For the best experience, open
https://m.samyuktakarnataka.in
on your mobile browser.

ವಿವಾದಿತ ಹೇಳಿಕೆ ಸಮರ್ಥಿಸಿಕೊಂಡ ಜಮೀರ್

04:59 PM Dec 15, 2023 IST | Samyukta Karnataka
ವಿವಾದಿತ ಹೇಳಿಕೆ ಸಮರ್ಥಿಸಿಕೊಂಡ ಜಮೀರ್

ಹುಬ್ಬಳ್ಳಿ: ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಮುಸ್ಲಿಂ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಕೈ ಮುಗಿದು ನಮಸ್ಕರಿಸುತ್ತಾರೆ ಎಂಬ ವಿವಾದಿತ ಹೇಳಿಕೆಯನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಪುನಃ ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತೆಲಂಗಾಣದಲ್ಲಿ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ೧೭ ಮುಸ್ಲಿಮರಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ ೭ ಜನ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ ೫ ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ ೩ ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಕಾಂಗ್ರೆಸ್ ನಮಗೆ ಒಳ್ಳೆಯ ಅಧಿಕಾರ ಕೊಟ್ಟಿದೆ ಎಂದರು.
ನನ್ನ ಹೇಳಿಕೆಗೆ ಬಹಳ ವಿರೋಧ ವ್ಯಕ್ತವಾಗಿತ್ತು. ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಆದರೆ, ಅದೇ ವಿಚಾರವನ್ನು ಘಂಟಾಘೋಷವಾಗಿ ಹೇಳುತ್ತೇನೆ. ಸ್ವಾತಂತ್ರ‍್ಯ ಸಿಕ್ಕ ಬಳಿಕ ನಮ್ಮ ಸಮುದಾಯಕ್ಕೆ ಅಷ್ಟು ದೊಡ್ಡ ಸ್ಥಾನ ಯಾರೂ ಕೊಟ್ಟಿರಲಿಲ್ಲ. ನಮಗೆ ಈ ಬಾರಿ ಅಂತಹ ಅಧಿಕಾರ ಸಿಕ್ಕದೆ ಎಂದು ನಾನು ಭಾಷಣ ಮಾಡಿದ್ದೇನೆ ಎಂದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಇರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳಿದರು. ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣದಲ್ಲಿ ೩೫ ರಿಂದ ೩೬ ಜನರಿಗೆ ಜಾಮೀನು ಸಿಕ್ಕಿದೆ ಎಂಬ ಮಾಹಿತಿ ಇದೆ. ಗಲಭೆಯ ಬಗ್ಗೆ ಕೆಲವರು ಪುನರ್ ತನಿಖೆಗೆ ಮನವಿ ಮಾಡಿದ್ದರು. ಇದೀಗ ಪ್ರಕರಣ ನ್ಯಾಯಾಲಯದಲ್ಲಿಯೇ ತೀರ್ಮಾನ ಆಗಬೇಕು ಎಂದು ಸ್ಪಷ್ಟಪಡಿಸಿದರು.