ವಿವಾಹ ನೋಂದಣಿ ಇನ್ನು ಸಲೀಸು
ಬೆಂಗಳೂರು: ರಾಜ್ಯದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ಇನ್ನು ಮುಂದೆ ಅತ್ಯಂತ ಸಲೀಸಾಗಲಿದೆ. ಕರ್ನಾಟಕ ಹಿಂದೂ ವಿವಾಹ ಕಾಯ್ದೆ(ಮ್ಯಾರೇಜ್ ಆ್ಯಕ್ಟ್)ಗೆ ತಿದ್ದುಪಡಿ ತರಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ಒದಗಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ಈಗಾಗಲೇ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಹಿಂದೂ ಮ್ಯಾರೇಜ್ ರಿಜಿಸ್ಟರ್ ಆಕ್ಟ್ಗೆ ತಿದ್ದುಪಡಿಯಾದಲ್ಲಿ ವಿವಾಹ ನೋಂದಣಿ ಸರಳೀಕರಣವಾಗಲಿದೆ. ಈ ಹಿಂದೆ ನೋಂದಣಿ ಕಚೇರಿಗಳಿಗೆ ತೆರಳುವ ಅನಿವಾರ್ಯತೆ ಇತ್ತು. ಆದರೆ ಇನ್ನು ಆನ್ಲೈನ್ ಮುಖೇನವೇ ನೋಂದಣಿಗೆ ಅವಕಾಶವಾಗಲಿದೆ. ಗ್ರಾಮ ಒನ್, ಕಾವೇರಿ೨ ಹಾಗೂ ಗ್ರಾಪಂಗಳ ಬಾಪೂಜಿ ಸೇವಾಕೇಂದ್ರಗಳಲ್ಲಿ ನೋಂದಣಿ ಮಾಡಬಹುದಾಗಿದೆ ಎಂದರು.
ಸಚಿವ ಸಂಪುಟದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಒಟ್ಟಾರೆ ೫೮೧೨.೨೫ ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಾವೇರಿ ಮೆಡಿಕಲ್ ಕಾಲೇಜು ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ೪೯೯ ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ ಕೊಡಲಾಗಿದೆ. ಸಹಕಾರ ಸಂಘಗಳ ನೋಂದಣಿ ಕಚೇರಿ ಸಮುಚ್ಚಯವಾದ ಸಹಕಾರಸೌಧವನ್ನು ಕರ್ನಾಟಕ ಗೃಹಮಂಡಳಿ ವತಿಯಿಂದ ನಿಮಿಸಲು ೧೪.೮೫ ಕೋಟಿ ಮೊತ್ತಕ್ಕೆ ಕ್ಯಾಬಿನೆಟ್ ಸಮ್ಮತಿಸಿದೆ.
೪೪೦ಕೋಟಿ ಸುಸ್ತಿಬಡ್ಡಿ ಮನ್ನಾ
ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಹಕಾರಿ ಸಾಲದ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಸುಸ್ತಿಬಡ್ಡಿ ಮನ್ನಾ ಮಾಡಲು ಸರ್ಕಾರ ಜ.೨೦ರಂದು ಹೊರಡಿಸಿದ್ದ ಆದೇಶಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಇದರಿಂದ ಒಟ್ಟಾರೆ ೪೪೦.೨೦ ಕೋಟಿ ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ. ೧೨೬ ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ೧೮ ಹಾಸ್ಟೆಲ್ ನಿರ್ಮಿಸಲು ಅನುಮತಿ ನೀಡಲಾಗಿದೆ.