ದಾರೆ.