For the best experience, open
https://m.samyuktakarnataka.in
on your mobile browser.

ವಿವಾದ ಬದಿಗಿಟ್ಟು ಒಂದಾಗಿ: ಆರೆಸ್ಸೆಸ್ ಕರೆ

10:16 PM Oct 06, 2024 IST | Samyukta Karnataka
ವಿವಾದ ಬದಿಗಿಟ್ಟು ಒಂದಾಗಿ  ಆರೆಸ್ಸೆಸ್ ಕರೆ

ಭರಣ್: ಭಾರತ ಒಂದು ಹಿಂದೂ ರಾಷ್ಟ್ರ. ಇಲ್ಲಿನ ಹಿಂದೂ ಸಮುದಾಯವು ತನ್ನ ಭದ್ರತೆಗಾಗಿ ಭಾಷೆ, ಪ್ರಾದೇಶಿಕತೆ ಹಾಗೂ ಜಾತಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯ ಹಾಗೂ ವಿವಾದಗಳನ್ನು ಬದಿಗಿಟ್ಟು ಒಗ್ಗೂಡಬೇಕು ಎಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ರಾಜಸ್ಥಾನದ ಬರಾನ್ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ನಡೆದಿರುವ ಸ್ವಯಂಸೇವಕ ಏಕತ್ರೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಇಲ್ಲಿ ಪುರಾತನ ಕಾಲದಿಂದ ವಾಸಿಸುತ್ತಿದ್ದರೂ ಹಿಂದೂ ಪದದ ವ್ಯಾಖ್ಯಾನ ಆನಂತರ ಹುಟ್ಟಿಕೊಂಡಿತು. ಹಿಂದೂಗಳು ಪ್ರತಿಯೊಬ್ಬರನ್ನು ತಮ್ಮವರಾಗಿ ಮಾಡಿಕೊಳ್ಳುತ್ತಾರೆ. ಅವರು ನಿರಂತರ ಮಾತುಕತೆ ಮೂಲಕ ಸೌಹಾರ್ದತಯುತವಾಗಿ ಬಾಳುತ್ತಾರೆ ಎಂದರು. ನಡವಳಿಕೆಯಲ್ಲಿ ಶಿಸ್ತು, ದೇಶದ ಕರ್ತವ್ಯಗಳತ್ತ ಕಟಿಬದ್ಧತೆ ಹಾಗೂ ಗುರಿ ಸಾಧನೆಗೆ ಸಮರ್ಪಣಾ ಮನೋಭಾವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಅವರು ಒತ್ತಿ ಹೇಳಿದರು. ಆರೆಸ್ಸೆಸ್ ಕಾರ್ಯನಿರ್ವಹಣೆ ಯಾಂತ್ರಿಕವಲ್ಲ,
ವಿಚಾರ ಆಧಾರಿತವಾದದ್ದು. ಈ ಸಂಘಟನೆಗೆ ಸರಿಸಾಟಿಯಾದ ಸಂಸ್ಥೆ ಇಲ್ಲ. ಕಾರ್ಯಕರ್ತರಿಂದ ಸಂಘದ ನಾಯಕರವರೆಗೆ, ಅವರ ಕುಟುಂಬಗಳು ಹಾಗೂ ಸಮಾಜದವರೆಗೆ ಎಲ್ಲರೂ ಬಹುವಿಸ್ತೃತ ರೀತಿಯಲ್ಲಿ ಸಂಘಟನೆಗೊಂಡು ಕಾರ್ಯೋನ್ಮುಖರಾಗುತ್ತಾರೆ ಎಂದವರು ವಿವರಿಸಿದರು. ಸಮುದಾಯಗಳಲ್ಲಿ ವ್ಯಾಪಕ ಸಂಪರ್ಕ ಬೆಳೆಸಿಕೊಳ್ಳಬೇಕು. ಸಮುದಾಯದ ಕೊರತೆಗಳನ್ನು ನೀಗಿಸುವ ಮೂಲಕ ಸಮಾಜವನ್ನು ಸಶಕ್ತೀಕರಣಗೊಳಿಸಲು ಪ್ರಯತ್ನಿಸಬೇಕೆಂದು ಅವರು ಕಾರ್ಯಕರ್ತರಿಗೆ ಸೂಚಿಸಿದರು.
ಸಾಮಾಜಿಕ ಸಾಮರಸ್ಯ, ನ್ಯಾಯ, ಆರೋಗ್ಯ, ಶಿಕ್ಷಣ ಮತ್ತು ಸ್ವಾವಲಂಬನೆ ಮೇಲೆ ಗಮನ ಕೇಂದ್ರೀಕರಿಸಬೇಕು. ಯಾವಾಗಲೂ ಸಕ್ರಿಯರಾಗುವ ಮೂಲಕ ಸಮಾಜದ ಮೂಲಘಟಕವಾದ ಕುಟುಂಬದಲ್ಲಿ ಸಾಮರಸ್ಯ, ಪರಿಸರ ಜಾಗೃತಿ, ಸ್ಥಳೀಯ ಮೌಲ್ಯಗಳು ಹಾಗೂ ನಾಗರಿಕ ಪ್ರಜ್ಞೆಯನ್ನೂ ಬೆಳೆಸಿಕೊಳ್ಳಬೇಕು ಎಂದೂ ಸಲಹೆ ನೀಡಿದರು. ಭಾರತ ಜಾಗತಿಕವಾಗಿ ಪಡೆದ ಮನ್ನಣೆ ಹಾಗೂ ನಿಲುವುಗಳು ಅದು ಬಲವರ್ಧನೆಗೊಳ್ಳಲು ಕಾರಣವಾಗಿದೆ. ದೇಶ ಸದೃಢಗೊಂಡಾಗ ಮಾತ್ರ ವಲಸೆ ಬಂದವರನ್ನು ರಕ್ಷಿಸಲು ಸಾಧ್ಯ ಎಂದರು.

Tags :