ವಿಪ ಉಪಚುನಾವಣೆ: ಶೇ. ೯೭.೯೧ರಷ್ಟು ಮತದಾನ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಪ್ರತಿನಿಧಿಯ ಆಯ್ಕೆಗಾಗಿ ಇಂದು ನಡೆದ ಉಪ ಚುನಾವಣೆಯಲ್ಲಿ ಶೇ. ೯೭.೯೧ರಷ್ಟು ಮತದಾನವಾಗಿದೆ.
ಈ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭಾ ಸದಸ್ಯರು ಸೇರಿ ಒಟ್ಟು ೬,೦೩೨ ಮತದಾರರಿದ್ದು, ಆ ಪೈಕಿ ೫೯೦೬ ಮಂದಿ ಮತ ಚಲಾಯಿಸಿದ್ದಾರೆ.
ಮತದಾನ ಬಹಿಷ್ಕಾರ..
ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಕಸ್ತೂರಿ ರಂಗನ್ ಶಿಫಾರಸ್ಸುಗಳ ಜಾರಿಯನ್ನು ವಿರೋಧಿಸಿ, ಉಡುಪಿಯ ೭ ಗ್ರಾಮ ಪಂಚಾಯತ್‌ಗಳು ಮತದಾನವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದವು. ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮಮತದೇವಿ ಜಿ.ಎಸ್. ಹಾಗೂ ಕುಂದಾಪುರ ಉಪವಿಭಾಗಧಿಕಾರಿ ಮಹೇಶ್ಚಂದ್ರ ಅವರು ಈ ಗ್ರಾಮಗಳಿಗೆ ಭೇಟಿ ನೀಡಿ ಮತದಾನ ಮನವೊಲಿಕೆ ಮಾಡಿದ್ದರು, ಆದರೂ ಬೈಂದೂರು ತಾಲೂಕಿನ ಜಟ್ಕಲ್‌ನಲ್ಲಿ ಎಲ್ಲಾ ೧೮ ಸದಸ್ಯರು ಮತದಾನ ಬಹಿಷ್ಕರಿಸಿದ್ದಾರೆ. ಯಡಮೊಗೆ, ಚಿತ್ತೂರು, ಯಡೂರು, ಕುಂಙಡಿ, ಆಲೂರು ಹಾಗೂ ಕೆರಾಡಿ ಗ್ರಾಮಗಳ ಮತದಾರರಲ್ಲಿ ಕೆಲವು ಹಕ್ಕು ಚಲಾಯಿಸಲಿಲ್ಲ. ಕೆಲವು ಗ್ರಾಮ ಪಂಚಾಯತ್ ಸದಸ್ಯರು ಕೂಡಾ ಮತದಾನವನ್ನು ಬಹಿಷ್ಕಾರಿಸಿದ್ದಾರೆ. ಉಳಿದಂತೆ ಮತದಾನ ಸಾಂಗವಾಗಿ ಜರುಗಿತು. ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ ೧ ಗಂಟೆಯೊಳಗೆ ಶೇ. ೧೦೦ರಷ್ಟು ಮತದಾನ ಆಗಿತ್ತು.
ದ.ಕ. ಜಿಲ್ಲೆಯ ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯ ಶರತ್ ತಮ್ಮ ಮದುವೆಯ ಶುಭ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್‌ನಲ್ಲಿ ತನ್ನ ಹಕ್ಕು ಚಲಾಯಿಸಿದರು.
ವಿಧಾನಪರಿಷತ್ ಸದಸ್ಯರಾಗಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಇದೀಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದಾರೆ. ಈ ಹಿನ್ನೆಲೆ ಅವರಿಂದ ತೆರವಾಗಿರುವ ಸ್ಥಾನಕ್ಕೆ ಈ ಉಪ ಚುನಾವಣೆ ನಡೆದಿದೆ. ಬಿಜೆಪಿಯಿಂದ ಕಿಶೋರ್ ಬಿ.ಆರ್, ಕಾಂಗ್ರೆಸ್‌ನಿಂದ ರಾಜು ಪೂಜಾರಿ, ಎಸ್‌ಡಿಪಿಐನಿಂದ ಅನ್ವರ್ ಸಾದತ್ ಎಸ್. ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಸ್ಪರ್ಧಿಸುತ್ತಿದ್ದಾರೆ.